ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಕರ್ತವ್ಯದಲ್ಲಿರುವ ಅಥವಾ ನಿವೃತ್ತರಾದ ಮುಖ್ಯ ಕಾರ್ಯದರ್ಶಿ ಅಥವಾ ಕೇಂದ್ರ ಸೇವೆಯ ಕಾರ್ಯದರ್ಶಿಯನ್ನು ಅಧ್ಯಕ್ಷರು ಹಾಗೂ ಸದಸ್ಯರನ್ನಾಗಿ ನೇಮಿಸಬೇಕು. ಅವರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಮುಖ್ಯಮಂತ್ರಿ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕ ಇರಬೇಕು’ ಎಂದು ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದ ಸದನ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಮತ್ತು ಆಯೋಗದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರುವ ಉದ್ದೇಶದಿಂದ ದೇಶಪಾಂಡೆ ನೇತೃತ್ವದಲ್ಲಿ ವಿಧಾನಸಭೆ ಸದಸ್ಯರನ್ನು ಒಳಗೊಂಡ ಸದನ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ವಿಧಾನಸಭಾಧ್ಯಕ್ಷ ಜಿ.ಎಸ್‌. ಪಾಟೀಲ ಅವರಿಗೆ ಬುಧವಾರ ವರದಿ ಸಲ್ಲಿಸಿದೆ.

15 ಬಾರಿ ಸಭೆ ಸೇರಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಹಿಂದಿನ ನಾಲ್ವರು ಮುಖ್ಯ ಕಾರ್ಯದರ್ಶಿಗಳು, ಕೆಪಿಎಸ್‌ಸಿಯಲ್ಲಿ ಹಿಂದೆ ಕಾರ್ಯನಿರ್ವಹಿಸಿದವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುಖ್ಯಸ್ಥರು ಸೇರಿದಂತೆ ಅನೇಕರ ಜೊತೆ ಚರ್ಚಿಸಿ, ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಕಾರ್ಯ ಸ್ವರೂಪ ಅಧ್ಯಯನ ಮಾಡಿ ಸಮಿತಿಯು ಈ ವರದಿ ಮತ್ತು ಶಿಫಾರಸುಗಳನ್ನು ನೀಡಿದೆ.

ಕೆಪಿಎಸ್‌ಸಿ ಕಾರ್ಯವೈಖರಿಯನ್ನು ಸುಧಾರಿಸಿ, ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಆಡಳಿತಾತ್ಮಕ, ಪರೀಕ್ಷಾ ಪ್ರಕ್ರಿಯೆ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು, ಮೌಲ್ಯಮಾಪನ, ಸಂದರ್ಶನ, ತಂತ್ರಜ್ಞಾನ ಮತ್ತು ಭದ್ರತಾ ಕ್ರಮಗಳು ಹಾಗೂ ಆಯೋಗಕ್ಕೆ ಸರ್ಕಾರದ ಧನ ಸಹಾಯ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಶಿಫಾರಸುಗಳನ್ನು ಮಾಡಿರುವ ಸಮಿತಿಯು, ಯುಪಿಎಸ್‌ಸಿ ಮಾದರಿಗಳನ್ನು ಅನುಸರಿಸುವಂತೆ ಸಲಹೆ ನೀಡಿದೆ. 

ಸಮಿತಿಯ ಶಿಫಾರಸುಗಳೇನು?:

ಯುಪಿಎಸ್‌ಸಿ ಮಾದರಿಯಲ್ಲಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯನ್ನು ರಾಜಕೀಯದಿಂದ ದೂರವಿಟ್ಟು, ನಿಷ್ಠಾವಂತ, ಪ್ರಾಮಾಣಿಕ ವ್ಯಕ್ತಿತ್ವ ಇರುವ, ಅತ್ಯುತ್ತಮ ಕಾರ್ಯಕ್ಷಮತೆಯ ದಾಖಲೆ ಹೊಂದಿರುವವರನ್ನು ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರನ್ನಾಗಿ ನೇಮಿಸಬೇಕು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು, ವಿಶ್ವವಿದ್ಯಾಲಯಗಳ ಕುಲಪತಿಗಳು, ನಿವೃತ್ತ ಸೇನಾ ಮುಖ್ಯಸ್ಥರು, ರಾಷ್ಟ್ರೀಯ ಮಹತ್ವ ಹೊಂದಿರುವ ಸಂಸ್ಥೆಗಳ ಮುಖ್ಯಸ್ಥರು, ಪದ್ಮ ಪ್ರಶಸ್ತಿಗಳ ಪುರಸ್ಕೃತರನ್ನು ಆಯೋಗಕ್ಕೆ ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಬೇಕು. ಆಯೋಗದ ಕಾರ್ಯದರ್ಶಿ, ಪರೀಕ್ಷಾ ನಿಯಂತ್ರಕರು, ಜಂಟಿ ಪರೀಕ್ಷಾ ನಿಯಂತ್ರಕರ ಅಧಿಕಾರ ಅವಧಿ ಕನಿಷ್ಠ 3 ವರ್ಷಗಳಿಗೆ ನಿಗದಿಪಡಿಸಬೇಕು. ಅಲ್ಲದೆ, ಈ ಮೂವರ ಕಾರ್ಯಗಳ ಪ್ರತ್ಯಾಯೋಜನೆ ಆಗಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಹುದ್ದೆಗಳ ಸಂಖ್ಯೆ ಎಷ್ಟೇ ಇದ್ದರೂ ಯುಪಿಎಸ್‌ಸಿ ಮಾದರಿಯಲ್ಲಿ ಪ್ರತಿವರ್ಷ ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಯುಪಿಎಸ್‌ಸಿ ಮಾದರಿಯಂತೆ, ಅಧಿಸೂಚನೆ ಹೊರಡಿಸುವುದರಿಂದ ಆರಂಭಿಸಿ ನೇಮಕಾತಿ ಆದೇಶ ನೀಡುವವರೆಗೆ ಪ್ರತಿ ಕ್ಯಾಲೆಂಡರ್‌ ವರ್ಷದ ಆರಂಭದಲ್ಲಿಯೇ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಬೇಕು. ಕರ್ನಾಟಕ ಎಂಜಿನಿಯರಿಂಗ್ ಸರ್ವೀಸ್‌, ಲೋಕೋಪಯೋಗಿ, ಜಲಸಂಪನ್ಮೂಲ, ಪೌರಾಡಳಿತ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಎಂಜಿನಿಯರಿಂಗ್‌ ಹುದ್ದೆಗಳಿಗೆ ಯುಪಿಎಸ್‌ಸಿ ನಡೆಸುವ ‘ಭಾರತ್‌ ಎಂಜಿನಿಯರಿಂಗ್‌ ಸರ್ವಿಸ್‌’ ಮಾದರಿಯಲ್ಲಿ ‘ಕರ್ನಾಟಕ ಎಂಜಿನಿಯರಿಂಗ್‌ ಸರ್ವಿಸ್‌’ ಪರೀಕ್ಷೆಯನ್ನು ಒಂದೇ ಆಯ್ಕೆ ಪ್ರಕ್ರಿಯೆ ಮೂಲಕ ನಡೆಸಬೇಕು. ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗಲೇ ಇಲಾಖೆಗಳ ಆಯ್ಕೆ ಕುರಿತು ಅಭ್ಯರ್ಥಿಗಳು ಆದ್ಯತೆಯನ್ನು ನಮೂದಿಸಿರಬೇಕು ಎಂದೂ ಸಮಿತಿ ಶಿಫಾರಸಿನಲ್ಲಿ ಹೇಳಿದೆ.

'ಸಂದರ್ಶನ' ಸಮಿತಿ ಹೀಗಿರಲಿ...

ಸಂದರ್ಶನದ (ವ್ಯಕ್ತಿತ್ವ ಪರೀಕ್ಷೆ) ಘನತೆ ಕಾಪಾಡಲು ಆಯ್ಕೆ ಸಮಿತಿಯಲ್ಲಿ ಒಬ್ಬರು ಸದಸ್ಯರು, ಮೂವರು ತಜ್ಞರು ಮಾತ್ರ ಇರಬೇಕು. ಲಿಖಿತ ಪರೀಕ್ಷೆ ಸೇರಿದಂತೆ ಇತರ ಮಾಹಿತಿ ಸಂದರ್ಶಕರಿಗೆ ತಿಳಿಯದಂತೆ ಗೋಪ್ಯತೆ ಕಾಪಾಡಬೇಕು. ಅಭ್ಯರ್ಥಿಗಳ ಕೋಡ್ ಮಾತ್ರ ಸಂದರ್ಶಕರಿಗೆ ಗೊತ್ತಿರಬೇಕು. ಯುಪಿಎಸ್ಸಿ ಮಾದರಿಯಲ್ಲಿ ಸಂದರ್ಶನದಲ್ಲಿ ಅಭ್ಯರ್ಥಿಯೇ ಸಂದರ್ಶನ ಸಮಿತಿ ಅನ್ನು ಆಯ್ಕೆ ಮಾಡಿಕೊಳ್ಳುವ ಪದ್ಧತಿ ಜಾರಿಗೊಳಿಸಬೇಕು.

ಸಂದರ್ಶನದಲ್ಲಿ ಸಮಿತಿಯ ಸದಸ್ಯರು ನೀಡುವ ಅಂಕಗಳನ್ನು ಸರಾಸರಿ ತೆಗೆದುಕೊಳ್ಳುವುದಷ್ಟೇ ಅಲ್ಲ, ಅಂಕಗಳಲ್ಲಿರುವ ವ್ಯತ್ಯಾಸವನ್ನು ವೈಜ್ಞಾನಿಕವಾಗಿ ಪರಿಗಣಿಸಿ ಅಂತಿಮ ಅಂಕ ನಿರ್ಧರಿಸಲು ಒಂದು ನಿಗದಿತ ಫಾರ್ಮುಲಾ ಅಥವಾ ಮಾಡರೇಷನ್ ಮೆಕಾನಿಸಮ್ ಅಳವಡಿಸಬೇಕು.

ಸಂದರ್ಶನ ಇಲ್ಲದ ಗ್ರೂಪ್ 'ಸಿ' ಹುದ್ದೆಗಳ ನೇಮಕಾತಿಯೂ ಸೇರಿದಂತೆ ಒಎಂಆರ್ ಶೀಟ್ ಆಧಾರಿತ ಪರೀಕ್ಷೆಗಳನ್ನು ಕೆಇಎ ವತಿಯಿಂದ ನಡೆಸಬೇಕು. ಯುಪಿಎಸ್‌ಸಿ ಮಾದರಿಯಲ್ಲಿ ಗ್ರೂಪ್ 'ಎ' ಮತ್ತು 'ಬಿ' ಹುದ್ದೆಗಳಿಗೆ ಮಾತ್ರ ಕೆಪಿಎಸ್‌ಸಿ ಪರೀಕ್ಷೆ ನಡೆಸಬೇಕು. ಅಭ್ಯರ್ಥಿಗಳು ಹೆಚ್ಚು ಇರುವ ಹುದ್ದೆಗಳಿಗೆ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಮಾಡಲು ಕಡ್ಡಾಯವಾಗಿ ಎರಡು ಹಂತದ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

ಪ್ರಮುಖ ಶಿಫಾರಸುಗಳು

* ಜಂಟಿ ಪರೀಕ್ಷಾ ನಿಯಂತ್ರಕ ಹುದ್ದೆಯನ್ನು ಖಾಲಿ ಬಿಡಬಾರದು

* ಗೋಪ್ಯತೆ ಕಾಪಾಡಲು ಆಯೋಗದ ಶೇ 50ರಷ್ಟು ಸಿಬ್ಬಂದಿಯನ್ನು ಸಚಿವಾಲಯ ಸೇರಿದಂತೆ ಇತರ ಇಲಾಖೆಗಳಿಂದ 3 ವರ್ಷಕ್ಕೊಮ್ಮೆ ನಿಯೋಜನೆ ಮೇಲೆ ನೇಮಿಸಬೇಕು

* ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಳ್ಳಬಾರದು

* ಆಯೋಗದಲ್ಲಿ ಪ್ರತ್ಯೇಕ ಕಾನೂನು ಘಟಕ ಸ್ಥಾಪಿಸಬೇಕು

* ಭಾಷಾಂತರ ಸಮಸ್ಯೆ ತಪ್ಪಿಸಲು ಪ್ರಶ್ನೆಗಳ ಕರಡನ್ನು ತಜ್ಞರಿಂದ ಭಾಷಾಂತರಿಸಿ, ಸುಲಭ, ಸಾಮಾನ್ಯ ಮತ್ತು ಕಷ್ಟದ ಪ್ರಶ್ನೆಗಳಿರುವ 'ಪ್ರಶ್ನೆಗಳ ಬ್ಯಾಂಕ್ ಸಿದ್ಧಪಡಿಸಬೇಕು

* 'ಪ್ರಶ್ನೆಗಳ ಬ್ಯಾಂಕ್' ಅನ್ನು ಗಣಕಯಂತ್ರಕ್ಕೆ ಅಳವಡಿಸಿ ರ್ಯಾಂಡಮ್ ಆಗಿ ಆಯ್ಕೆ ಮಾಡಿ ಪ್ರಶ್ನೆಪತ್ರಿಕೆ ತಯಾರಿಸಬೇಕು

* ಅರ್ಜಿ ಸಲ್ಲಿಸಿದ ಕೊನೆಯ ದಿನದಿಂದ ಬಹು ಆಯ್ಕೆಯ ಪ್ರಶ್ನೆಯ ಆಧಾರಿತ ಪರೀಕ್ಷೆ ನಡೆಸಿ ಆಯ್ಕೆಗೆ 6 ತಿಂಗಳು, ಗೆಜೆಟೆಡ್ ಪ್ರೊಬೇಷನರಿ ಹೊರತಾದ ವಿಷಯಾಧಾರಿತ ಹುದ್ದೆಗಳಿಗೆ ಆಯ್ಕೆಗೆ 9 ತಿಂಗಳು, ಗೆಜೆಟೆಡ್ ಪ್ರೊಬೇಷನರಿ

* ಹುದ್ದೆಗಳ ಪರೀಕ್ಷೆಗೆ 12 ತಿಂಗಳಲ್ಲಿ ಫಲಿತಾಂಶ ಪ್ರಕಟಿಸಬೇಕು.

* ಇಲಾಖಾ ಪರೀಕ್ಷೆಗಳನ್ನು ಸಂಬಂಧಪಟ್ಟ ಇಲಾಖೆಗಳೇ ಮಾಡಬೇಕು

* ಯುಪಿಎಸ್‌ಸಿ ಮಾದರಿಯಲ್ಲಿ ಒಂದು ಬಾರಿ ನೋಂದಣಿ (ಒಟಿಆರ್) ಅಥವಾ 4 ಹಂತದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜಾರಿಗೆ ತರಬೇಕು

* ಅರ್ಜಿ ಸಲ್ಲಿಸುವಾಗ ಲೈವ್ ಫೋಟೊ ಅಪ್‌ಲೋಡ್ ಮಾಡುವ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಮುಖದ ದೃಢೀಕರಣ ವ್ಯವಸ್ಥೆ ಜಾರಿಗೆ ತರಬೇಕು

* ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದಲ್ಲಿಯೇ ಮುದ್ರಿಸುವಂತಾಗಬೇಕು

* ಪ್ರಶ್ನೆಪತ್ರಿಕೆ ಆಯ್ಕೆ ಹಾಗೂ ಗೋಪ್ಯತೆ ಹೊಣೆ ಪರೀಕ್ಷಾ ನಿಯಂತ್ರಕರದ್ದು ಆಗಿರಬೇಕು

-ಆರ್‌.ವಿ. ದೇಶಪಾಂಡೆ, ಅಧ್ಯಕ್ಷ, ಸದನ ಸಮಿತಿಕೆಪಿಎಸ್‌ಸಿ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲ. ನನ್ನ ನೇತೃತ್ವದ ಸದನ ಸಮಿತಿಯು ಸಭಾಧ್ಯಕ್ಷರಿಗೆ ವರದಿ ಸಲ್ಲಿಸಿದ್ದು, ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ.-ಎಸ್‌. ಸುರೇಶ್‌ ಕುಮಾರ್ ಸದಸ್ಯ, ಸದನ ಸಮಿತಿಎಲ್ಲ ಸದಸ್ಯರು ಒಮ್ಮತದಿಂದ. ಒಮ್ಮನಸ್ಸಿನಿಂದ, ಸದ್ಭಾವನೆಯಿಂದ, ಸದುದ್ದೇಶದಿಂದ ಈ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ