ಬೆಂಗಳೂರು: ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ಆರೋಗ್ಯ ಇಲಾಖೆಯು ರಾಜ್ಯದ ವಿವಿಧೆಡೆ ಬುಧವಾರ ಹಮ್ಮಿಕೊಂಡಿದ್ದ ರಕ್ತ ದಾನ ಶಿಬಿರಗಳಿಂದ ಒಟ್ಟು 17,778 ಯೂನಿಟ್ ರಕ್ತ ಸಂಗ್ರಹವಾಗಿದೆ.
ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ತಿನ ಸಹಯೋಗದಲ್ಲಿ ಇಲಾಖೆಯು ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಚಾಲನೆ ನೀಡಿದರು. ಇದೇ ವೇಳೆ 50 ರಕ್ತ ದಾನಿಗಳನ್ನು ಸನ್ಮಾನಿಸಲಾಯಿತು.
ರಾಜ್ಯದ ವಿವಿಧೆಡೆ ನಡೆದ ರಕ್ತದಾನ ಶಿಬಿರಗಳಲ್ಲಿ 270 ರಕ್ತನಿಧಿ ಕೇಂದ್ರಗಳು ಪಾಲ್ಗೊಂಡಿದ್ದವು. 21,150 ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಬೆಂಗಳೂರಿನಲ್ಲಿ 25 ಕಡೆ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 3,500 ಮಂದಿ ಪಾಲ್ಗೊಂಡಿದ್ದರು. ಒಟ್ಟು 3,120 ಯೂನಿಟ್ ರಕ್ತವನ್ನು ಅವರಿಂದ ಸಂಗ್ರಹಿಸಲಾಯಿತು. ಉಳಿದಂತೆ ಜಿಲ್ಲೆಗಳಲ್ಲಿ ನಡೆದ ಶಿಬಿರಗಳಿಂದ ಒಟ್ಟು 14,658 ಯೂನಿಟ್ ರಕ್ತವನ್ನು ದಾನಿಗಳಿಂದ ಪಡೆಯಲಾಯಿತು.
ಹೊಸ ಬದುಕು: ‘ರಕ್ತದಾನ ಮಾನವೀಯತೆಯ ನೈಜ ಪ್ರತಿಬಿಂಬವಾಗಿದೆ. ನಾವು ನೀಡುವ ಒಂದು ಯೂನಿಟ್ ರಕ್ತವು ಅಪಘಾತದಲ್ಲಿ ಸಿಲುಕಿದವರು, ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಹಾಗೂ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಯಿಂದ ಹೋರಾಡುತ್ತಿರುವವರು ಸೇರಿದಂತೆ ನಾಲ್ಕು ಜೀವಗಳಿಗೆ ಹೊಸ ಬದುಕು ನೀಡಬಲ್ಲದು’ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ನಿರ್ದೇಶಕಿ ಡಾ. ರಜನಿ ಎಂ.ಇದ್ದರು.
ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಅದನ್ನು ಮನುಷ್ಯರ ಸ್ವಯಂಪ್ರೇರಿತ ಮತ್ತು ನಿಸ್ವಾರ್ಥ ದಾನದ ಮೂಲಕ ಮಾತ್ರ ಸಂಗ್ರಹಿಸಲು ಸಾಧ್ಯ ಯು.ಟಿ. ಖಾದರ್, ಆರೋಗ್ಯ ಸಚಿವ
261126-4-1293748434

