ಬೆಂಗಳೂರು: ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಹಾಗೂ ರಾಜಕಾಲುವೆ ಕಾಮಗಾರಿಗಳನ್ನು ಫೆಬ್ರುವರಿ ವೇಳೆಗೆ ಪೂರ್ಣಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆ ನಂತರಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದ ರಸ್ತೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ರಿಂದ ದೂರುಗಳು ಬರುತ್ತಿವೆ. ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸಿದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ’ ಎಂದರು.

‘ಮಳೆಗಾಲದಿಂದಾಗಿ ರಸ್ತೆ ಕಾಮಗಾರಿಗಳ ಪ್ರಗತಿಗೆ ಅಡಚಣೆಯಾಗಿತ್ತು. ಇದರ ಜೊತೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಪ್ರತಿಕೂಲ ಪರಿಸ್ಥಿತಿಯಿಂದಾಗಿ ಡಾಂಬರು ದರ ಏರಿಕೆಯಾಗಿದ್ದು, ಕಾಮಗಾರಿಗಳ ಮೇಲೂ ಪರಿಣಾಮ ಬೀರಿತ್ತು’ ಎಂದರು.

ನಗರದಲ್ಲಿ ₹2,321 ಕೋಟಿ ವೆಚ್ಚದಲ್ಲಿ 130 ಕಿ.ಮೀ ಉದ್ದದ 88 ವೈಟ್ ಟಾಪಿಂಗ್ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದ್ದು, ಈ ಪೈಕಿ ಈಗಾಗಲೇ 120 ಕಿ.ಮೀ. ಉದ್ದದ ವೈಟ್ ಟಾಪಿಂಗ್ ಕಾಮಗಾರಿಗಳು ಪ್ರಗತಿ ಯಲ್ಲಿವೆ ಎಂದರು.

ಒಟ್ಟಾರೆ 2,875 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪೈಕಿ 553 ಕಿ.ಮೀ. ರಸ್ತೆಗಳಿಗೆ ಈಗಾಗಲೇ ಡಾಂಬರೀಕರಣ ಮಾಡಲಾಗಿದೆ. ‘ವಾರ್ಡ್ ಒನ್’ ಅಭಿಯಾನದಡಿ ರಸ್ತೆ ಗುಂಡಿಗಳನ್ನು ಮುಚ್ಚುವ ಜೊತೆಗೆ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕಾಮಗಾರಿಗಳಲ್ಲಿ ಪಾರದರ್ಶಕತೆ ತರಲು ಹಾಗೂ ವೇಗ ಹೆಚ್ಚಿಸಲು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

‘ಕಚೇರಿ ಸಮಯ ಬದಲಾವಣೆ: ಪ್ರಧಾನಿ ಮೋದಿ ಸಲಹೆ’

‘ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸಲು ಕಚೇರಿಗಳ ಕೆಲಸದ ಅವಧಿಯನ್ನು ಹಂತ ಹಂತವಾಗಿ ಬದಲಿಸುವುದು, ಅಂಗಡಿ, ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳು ರಾತ್ರಿ ವೇಳೆಯೂ ಕಾರ್ಯನಿರ್ವಹಿಸಲು ಅವಕಾಶ ನೀಡುವುದು ಮತ್ತು ಶಾಲೆಗಳ ಸಮಯವನ್ನು ಸಮನ್ವಯಗೊಳಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು.

ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿಯವರೊಂದಿಗೆ ನ.13ರಂದು ನಡೆದ ಮಾತುಕತೆಯನ್ನು ಸಚಿವರು ಸ್ಮರಿಸಿಕೊಂಡರು.

‘ಕಂಪನಿಗಳು ಏಕಕಾಲದಲ್ಲಿ ಎಲ್ಲ ಉದ್ಯೋಗಿಗಳೂ ಕಚೇರಿಗೆ ಬರುವ ವ್ಯವಸ್ಥೆಯ ಬದಲು, ಬೆಳಿಗ್ಗೆ ಮತ್ತು ಸಂಜೆ ಸೇರಿದಂತೆ ವಿಭಿನ್ನ ಪಾಳಿಗಳಲ್ಲಿ ಕೆಲಸ ನಿರ್ವಹಿಸುವಂತೆ ಪ್ರೋತ್ಸಾಹಿಸಬೇಕು. ರಾತ್ರಿ 9 ಗಂಟೆಯವರೆಗೂ ಕೆಲಸದ ಪಾಳಿಗಳನ್ನು ವಿಸ್ತರಿಸುವ ಮೂಲಕ ಕಚೇರಿಗಳಿಗೆ ತೆರಳುವ ಮತ್ತು ವಾಪಸಾಗುವ ಉದ್ಯೋಗಿಗಳ ಸಂಚಾರವನ್ನು ವಿವಿಧ ಸಮಯಗಳಿಗೆ ಹಂಚಬಹುದು ಎಂಬುದು ಪ್ರಧಾನಿಯವರ ಸಲಹೆ’ ಎಂದರು.

261126-4-1237513513