ನವದೆಹಲಿ: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಧಾರವಾಡದ ಶಾಸಕ ವಿನಯ ಕುಲಕರ್ಣಿ ಹಾಗೂ ಇತರ ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ್ದ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಗೊಳಿಸಿದೆ. 

ಕರ್ನಾಟಕ ಸರ್ಕಾರ ಹಾಗೂ ಸಿಬಿಐ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರಿದ್ದ ಪೀಠವು, ಕುಲಕರ್ಣಿ ಮತ್ತು ಇತರರಿಗೆ ನೀಡಲಾಗಿದ್ದ ಜಾಮೀನನ್ನು ಸಹ ರದ್ದುಪಡಿಸಿತು. ಅಪರಾಧಿಗಳು ಎರಡು ವಾರಗಳ ಒಳಗೆ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಶರಣಾಗಬೇಕು ಎಂದು ಪೀಠ ನಿರ್ದೇಶನ ನೀಡಿತು.

‘ಶಾಸಕರೊಬ್ಬರಿಗೆ ವಾದಿಸಲು ಅವಕಾಶವಿರುವ ಪ್ರಕರಣವಿದೆ ಎಂಬ ಕಾರಣಕ್ಕಾಗಲಿ ಅಥವಾ ಅವರು ಅನರ್ಹತೆ ಎದುರಿಸುತ್ತಿದ್ದಾರೆ ಎಂಬ ಕಾರಣಕ್ಕಾಗಲಿ, ಅಪರಾಧ ಸಾಬೀತಾಗಿರುವ ಪ್ರಕರಣದ ತೀರ್ಪಿಗೆ ತಡೆ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಶಿಕ್ಷೆಗೆ ತಡೆ ನೀಡಬೇಕೆಂದರೆ, ಆ ತೀರ್ಪಿನಲ್ಲಿ ಸ್ಪಷ್ಟವಾದ ತಪ್ಪು ಇದೆ ಎಂಬುದನ್ನು ಮತ್ತು ತಾನು ಖಂಡಿತವಾಗಿಯೂ ಗೆಲ್ಲಬಹುದಾದ ಪ್ರಕರಣವನ್ನು ಹೊಂದಿದ್ದೇನೆ ಎಂಬುದನ್ನು ಜನಪ್ರತಿನಿಧಿ ಸಾಬೀತುಪಡಿಸಬೇಕಾಗುತ್ತದೆ’ ಎಂದು ಪೀಠ ಹೇಳಿದೆ. 

ಹೈಕೋರ್ಟ್‌ನ ಜುಲೈ 31ರ ಆದೇಶವು ದೋಷಪೂರಿತವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು, ರಾಜ್ಯ ಸರ್ಕಾರ ಮತ್ತು ಸಿಬಿಐ ಮಂಡಿಸಿದ್ದ ವಾದಗಳನ್ನು ಹೈಕೋರ್ಟ್ ಪರಿಗಣಿಸಿಲ್ಲ‌ ಎಂದು ಅಸಮಾಧಾನ ವ್ಯಕ್ತಪಡಿಸಿದೆ. 

‘ಸೆಷನ್ಸ್‌ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದು ಕೋರಿ ಸಲ್ಲಿಸಲಾಗಿರುವ ಮೇಲ್ಮನವಿಗಳು ತೀರ್ಮಾನವಾಗುವ ತನಕ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿರಿಸಲಾಗಿದೆ ಮತ್ತು ಷರತ್ತುಗಳಿಗೆ ಒಳಪಟ್ಟಂತೆ ಮೇಲ್ಮನವಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು’ ಎಂದು ಹೈಕೋರ್ಟ್‌ ಆದೇಶಿಸಿತ್ತು. 

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ ಕುಲಕರ್ಣಿ ಮತ್ತು 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ತನಿಖಾಧಿಕಾರಿ ಚನ್ನಕೇಶವ ಬಿ. ಟಿಂಗರೀಕರ ಅವರ ಶಿಕ್ಷೆಯನ್ನು ಮಾತ್ರವೇ ನ್ಯಾಯಪೀಠ ಅಮಾನತಿನಲ್ಲಿ ಇರಿಸಿತ್ತು. ಉಳಿದಂತೆ ಎಲ್ಲ ಅಪರಾಧಿಗಳಿಗೂ ಜಾಮೀನು ಮಂಜೂರು ಮಾಡಿತ್ತು. 

ಯೋಗೀಶಗೌಡ ಗೌಡರ ಅವರನ್ನು 2016ರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳ ಪೈಕಿ 17 ಜನರನ್ನು ಅಪರಾಧಿಗಳು ಎಂದು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಸೆಷನ್ಸ್‌ ನ್ಯಾಯಾಲಯವು ತೀರ್ಮಾನಿಸಿತ್ತು. 16 ಜನರಿಗೆ 2026ರ ಏಪ್ರಿಲ್‌ 17ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.