ಮೈಸೂರು: ಮಹಾತ್ಮರ ಬಗ್ಗೆ ಲಘುವಾದ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಸಾಂವಿಧಾನಿಕ ಹಕ್ಕಾಗಿದ್ದರೂ ಅದನ್ನು ಬಳಸುವಾಗ ಎಚ್ಚರ ವಹಿಸಬೇಕು’ ಎಂದಿದ್ದಾರೆ.
‘ರವಿ ಹಂಜ್ ರಚಿಸಿರುವ ‘ಬಸವ ಮಂಟಪ’ ಕೃತಿ ವಿವಾದಾಸ್ಪದ ಹಾಗೂ ಚರ್ಚಾಸ್ಪದವಾಗಿದೆ. ಅವರು ಬಸವಣ್ಣನವರ ಕುರಿತು ವ್ಯಕ್ತಪಡಿಸಿರುವ ಕೆಲವು ಮಾತುಗಳು ಆಕ್ಷೇಪಾರ್ಹವೂ ಆಗಿವೆ. ಇದು ಎಲ್ಲರ ಮನಸ್ಸಿಗೆ ನೋವು ಉಂಟು ಮಾಡುವುದಾಗಿದೆ. ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಗಮನಿಸಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹ. ಇನ್ಮುಂದೆ, ಇಂತಹ ಸಂಗತಿಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯವಾಗಿದೆ’ ಎಂದು ತಿಳಿಸಿದ್ದಾರೆ.
‘ನಾಡಿನಲ್ಲಿ ಸಾಧು-ಸಂತರು, ಶರಣರು, ದಾಸರು... ಹೀಗೆ ಮಹಾತ್ಮರ ದೊಡ್ಡ ಪರಂಪರೆಯೇ ಇದೆ. ಪ್ರತಿಯೊಬ್ಬರ ಸಾಧನೆ, ಸಿದ್ಧಿ, ಕೊಡುಗೆಗಳು ಅಪಾರವಾದುವು.
ಇಂತಹ ಮಹಾತ್ಮರ ಸಾಲಿನಲ್ಲಿ ಜಗಜ್ಯೋತಿ ಬಸವೇಶ್ವರರು ಪ್ರಮುಖರಲ್ಲಿ ಒಬ್ಬರು. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ನಡೆದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಗಳ ರೂವಾರಿ. ಸಮಾಜದ ಎಲ್ಲ ವರ್ಗದವರನ್ನೂ ತೆಕ್ಕೆಯೊಳಗೆ ತೆಗೆದುಕೊಂಡು ಹೊಸ ಮನ್ವಂತರಕ್ಕೆ ಕಾರಣರಾದವರು. ನಡೆ–ನುಡಿಯಲ್ಲಿ ಸಮನ್ವಯತೆ ಹೊಂದಿದ್ದವರು. ಪಾರದರ್ಶಕವಾದ ಬದುಕು ನಡೆಸಿದವರು. ಅಂತಹ ಯಾರೇ ಮಹಾಪುರುಷರ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

