ಬೆಂಗಳೂರು: ‘ಬಜೆಟ್ನಲ್ಲಿ ಪ್ರತಿ ಕಿ.ಮೀ.ಗೆ ಸರಾಸರಿ ₹6.66 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡುತ್ತೇವೆ ಎಂದು ಬೊಗಳೆ ಬಿಟ್ಟಿದ್ದ ಸರ್ಕಾರ, 130.85 ಕಿ.ಮೀ. ರಸ್ತೆಗೆ ₹2,321.17 ಕೋಟಿ, ಅಂದರೆ ಕಿ.ಮೀ.ಗೆ ಸರಾಸರಿ ₹17.74 ಕೋಟಿ ಖರ್ಚು ಮಾಡಲು ಸಚಿವ ಸಂಪುಟದಲ್ಲಿ ಸಮ್ಮತಿ ನೀಡಿರುವುದು ಹಗಲು ದರೋಡೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ದೂರಿದ್ದಾರೆ.
‘ಪ್ರಜಾವಾಣಿ’ಯಲ್ಲಿ ನ.25ರಂದು ಪ್ರಕಟವಾದ ‘ಮೂರು ಪಟ್ಟು ಹೆಚ್ಚು ವೆಚ್ಚಕ್ಕೆ ಸಂಪುಟ ಸಮ್ಮತಿ’ ವಿಶೇಷ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕಮಿಷನ್ ಹಾಗೂ ಲೂಟಿಯ ಹುನ್ನಾರಕ್ಕಾಗಿಯೇ ವೆಚ್ಚವನ್ನು ಮೂರು ಪಟ್ಟು ಹಿಗ್ಗಿಸಿದ್ದಾರೆ. ರಸ್ತೆಗಳ ಗುಣಮಟ್ಟಕ್ಕಿಂತ ‘ಗುತ್ತಿಗೆದಾರರ ಜೇಬು’ ತುಂಬಿಸುವುದೇ ಈ ಸರ್ಕಾರದ ಮುಖ್ಯ ಉದ್ದೇಶ ಎಂಬುದು ಸ್ಪಷ್ಟವಾಗಿದೆ’ ಎಂದಿದ್ದಾರೆ.
‘ಒಂದೆಡೆ ಬಡವರ, ಮಹಿಳೆಯರ, ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳಿಗೆ ‘ಆರ್ಥಿಕವಾಗಿ ಶಕ್ತವಾಗಿಲ್ಲ’ ಎಂದು ಸಬೂಬು ಹೇಳುವ ಈ ದಿವಾಳಿ ಸರ್ಕಾರಕ್ಕೆ, ಬೆಂಗಳೂರಿನ ರಸ್ತೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಲೂಟಿಗಾಗಿ ಸ್ಕೆಚ್ಚು ಹಾಕಲು ಮಾತ್ರ ಹಣದ ಕೊರತೆಯಿಲ್ಲ’ ಎಂದು ಆರೋಪಿಸಿದ್ದಾರೆ.
261126-4-1535685074

