ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು(ಕೆಪಿಎಸ್‌ಸಿ) ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ನಗರದ 23ನೇ ಸಿಸಿಎಚ್‌ ನ್ಯಾಯಾಲಯಕ್ಕೆ ಬುಧವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಜಾರಿ ನಿರ್ದೇಶನಾಲಯ (ಇ.ಡಿ) ದೋಷಾರೋಪ ಪಟ್ಟಿ ಸಲ್ಲಿಸಿದ್ದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದರು. ಹೈಕೋರ್ಟ್‌ ಸೂಚನೆಯ ಮೇರೆಗೆ ನಗರ ಮುಖ್ಯ ಪೊಲೀಸ್ ಕಮಿಷನರ್‌ ಆರ್.ಹಿತೇಂದ್ರ ಅವರ ನೇತೃತ್ವದಲ್ಲಿ ಎಸ್‌ಐಟಿ ರಚನೆ ಆಗಿದೆ.

ಪ್ರಮುಖ ಆರೋಪಿಗಳಾದ ಹಿಂದಿನ ಪರೀಕ್ಷಾ ನಿಯಂತ್ರಕ, ಐಎಎಸ್‌ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್‌ ಮತ್ತು ಮಧ್ಯವರ್ತಿ ಬಸವರಾಜು ಕನ್ನಾಳೆ ವಿರುದ್ಧ 4,087 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ದೋಷಾರೋಪ ಪಟ್ಟಿಯಲ್ಲಿ ಇಬ್ಬರ ವಿರುದ್ಧ ಆರೋಪಗಳನ್ನು ವಿವರಿಸಲಾಗಿದೆ. ಇಬ್ಬರ ನಡುವೆ ನಡೆದ ಹಣಕಾಸು ವ್ಯವಹಾರ ಮತ್ತು ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಅಭ್ಯರ್ಥಿಗಳು ಪ್ರತ್ಯೇಕವಾಗಿ ಜಮೆ ಮಾಡಿರುವ ಹಣ, ಆ ಹಣದಿಂದ ಘ್ಯಾನೇಂದ್ರ ಕುಮಾರ್‌ ತನ್ನ ಪ್ರೇಯಸಿಗೆ ಕೊಡಿಸಿದ್ದ ಚಿನ್ನಾಭರಣ, ಉತ್ತರ ಪ್ರದೇಶದಲ್ಲಿರುವ ಆಸ್ತಿ ಖರೀದಿ ಸೇರಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಪಶುವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 9 ಅಭ್ಯರ್ಥಿಗಳು ಮತ್ತು 40 ಮಂದಿಯ ಸಾಕ್ಷಿಗಳ ಹೇಳಿಕೆಯನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಕ್ರಮದಿಂದ ಬಂದ ಹಣದಲ್ಲಿ ಘ್ಯಾನೇಂದ್ರ ಕುಮಾರ್ ಎಲ್ಲೆಲ್ಲಿ ಆಸ್ತಿ ಖರೀದಿಸಿದ್ದಾರೆ, ಎಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ವಿವರವನ್ನೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕೆಪಿಎಸ್‌ಸಿ ನಡೆಸಿದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪದಡಿ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಮೂರು ಎಫ್‌ಐಆರ್‌ಗಳ ಆಧಾರದಲ್ಲಿ ಮೊದಲು ಸಿಐಡಿ ತನಿಖೆ ನಡೆಸಿತ್ತು.

261126-51-1465246698