ಬೆಂಗಳೂರು: ‘ಹೆಬ್ಬಾಳ- ಸಿಲ್ಕ್ ಬೋರ್ಡ್ ನಡುವೆ ಸುರಂಗ ರಸ್ತೆ’ ನಿರ್ಮಾಣಕ್ಕಾಗಿ ಲಾಲ್ಬಾಗ್ ಉದ್ಯಾನದಲ್ಲಿ 6 ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಸ್ತಾವವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.
17.5 ಕಿ.ಮೀ ಉದ್ದ ಈ ಯೋಜನೆ ಗಾಗಿ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ–ಸ್ಮೈಲ್) ಪರ್ಯಾಯ ಜಾಗ ಹುಡುಕುತ್ತಿದ್ದು, ಸುರಂಗ ರಸ್ತೆಯ ಪ್ರವೇಶ ಮತ್ತು ನಿರ್ಗಮನಕ್ಕೆ ಎರಡು ಸ್ಥಳಗಳನ್ನು ಪ್ರಾಥಮಿಕ ಸಮೀಕ್ಷೆಯ ಮೂಲಕ ಗುರುತಿಸಿದೆ ಎನ್ನಲಾಗಿದೆ.
ಒಂದು ಶಾಂತಿನಗರದ ಕೆಎಸ್ಆರ್ಟಿಸಿ ಪ್ರಧಾನ ಕಚೇರಿಗೆ ಸಮೀಪದಲ್ಲಿರುವ ಜಾಗ ಹಾಗೂ ಎರಡನೆಯದು ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ, ಆವರಣದಲ್ಲಿ ರುವ ಖಾಲಿ ನಿವೇಶನವಾಗಿದೆ ಎಂದುತಿಳಿದುಬಂದಿದೆ. ಬಿ–ಸ್ಮೈಲ್ ಅಧಿಕಾರಿ ಗಳು ಈ ಸ್ಥಳಗಳನ್ನು ಖಚಿತಪಡಿಸಲಿಲ್ಲ.
ಅಲೈನ್ಮೆಂಟ್ ಬದಲು: ‘ಸುರಂಗ ರಸ್ತೆಯ ಮಾರ್ಗವನ್ನು (ಅಲೈನ್ಮೆಂಟ್) ಬದಲಾಯಿಸಲಾಗುವುದು’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಈ ಕುರಿತು ಬುಧವಾರ ಸುದ್ದಿಗಾರರದೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿಯವರು ಈಗಾಗಲೇ ತಿಳಿಸಿರು ವಂತೆ ಲಾಲ್ಬಾಗ್ನಲ್ಲಿ ಸುರಂಗ ರಸ್ತೆಬರುವುದಿಲ್ಲ. ಪರ್ಯಾಯವಾಗಿ ಎರಡುಅಲೈನ್ಮೆಂಟ್ ಸರ್ವೆ ಕಾರ್ಯ ನಡೆಯು ತ್ತಿದ್ದು, ಶೀಘ್ರವೇ ಅಂತಿಮಗೊಳಿಸ ಲಾಗುವುದು’ ಎಂದು ತಿಳಿಸಿದರು.
‘ಹೊಸ ಅಲೈನ್ಮೆಂಟ್ನಿಂದ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಸರ್ಕಾರ ಭರಿಸಬೇಕಾಗುತ್ತದೆ. ಎರಡು ಜಾಗಗಳಲ್ಲೂ ಕೆಲವೊಂದು ಸಮಸ್ಯೆಗಳಿವೆ. ಅವುಗಳೆಲ್ಲವನ್ನೂ ನಿವಾರಿಸಿಕೊಂಡು ಅಂತಿಮಗೊಳಿಸಲಾಗುವುದು’ ಎಂದರು.
‘ಉತ್ತರ–ದಕ್ಷಿಣ ಸುರಂಗ ರಸ್ತೆಯ ಗುತ್ತಿಗೆ ಪಡೆದಿರುವ ಸಂಸ್ಥೆಯೊಂದಿಗೆ ದರವನ್ನು ಕಡಿಮೆ ಮಾಡಲು ಮುಖ್ಯ ಕಾರ್ಯದರ್ಶಿಯವರ ನೇತೃತ್ವದ ಸಮಿತಿ ಸಂಧಾನ ನಡೆಸುತ್ತಿದೆ. ಸರ್ಕಾರ ಕೊಡುವುದು ₹7 ಸಾವಿರ ಕೋಟಿಯಷ್ಟೇ. ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದರು.
‘ಸುರಂಗ ರಸ್ತೆ ಕಾಮಗಾರಿ ಆರಂಭಕ್ಕೆ ತಯಾರಿ ನಡೆಸಲು ಹೆಚ್ಚಿನ ಸಮಯ ಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗದಿಪಡಿಸಿರುವ ಶುಲ್ಕವನ್ನೇ ವಿಧಿಸಲು ಯೋಜಿಸಲಾಗಿದೆ. ಗುತ್ತಿಗೆ ಅವಧಿಯಲ್ಲಿ ಬದಲಾವಣೆ ಆಗಬಹುದು’ ಎಂದು ಹೇಳಿದರು.
ಜನರ ಗೆಲುವು: ತೇಜಸ್ವಿ ಸೂರ್ಯ
‘ಅವೈಜ್ಞಾನಿಕ ಹಾಗೂ ಅನಗತ್ಯ ಯೋಜನೆ ವಿರುದ್ಧ ನಾಗರಿಕರು ನಡೆಸುತ್ತಿರುವ ಹೋರಾಟಕ್ಕೆ ಸಿಕ್ಕ ಪ್ರಾಥಮಿಕ ಗೆಲುವು ಇದಾಗಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
‘ಯೋಜನೆಯ ಮಾರ್ಗವನ್ನು (ಅಲೈನ್ಮೆಂಟ್) ಬದಲಾಯಿಸಿದ ಮಾತ್ರಕ್ಕೆ ಅದು ವೈಜ್ಞಾನಿಕವಾಗುವುದಿಲ್ಲ. ಈ ಯೋಜನೆಯ ವಿರುದ್ಧ ನಮ್ಮ ವಿರೋಧ ಮುಂದುವರಿಯುತ್ತದೆ’ ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ಸುರಂಗ ರಸ್ತೆ ಯೋಜನೆಯಿಂದಾಗಿ ಮೆಟ್ರೊ ಕೆಂಪು ಮಾರ್ಗ ವಿಸ್ತರಣೆಗೆ ಅಡ್ಡಿಯುಂಟಾಗಲಿದೆ. ಸುರಂಗ ರಸ್ತೆ ಯೋಜನೆಗೆ ಅನುಕೂಲ ಮಾಡಿಕೊಡಲು ಇನ್ನು ಎಷ್ಟು ಬಾರಿ ಮಾರ್ಗಗಳನ್ನು ಬದಲಾಯಿಸುತ್ತೀರಿ? ಮೆಟ್ರೊ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗುವುದು ವಿಳಂಬವಾಗುತ್ತಿದೆ ಎಂದು ಕೇಂದ್ರದ ಮೇಲೆ ದೂಷಿಸುವುದನ್ನು ನಿಲ್ಲಿಸಿ’ ಎಂದು ಹೇಳಿದ್ದಾರೆ.
261126-4-1258629459

