ಮೈಸೂರು: ‘ಶಾಸಕ ಡಾ.ಎಚ್‌.ಸಿ. ಮಹದೇವಪ್ಪ ನಮ್ಮ‌ ಪಾರ್ಟಿಯಲ್ಲಿಲ್ವಾ, ನಮ್ಮ ಪಕ್ಷದ ಶಾಸಕರಲ್ವಾ? ಅವರೂ ಬಂದೇ ಬರ್ತಾರೆ. ಅವರೊಂದಿಗೆ ಅವರ ಮಗ, ಸಂಸದ ಸುನೀಲ್ ಬೋಸ್ ಸಹ ಬರ್ತಾರೆ’ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.

ಸರ್ಕಾರದಿಂದ ಇಲ್ಲಿ ಆಯೋಜಿಸಿ ರುವ ಸಂವಿಧಾನ ದಿನಾಚರಣೆಗೆ ಮಹದೇವಪ್ಪ ಬರುತ್ತಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಗರಂ ಆದ ಅವರು, ‘ಮಹದೇವಪ್ಪನ ಬಗ್ಗೆ ಯಾಕ್ರೀ ಕೇಳ್ತೀರಾ? ಮಹದೇವಪ್ಪ ಪ್ರತ್ಯೇಕವಾಗಿ ಸಮಾವೇಶ ಮಾಡುತ್ತಿಲ್ಲ. ದಲಿತ ಸಂಘಟನೆಗಳು ನಡೆಸುತ್ತಿವೆ. ಅದರ ಅಧ್ಯಕ್ಷತೆ ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಒಡೆಯುವಂತಹ ಪ್ರಶ್ನೆಗಳನ್ನು ಏಕೆ ಕೇಳುತ್ತೀರಾ?’ ಎಂದು ಸಿಡಿಮಿಡಿಗೊಂಡರು. ‘ಇತ್ತೀಚಿನ ದಿನಗಳಲ್ಲಿ ಮಹದೇವಪ್ಪ ನಿಮ್ಮೊಂದಿಗೆ ಕಾಣಿಸಿಕೊಳ್ಳುತ್ತಿಲ್ಲವಲ್ಲಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಯಾರನ್ನೂ ಕಡೆಗಣಿಸಿಲ್ಲ: ಯತೀಂದ್ರ

ಮೈಸೂರು: ಗುರುವಾರ ನಡೆಯಲಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ, ಡಾ. ಎಚ್.ಸಿ. ಮಹದೇವಪ್ಪ ಸೇರಿದಂತೆ ಎಲ್ಲ ನಾಯಕರೂ ಒಟ್ಟಾಗಿ ಬರುತ್ತಾರೆ. ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಇಲ್ಲಿ ಹೇಳಿದರು.

ಸಂಘಟನೆಗಳ ಸಹಯೋಗದಲ್ಲಿ ಮಹದೇವಪ್ಪ ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ ಮಾಡಲು ಮುಂದಾಗಿದ್ದು ನಿಜ. ಆದರೆ ನಂತರದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದಿಂದಲೇ ಈ ಸಮಾವೇಶ ಮಾಡುವುದಾಗಿ ಹೇಳಿದಾಗ, ಅವರು ಸಂತೋಷದಿಂದ ಒಪ್ಪಿ ಸಹಕಾರ ನೀಡಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಹಾಕಿರುವ ಫ್ಲೆಕ್ಸ್‌ಗಳಲ್ಲಿ ಅವರೂ ಸೇರಿದಂತೆ ಎಲ್ಲ ಹಿರಿಯ ನಾಯಕರ ಚಿತ್ರಗಳೂ ಇವೆ ಎಂದು ‌ಸ್ಪಷ್ಟನೆ ನೀಡಿದರು.

261126-51-886222200