ಬೇಲೂರು(ಹಾಸನ): ಬೇಲೂರು ತಾಲ್ಲೂಕಿನ ಅರಣ್ಯ ಪ್ರದೇಶ ವ್ಯಾಪ್ತಿಯಿಂದ ಓಡಿಸಲಾಗಿದ್ದ 38 ಆನೆಗಳಲ್ಲಿ ಕೆಲ ಆನೆಗಳು ಬೇಲೂರು ಹಾಗೂ ಮೂಡಿಗೆರೆ ಭಾಗದಲ್ಲಿ ಬೀಡು ಬಿಟ್ಟಿದ್ದು, ಹಿಂಡು,ಹಿಂಡಾಗಿ ಸಂಚರಿಸುತ್ತಿವೆ.

38 ಕಾಡಾನೆಗಳು ಮೂಡಿಗೆರೆಯ ಪುರ ಗ್ರಾಮದ ಕಾಫಿ ತೋಟಗಳಲ್ಲಿವೆ. ಯಾವ ಆನೆಗಳೂ ವಾಪಸ್ ಬಂದಿಲ್ಲ. ಕೆಲ ಆನೆಗಳು ಮಾತ್ರ ಆಚೀಚೆ ಓಡಾಡುತ್ತಿವೆ. ಬೇಲೂರು ತಾಲ್ಲೂಕಿನಲ್ಲಿ ಈಗ 12 ಆನೆಗಳಿದ್ದು, ಅವುಗಳ ಚಲನವಲನದ ಬಗ್ಗೆ ನಿಗಾ ಇಡಲಾಗಿದೆ. ನ.30ರಂದು ನಡೆಯುವ ಸಭೆಯ ತೀರ್ಮಾನದಂತೆ ಮುಂದಿನ ಕಾರ್ಯಾಚರಣೆ ನಡೆಯಲಿದೆ ಎಂದು ಸಿಸಿಎಫ್‌ ಏಡುಕೊಂಡಲ ತಿಳಿಸಿದ್ದಾರೆ.

ಬೇಲೂರು ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದ 56 ಆನೆಗಳ ಪೈಕಿ 10 ಆನೆಗಳನ್ನು ಸೆರೆ ಹಿಡಿಯುವ ಹಾಗೂ ಉಳಿದ ಆನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಆರಂಭಿಸಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಕಾಡಾನೆಗಳು ಈಗಲೂ ಬೇಲೂರು ಹಾಗೂ ಮೂಡಿಗೆರೆ ಗಡಿ ಭಾಗದಲ್ಲಿ ಸಂಚರಿಸುತ್ತಿದ್ದು, ಚಲನವಲನಗಳ ಮೇಲೆ ಅರಣ್ಯ ಇಲಾಖೆ ನಿಗಾ ಇಟ್ಟಿದೆ. 

ಬಹುತೇಕ ಒಂಟಿಯಾಗಿ ಸಂಚರಿಸುವ ‘ಭೀಮ’ ಮಾತ್ರ ಗುಂಪು ಆನೆಗಳೊಂದಿಗೆ ಕಾಡುಬೈಲುವರೆಗೆ ಹೋಗಿ ಮತ್ತೆ ಬೇಲೂರು ಭಾಗಕ್ಕೆ ವಾಪಸ್‌ ಬಂದಿದೆ. ಮಂಗಳವಾರ ರಾತ್ರಿ ಮೂರು ಆನೆಗಳು ಬೇಲೂರು ತಾಲ್ಲೂಕಿನ ಕೋಗೋಡು ಮುಖ್ಯರಸ್ತೆಯಲ್ಲಿ ಕಂಡುಬಂದಿದ್ದು, 20 ನಿಮಿಷ ವಾಹನ ಸಂಚಾರ ಸ್ಥಗಿತವಾಗಿತ್ತು. ಈ ಆನೆಗಳು ಕೋಗೋಡು ಗದ್ದೆಯೊಂದರಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶಪಡಿಸಿವೆ.

ಮಂಗಳವಾರ ರಾತ್ರಿ ಬೇಲೂರು ತಾಲ್ಲೂಕಿನ ಕೋಗೋಡು ಮುಖ್ಯ ರಸ್ತೆಯಲ್ಲಿ ಕಂಡು ಬಂದ ಆನೆಗಳು

ಆನೆಗೆ ಮದ: ಕಾರ್ಯಾಚರಣೆ ಸ್ಥಗಿತ

ಅರೇಹಳ್ಳಿಯಲ್ಲಿ ಗಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಬುಧವಾರ ಸಿದ್ಧತೆ ಆರಂಭಿಸಲಾಗಿತ್ತು. ಕುಮ್ಕಿ ಆನೆಗಳಿಗೆ ಪೂಜೆಯನ್ನೂ ಸಲ್ಲಿಸಲಾಗಿತ್ತು. ಆದರೆ ಸೆರೆ ಹಿಡಿಯಬೇಕಿದ್ದ ಆನೆಯ ಜೊತೆಗಿದ್ದ ಇನ್ನೊಂದು ಆನೆಗೆ ಮದ ಏರಿರುವುದರಿಂದ ಕೊನೆ ಕ್ಷಣದಲ್ಲಿ ಕಾರ್ಯಾಚರಣೆ ಕೈಬಿಡಲಾಗಿದೆ.