ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಹೆಸರಿನಲ್ಲಿ ನಕಲಿ ಲೀಗಲ್ ನೋಟಿಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸುವಿಜ್ಞಾ ಶರ್ಮಾ ಅವರಿಗೆ ಶಾರುಖ್ ಖಾನ್ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ವರದಿಗಳನ್ನು ಶಾರುಖ್ ಖಾನ್ ಅವರ ಅಧಿಕೃತ ಕಾನೂನು ತಂಡ ಸಂಪೂರ್ಣವಾಗಿ ತಳ್ಳಿಹಾಕಿದೆ.
ಶಾರುಖ್ ಖಾನ್ ಅವರ ಅಧಿಕೃತ ಕಾನೂನು ಸಂಸ್ಥೆ ‘ಹಿರಾನಿ ಆ್ಯಂಡ್ ಅಸೋಸಿಯೇಟ್ಸ್’ ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ‘ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ನೋಟಿಸ್ ಅನ್ನು ತಾವು ಕಳುಹಿಸಿಲ್ಲ. ಶಾರುಖ್ ಖಾನ್ ಕೂಡ ಯಾರಿಗೂ ನೋಟಿಸ್ ನೀಡುವಂತೆ ಸೂಚಿಸಿಲ್ಲ. ಸುದ್ದಿ ಪ್ರಕಟಿಸುವ ಮುನ್ನ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸುವಂತೆ ಮಾಧ್ಯಮಗಳಿಗೆ ಮನವಿ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಈ ವಿವಾದ ಶುರುವಾಗಿದ್ದು ಇತ್ತೀಚೆಗೆ ನಡೆದ ‘ಗ್ಲೋಬಲ್ ಪೀಸ್ ಆನರ್ಸ್ 2026’ ಕಾರ್ಯಕ್ರಮದ ವಿಡಿಯೋದಿಂದ. ಆ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ, ಸದ್ಗುರು ಮತ್ತು ಶಾರುಖ್ ಖಾನ್ ಮಾತನಾಡುತ್ತಿದ್ದ ದೃಶ್ಯವಿತ್ತು. ಆ ವಿಡಿಯೋಗೆ ಆಡಿಯೋ ಇರಲಿಲ್ಲ. ಆದರೂ ಅನಂತ್ ಅಂಬಾನಿ ಶಾರುಖ್ ಖಾನ್ಗೆ ಸುಮ್ಮನಿರಲು ಹೇಳಿದ್ದಾರೆ ಎಂದು ಸುವಿಜ್ಞಾ ಶರ್ಮಾ ರೀಲ್ಸ್ ಮೂಲಕ ವ್ಯಾಖ್ಯಾನಿಸಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು.
ತಮ್ಮ ವಿಡಿಯೋಗೆ ಪ್ರತಿಯಾಗಿ ಶಾರುಖ್ ಖಾನ್ ಕಾನೂನು ತಂಡದಿಂದ ನೋಟಿಸ್ ಬಂದಿದೆ ಎಂದು ಸುವಿಜ್ಞಾ ಮಂಗಳವಾರ ಹೇಳಿಕೊಂಡಿದ್ದರು. 48 ಗಂಟೆಯೊಳಗೆ ವಿಡಿಯೋ ತೆಗೆದುಹಾಕುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ ಎಂದು ಅವರು ಪೋಸ್ಟ್ ಹಾಕಿದ್ದರು. ಆದರೆ ಸುವಿಜ್ಞಾ ಪೋಸ್ಟ್ಗೆ ಕಾಮೆಂಟ್ ಮಾಡಿರುವ ಶಾರುಖ್ ವಕೀಲರು, ಆ ನೋಟಿಸ್ ನಕಲಿ ಮತ್ತು ದಾರಿತಪ್ಪಿಸುವಂತಿದೆ ಎಂದು ನೇರವಾಗಿಯೇ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಅವಕಾಶಕ್ಕಾಗಿ ಅಂಗಲಾಚಿದ ಸಹ ನಟನ ಸಹಾಯಕ್ಕೆ ಧಾವಿಸಿದ ಶಾರುಖ್ ಖಾನ್
ಸಿನಿಮಾ ವಿಚಾರಕ್ಕೆ ಬರುವುದಾದರೆ ಶಾರುಖ್ ಖಾನ್ ಸದ್ಯ ‘ಕಿಂಗ್’ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಆಕ್ಷನ್ ಸಿನಿಮಾ ಡಿಸೆಂಬರ್ 24ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ‘ಡಂಕಿ’ ಬಳಿಕ ತೆರೆಗೆ ಬರುತ್ತಿರುವ ಶಾರುಖ್ ಅವರ ಮೊದಲ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಸುಹಾನಾ ಖಾನ್, ದೀಪಿಕಾ ಪಡುಕೋಣೆ ಮತ್ತು ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

