ಬೆಂಗಳೂರು: ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯು 9ನೇ ದಿನ ಪೂರೈಸಿದೆ.

ಮಂಗಳವಾರ ತಡರಾತ್ರಿವರೆಗೂ ಸುರಿದ ಮಳೆ, ‘ಆಶಾ’ಗಳ ಹೋರಾಟದ ಕಾವನ್ನು ತಣ್ಣಗೆ ಮಾಡದೆ, ಮತ್ತಷ್ಟು ಹೆಚ್ಚಿಸಿತು.

ಚಳಿ, ಮಳೆಯನ್ನೂ ಲೆಕ್ಕಿಸದೆ ಹೋರಾಟ ನಡೆಸುತ್ತಿರುವ ‘ಆಶಾ’ಗಳ ಹೋರಾಟವು ದಿನದಿಂದದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಚಿತ್ರರಂಗದ ತಾರಾ, ಮಾಳವಿಕಾ, ಅವಿನಾಶ್‌, ವಿನೋದ್‌ ರಾಜ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬುಧವಾರ ಭಾಗವಹಿಸಿ ಬೆಂಬಲ ಸೂಚಿಸಿದರು. ರಾಜ್ಯ ಸರ್ಕಾರದ ನಡೆ ಹಾಗೂ ನಿರ್ಲಕ್ಷ್ಯ ಧೋರಣೆ ಖಂಡಿಸಿದರು.

‘ಆಶಾ ಕಾರ್ಯಕರ್ತೆಯರಿಗೆ ಕೇಳಿದಾಗೆಲ್ಲ ಕಂಠಿಹಾರ ಕೊಡೋಕಾಗುತ್ತಾ’ ಎಂಬ ಸಚಿವ ನರೇಂದ್ರಸ್ವಾಮಿ ಅವರಹೇಳಿಕೆಯನ್ನು ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಖಂಡಿಸಿದರು.

‘ಮಾತೆತ್ತಿದರೆ ಸಂವಿಧಾನ ಹಿಡಿದೆತ್ತಿ ಮಾತನಾಡುವ ಪಕ್ಷದ ಸಚಿವರ ಬಾಯಿಂದ ಇಂತಹ ಮಾತುಗಳನ್ನು ನಾವು ನಿರೀಕ್ಷಿಸಿರಲಿಲ್ಲ. ಅದರಲ್ಲೂ ಸಂವಿಧಾನ ದಿನಾಚರಣೆ ಕುರಿತು ಮೈಸೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲೇ ಸಚಿವರು ಈ ರೀತಿ ಮಾತುಗಳನ್ನಾಡಿರುವುದು ವಿಪರ್ಯಾಸ. ನಾವು ಯಾವ ಕಂಠಿಹಾರವನ್ನೂ ಕೇಳಿಲ್ಲ. ನಾವು ಕೇಳುತ್ತಿರುವುದು ದುಡಿಮೆಗೆ ತಕ್ಕ ಪ್ರತಿಫಲ. ಸರ್ಕಾರ ತಾನು ಕೊಟ್ಟ ಮಾತನ್ನು ಈಡೇರಿಸಲಿ. ದುಡಿಯುವ ಹೆಣ್ಣುಮಕ್ಕಳನ್ನು ಅವಮಾನಿಸುವುದು ಕೀಳು ಅಭಿರುಚಿಯ ಪರಮಾವಧಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ‘ಕಳೆದ 9 ದಿನಗಳಿಂದ ಬಿಸಿಲು, ಮಳೆ, ಚಳಿಯನ್ನು ಎದುರಿಸಿದ್ದೀರಿ. ಕಣ್ಣು, ಕಿವಿ ಇಲ್ಲದ ಸರ್ಕಾರ. ದುಡಿಯುವ ಹೆಣ್ಣುಮಕ್ಕಳನ್ನು ಇಂತಹ ಪರಿಸ್ಥಿತಿಗೆ ದೂಡಿರುವುದು, ಪ್ರಜಾಪ್ರಭುತ್ವಕ್ಕೆ ನಾಚಿಕೆ ತರುವಂತಹ ವಿಚಾರ. ಅತ್ಯಂತ ಹೃದಯಹೀನ, ಅನಾಗರಿಕ ಲಕ್ಷಣವಾಗಿದೆ. ಮುಖ್ಯಮಂತ್ರಿ ಕೂಡಲೇಬರಬೇಕು. ಇವರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದರು.

ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ‘ಸರ್ಕಾರ ತಪ್ಪು ಮಾಡುತ್ತಿದೆ. 9 ದಿನಗಳವರೆಗೂ ಹೋರಾಟ ಮುಂದುವರಿಸುವ ಪರಿಸ್ಥಿತಿ ಸೃಷ್ಟಿಸಿದೆ. ಮುಖ್ಯಮಂತ್ರಿ ನಿಮ್ಮನ್ನು ಸಹೋದರಿಯರು ಎಂದು ಕರೆದಿರುವುದು ಕೇವಲ ಬಾಯಿಮಾತಿಗೆ ಎನ್ನುವಂತಿದೆ. ಬೇಡಿಕೆ ಕುರಿತು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ’ ಎಂದು ಎಚ್ಚರಿಸಿದರು.

‘ಎಲ್ಲಾ ಕಷ್ಟವನ್ನು ಅತ್ಯಂತ ದಿಟ್ಟವಾಗಿ ಅನುಭವಿಸಿದ್ದೀರಿ. ಹೆಣ್ಣುಮಕ್ಕಳ ಕಷ್ಟ ಗೊತ್ತು. ಸರ್ಕಾರ ಬುದ್ಧಿಯಿಂದ ನೋಡುವ ಬದಲು, ಹೃದಯದಿಂದ ನೋಡಬೇಕು. ಎಲ್ಲ ಕನ್ನಡಿಗರೂ ನಿಮ್ಮ ಜೊತೆ ಇದ್ದಾರೆ’ ಎಂದು ಲೇಖಕಿ ವಸುಂಧರಾ ಭೂಪತಿ ಹೇಳಿದರು.

ಕೆಪಿಆರ್‌ಎಸ್‌ನ ಮುಖಂಡ ಯಶವಂತ್, ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಮನಮೋಹನ್, ನಿವೃತ್ತ ಉಪನ್ಯಾಸಕ ಚಂದ್ರಶೇಖರ್ ತಾಳ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು.

‘ನೀವೇನು ರಾಜರಲ್ಲ’

‘ದುಡಿಯುವ ಹೆಣ್ಣುಮಕ್ಕಳನ್ನು ಬೀದಿಗೆ ತಂದಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಆಶಾ ಕಾರ್ಯಕರ್ತೆಯರಿಗೆ ಸೇವಾ ಭದ್ರತೆ ಒದಗಿಸಬೇಕು’ ಎಂದು ನಟಿ ತಾರಾ ಆಗ್ರಹಿಸಿದರು. ​ಇದೇ ವೇಳೆ ಸಚಿವ ನರೇಂದ್ರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿ, ‘ಸ್ವಾಮಿ, ಹಾರ ಕೊಡಲು ನೀವೇನು ರಾಜರಲ್ಲ. ನಿಮ್ಮನ್ನು ಅಧಿಕಾರಕ್ಕೆ ತರುವವರು ಜನ’ ಎಂದು ಎಚ್ಚರಿಸಿದರು.

‘ಸಂಬಳ ಹೇಗೆ ಹೆಚ್ಚಿಸಿಕೊಂಡರು?’

‘ಮುಖ್ಯಮಂತ್ರಿ ಖಜಾನೆ ಖಾಲಿ ಎಂದು ಹೇಳುತ್ತಿದ್ದಾರೆ. ಖಜಾನೆ ಖಾಲಿ ಇರುವವರು ಅದು ಹೇಗೆ ಮಂತ್ರಿಗಳ ಸಂಬಳ ಹೆಚ್ಚಿಸಿಕೊಂಡರು? ಕುಮಾರ ಕೃಪಾದ ವಿನ್ಯಾಸವನ್ನು ಹೇಗೆ ಬದಲಿಸಿಕೊಂಡರು? ಈಗಾಗಲೇ 9 ದಿನಗಳು ಕಳೆದಿವೆ. ಇನ್ನಾದರೂ ‘ಆಶಾ’ಗಳ ಬೇಡಿಕೆಗಳನ್ನು ಈಡೇರಿಸದಿದ್ದರೆ ರೈತ‌ ಸಂಘಟನೆಗಳು ಹಳ್ಳಿಹಳ್ಳಿಗಳಲ್ಲಿ ಪ್ರತಿಭಟನೆಗೆ ಕರೆ ನೀಡಬೇಕಾಗುತ್ತದೆ’ ಎಂದು ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.

ಕುಸಿದುಬಿದ್ದ ಮಹಿಳೆ

ಯಾದಗಿರಿ ಜಿಲ್ಲೆಯ ಆಶಾ ಕಾರ್ಯಕರ್ತೆ ಚಾಂದಬಿ ಅವರಿಗೆ ಬುಧವಾರ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಪ್ರತಿಭಟನಾ ಸ್ಥಳದಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಆಂಬುಲೆನ್ಸ್ ಮೂಲಕ ಕರೆದೊಯ್ದು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೋವಿಡ್‌ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸ ಅತ್ಯಂತ ಶ್ಲಾಘನೀಯ. ನಿಮ್ಮ ಕಷ್ಟ, ಸುಖ ವಿಚಾರಿಸುವುದು ನಮ್ಮ ಕರ್ತವ್ಯ

ಅವಿನಾಶ್‌ ನಟ

261126-51-35321522