ರಾಮನಗರ: ‘ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ನೇಮಕಾತಿ ಹಗರಣ ಸೇರಿದಂತೆ ಯಾವುದರಿಂದಲೂ ನಾವು ಹಿಂದೆ ಸರಿಯುವುದಿಲ್ಲ. ಹಗರಣದ ಹಿಂದೆ ಯಾರೇ ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ಇಂದಲ್ಲ ನಾಳೆ ಸತ್ಯ ಹೊರ ಬರಲೇಬೇಕು. ಈಗಾಗಲೇ ಸಿಐಡಿ ಮತ್ತು ಎಸ್ಐಟಿ ತನಿಖೆಯಾಗಿದೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದ್ದು, ಯಾರ ಮನೆ ಬಾಗಿಲಿಗಿ ಹೋಗಿ ಬೀಳುತ್ತದೊ ನೋಡೋಣ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಕೊಟ್ಟಿರುವ ಕುರಿತು ನಗರದ ಜಾನಪದ ಲೋಕದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇ.ಡಿ ದೂರನ್ನು ನಾನು ನೋಡಿಲ್ಲ. ಇನ್ನೂ ಮೂರು ಪ್ರಕರಣ ದಾಖಲಿಸಬೇಕು ಅಂತಿದ್ದಾರೆ. ಎಲ್ಲರದರ ಬಗ್ಗೆ ಕಾನೂನು ಅಭಿಪ್ರಾಯ ಪಡೆದು ಪರಿಶೀಲನೆ ಮಾಡುತ್ತೇವೆ’ ಎಂದರು.
ವೈಟ್ ವಾಷ್ ಆದ್ರಾ?: ‘ವಿರೋಧ ಪಕ್ಷಗಳ ನಾಯಕರ ಮೇಲೆ ಐ.ಟಿ ಮತ್ತು ಇ.ಡಿ ದಾಳಿ ನಡೆಸಿ ಸಾವಿರಾರು ಪ್ರಕರಣಗಳನ್ನು ದಾಖಲಿಸಿವೆ. ಆದರೆ, ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಶೇ 2ರಷ್ಟು ಕೂಡ ಆಗಿಲ್ಲ. ಈ ವಿಷಯವನ್ನು ಸ್ವತಃ ಗೃಹ ಸಚಿವ ಅಮಿತ್ ಶಾ ಅವರೇ ಅಧಿವೇಶನದಲ್ಲಿ ತಿಳಿಸಿದ್ದಾರೆ. ತಮ್ಮ ಮೇಲೆ ದಾಳಿಯಾಗುತ್ತಿದ್ದಂತೆ ಹಲವರು ಬಿಜೆಪಿ ಸೇರಿದರು. ಕೆಲವರು ಮುಖ್ಯಮಂತ್ರಿಯಾದರು. ಅವರೆಲ್ಲರನ್ನೂ ಇದೇ ಮೋದಿ ಮತ್ತು ಅಮಿತ್ ಶಾ ಹಿಂದೆ ಭ್ರಷ್ಟರು ಎಂದು ಕರೆದಿದ್ದರು. ಬಿಜೆಪಿ ಸೇರುತ್ತಿದ್ದಂತೆ ಅವರೆಲ್ಲರೂ ವಾಷಿಂಗ್ ಮಷಿನ್ನಲ್ಲಿ ವೈಟ್ ವಾಶ್ ಆದ್ರಾ?’ ಎಂದು ಖರ್ಗೆ ಕಿಡಿ ಕಾರಿದರು.
ಕತ್ತೆ ಕಾಯುತ್ತಿದ್ರಾ?: ‘ಖರ್ಗೆ ಅವರಿಗೂ ಯಂಗ್ ಇಂಡಿಯಾ ಟ್ರಸ್ಟ್ಗೂ ಏನು ಸಂಬಂಧ? 20 ವರ್ಷದ ಹಿಂದಿನ ವಿಷಯವನ್ನು ಇ.ಡಿ.ಯವರು ಈಗ ತೆಗೆದಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರ ಮೇಲೂ ಅನೇಕ ಪ್ರಕರಣ ದಾಖಲಿಸಿದ್ದಾರೆ. ರಾಬರ್ಟ್ ವಾದ್ರಾ ಸೇರಿದಂತೆ ಹಲವರ ಹೆಸರು ತೆಗೆದುಕೊಂಡಿದ್ದಾರೆ. ಅಂದಿನಿಂದ ಇವರೇನು ಕತ್ತೆ ಕಾಯುತ್ತಿದ್ರಾ? ಇದುವರೆಗೆ ಒಂದೂ ಪ್ರಕರಣ ಸಾಬೀತು ಮಾಡಿಲ್ಲ. ಸುಮ್ಮನೆ ದಾಳಿ ಮಾಡಿ ಗೂಬೆ ಕೂರಿಸುತ್ತಾರೆ. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ದಾಳಿ ಜಾಸ್ತಿಯಾಗಲಿದೆ. ಅದರಲ್ಲೂ ಬಿಜೆಪಿ, ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಮಾತನಾಡಿದರೆ ದಾಳಿಯಾಗಲಿದೆ’ ಎಂದು ಇ.ಡಿ ಕಾರ್ಯವೈಖರಿಗೆ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
‘ಸಾಕ್ಷಿ ಆಧರಿಸಿಯೇ ಕ್ಲೀನ್ಚಿಟ್’
‘ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆಯೇ ಮಾಜಿ ಸಚಿವ ನಾಗೇಂದ್ರ ಅವರಿಗೆ ಸಿಐಡಿ ಕ್ಲೀನ್ಚಿಟ್ ನೀಡಿದೆ. ಹಗರಣದ ಶೇ 90ರಷ್ಟು ಹಣ ವಸೂಲಾಗಿದೆ. ವಿಚಾರಣೆ ವೇಳೆ ಯಾವುದೇ ಹಣ ಪತ್ತೆಯಾಗಿಲ್ಲ. ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ. ಇದೇ ಪ್ರಕರಣದ ತನಿಖೆಯ ಐ.ಟಿ ಮತ್ತು ಇ.ಡಿಯಿಂದಲೂ ನಡೆಯುತ್ತಿದೆ’ ಎಂದು ನಾಗೇಂದ್ರಗೆ ಕ್ಲೀನ್ಚಿಟ್ ಕುರಿತ ಪ್ರಶ್ನೆಗೆ ಖರ್ಗೆ ಪ್ರತಿಕ್ರಿಯಿಸಿದರು.
261127-14-1515662760
