ಬೆಂಗಳೂರು: ರಾಜ್ಯದಲ್ಲಿನ ಬಹುತೇಕ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಲಾಭದಲ್ಲಿರುವುದರಿಂದ 2027ರ ಏಪ್ರಿಲ್ನಿಂದ ವಿದ್ಯುತ್ ದರವು ಯೂನಿಟ್ಗೆ ಸರಾಸರಿ 16ರಿಂದ 18 ಪೈಸೆ ಕಡಿಮೆಯಾಗಲಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್ಗೆ 30ರಿಂದ 35 ಪೈಸೆ ದರ ಇಳಿಕೆಯಾಗಲಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಇದೇ 30ರಂದು ಎಸ್ಕಾಂಗಳು ಪ್ರತ್ಯೇಕವಾಗಿ ವಾರ್ಷಿಕ ವರದಿಯನ್ನು ಸಲ್ಲಿಸಲಿವೆ. ಅದರಲ್ಲಿ ದರ ಇಳಿಸುವಂತೆ ಆಯೋಗಕ್ಕೆ ಮನವಿ ಮಾಡಲಾಗುತ್ತದೆ ಎಂದು ಇಂಧನ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹೊರತುಪಡಿಸಿ, ಉಳಿದ ಕಂಪನಿಗಳು ಲಾಭದಲ್ಲಿವೆ. ಹೀಗಾಗಿ ಮುಂಬರುವ ಆರ್ಥಿಕ ವರ್ಷದಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಅಗತ್ಯವಿಲ್ಲ. ಅಲ್ಲದೆ 2025–26ನೇ ಸಾಲಿನ ಲಾಭದ ಹಣವನ್ನು ಗ್ರಾಹಕರಿಗೆ ವರ್ಗಾಯಿಸುವ ಉದ್ದೇಶದಿಂದ ದರ ಇಳಿಕೆ ಮಾಡುವಂತೆ ಮನವಿ ಮಾಡಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ವಿದ್ಯುತ್ ಸೋರಿಕೆ ಮತ್ತು ಪ್ರಸರಣ ನಷ್ಟ ಕಡಿಮೆ ಆಗಿರುವುದರಿಂದ ಎಸ್ಕಾಂಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿವೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಬೆಸ್ಕಾಂ) 2025-26ನೇ ಸಾಲಿನಲ್ಲಿ ₹293.62 ಕೋಟಿ ಲಾಭ ಗಳಿಸಿದೆ. ಉಳಿದ ಕಂಪನಿಗಳು ಬಹುತೇಕ ಇದೇ ಸ್ಥಿತಿಯಲ್ಲಿವೆ’ ಎಂದು ಅವರು ವಿವರಿಸಿದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ (ಹೆಸ್ಕಾಂ) ಆದಾಯದಲ್ಲಿ ಕಳೆದ ವರ್ಷ ₹604.49 ಕೋಟಿ ಖೋತಾ ಆಗಿತ್ತು. ಈ ವರ್ಷವೂ ಕಂಪನಿಯ ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ. ಹೀಗಾಗಿ ಆ ಕಂಪನಿಯು ದರ ಹೆಚ್ಚಳ ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಕೆಇಆರ್ಸಿ ಹೊರಡಿಸಿದ್ದ ಬಹುವಾರ್ಷಿಕ ದರ ಪಟ್ಟಿಯ ಆದೇಶದ ಪ್ರಕಾರ 2027ರ ಏಪ್ರಿಲ್ನಿಂದ ಯೂನಿಟ್ಗೆ 34 ಪೈಸೆ ದರ ಹೆಚ್ಚಳವಾಗಬೇಕಿತ್ತು. ಆದರೆ, ಈಗ ದರ ಕಡಿಮೆ ಮಾಡುವಂತೆ ಮನವಿ ಮಾಡುತ್ತಿರುವ ಕಾರಣ, ಏರಿಕೆ ಜಾರಿಗೆ ಬರುವ ಸಾಧ್ಯತೆ ಇಲ್ಲ. 2026–27ನೇ ಸಾಲಿಗೆ ಜಾರಿಯಲ್ಲಿರುವ ದರದಲ್ಲೇ ಕಡಿಮೆಯಾಗಲಿದೆ. ದರ ಇಳಿಕೆಯಲ್ಲಿ ಕಂಪನಿವಾರು ಸ್ವಲ್ಪ ವ್ಯತ್ಯಾಸ ಇರಲಿದೆ ಎಂದು ಅವರು ತಿಳಿಸಿದರು.
ಸಬ್ಸಿಡಿ ಮರು ಪಾವತಿ ಹೊರೆ ತಗ್ಗಲಿದೆ: ವಿದ್ಯುತ್ ದರ ಇಳಿಕೆಯ ಲಾಭ ಗ್ರಾಹಕರಿಗೆ ಅಷ್ಟೇ ಅಲ್ಲದೆ, ಹಣಕಾಸು ಇಲಾಖೆಗೂ ಆಗಲಿದೆ. ರೈತರು ಬಳಸುವ ಹತ್ತು ಅಶ್ವಶಕ್ತಿ ಒಳಗಿನ ನೀರಾವರಿ ಪಂಪ್ಸೆಟ್ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸುತ್ತಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರವು ಸಂಬಂಧಪಟ್ಟ ಕಂಪನಿಗಳಿಗೆ ಮರುಪಾವತಿ ಮಾಡುತ್ತದೆ. ಗೃಹ ಜ್ಯೋತಿ ಯೋಜನೆಯಲ್ಲೂ ಇದೇ ರೀತಿಯ ವ್ಯವಸ್ಥೆ ಇದೆ. ವಿದ್ಯುತ್ ದರ ಕಡಿಮೆ ಮಾಡುವುದರಿಂದ, ಸರ್ಕಾರವು ಕಂಪನಿಗಳಿಗೆ ಮರು ಪಾವತಿ ಮಾಡಬೇಕಾದ ಒಟ್ಟಾರೆ ಮೊತ್ತ ಇಳಿಕೆಯಾಗಲಿದೆ.
ಕೃಷಿಗೆ ಬಳಸುವ ವಿದ್ಯುತ್ಗೆ ಪ್ರಸ್ತುತ ಬೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್ಗೆ ₹6.57, ಮೆಸ್ಕಾಂ ವ್ಯಾಪ್ತಿಯಲ್ಲಿ ₹7.40, ಚೆಸ್ಕಾಂ ವ್ಯಾಪ್ತಿಯಲ್ಲಿ ₹7.73, ಹೆಸ್ಕಾಂ ವ್ಯಾಪ್ತಿಯಲ್ಲಿ ₹7.73 ಹಾಗೂ ಜೆಸ್ಕಾಂ ವ್ಯಾಪ್ತಿಯಲ್ಲಿ ₹7.79 ನಿಗದಿಪಡಿಸಲಾಗಿದೆ. ಆ ಪ್ರಕಾರವೇ ಲೆಕ್ಕಾಚಾರ ಮಾಡಿ ಹಣಕಾಸು ಇಲಾಖೆ ಕಂಪನಿಗಳಿಗೆ ಹಣ ಪಾವತಿಸುತ್ತಿದೆ.
ದರ ಇಳಿಕೆ ಬಳಿಕ ಬೆಸ್ಕಾಂ ಕಂಪನಿಯೊಂದರಲ್ಲೇ ಸುಮಾರು ₹1,300 ಕೋಟಿ ಹಣ ಗ್ರಾಹಕರಿಗೆ ವರ್ಗಾವಣೆಯಾಗಲಿದೆ.
ಲಾಭಕ್ಕೆ ಕಾರಣ ಏನು?
`ಹೆಚ್ಚಿದ ಆದಾಯ, ವಿದ್ಯುತ್ ಖರೀದಿಯಲ್ಲಿ ಸಮರ್ಪಕ ನಿರ್ವಹಣೆ ಮತ್ತು ವೆಚ್ಚದಲ್ಲಿನ ಇಳಿಕೆ, ಆರ್ಥಿಕ ಶಿಸ್ತು ಪಾಲನೆ ಮೊದಲಾದ ಕ್ರಮಗಳಿಂದಾಗಿ ಲಾಭ ಗಳಿಸಲು ಸಾಧ್ಯವಾಗಿದೆ' ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
'ಸಮರ್ಪಕ ಬಿಲ್ಲಿಂಗ್ ವ್ಯವಸ್ಥೆಯು ಆರ್ಥಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರೋಬ್ ರೀಡಿಂಗ್ ವ್ಯವಸ್ಥೆಯಿಂದ ಸಿಬ್ಬಂದಿಯ ಹಸ್ತಕ್ಷೇಪ ಕಡಿಮೆಯಾಗಿದ್ದು, ಬಿಲ್ಲಿಂಗ್ನಲ್ಲಿ ನಿಖರತೆ ಹೆಚ್ಚಿದೆ. ಅಲ್ಲದೆ ಸ್ಮಾರ್ಟ್ ಮೀಟರ್ ಬಳಕೆಯಿಂದಾಗಿ ಗ್ರಾಹಕರು ಬಳಸುವ ವಿದ್ಯುತ್ನ ನಿಖರ ದಾಖಲಾತಿ ಸುಲಭವಾಗಿದೆ' ಎಂದು ವಿವರಿಸಿದರು.
