ಬೆಂಗಳೂರು: ‘ಕಾಂಗ್ರೆಸ್ ಕಾರ್ಯಕರ್ತರ ಗಂಜಿ ಕೇಂದ್ರಕ್ಕೆ ಸುಮಾರು ₹2,000 ಕೋಟಿ ಖರ್ಚು ಮಾಡುವ ಸರ್ಕಾರ, ಆಶಾ ಕಾರ್ಯಕರ್ತೆಯರಿಗೆ ₹480 ಕೋಟಿ ನೀಡಲು ಮುಂದಾಗುತ್ತಿಲ್ಲ. ಆ ಹೆಣ್ಣುಮಕ್ಕಳ ಶಾಪ ಕಾಂಗ್ರೆಸ್‌ಗೆ ತಟ್ಟಲಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಶಾ ಕಾರ್ಯಕರ್ತೆಯರು ಹೋರಾಟ ಆರಂಭಿಸಿ ಹತ್ತು ದಿನಗಳಾಗಿದೆ. ಬೆಳಗಾವಿ ಅಧಿವೇಶನ ಆರಂಭವಾದರೆ ಅಧಿಕಾರಿಗಳು ಗಂಟು ಮೂಟೆ ಕಟ್ಟಿಕೊಂಡು ಹೋದರೆ ಮತ್ತೆ ಇಲ್ಲಿ ಯಾರೂ ಇರುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಡಿ.ಕೆ.ಶಿವಕುಮಾರ್ ಅವರು ವೀಡಿಯೊ ಕಾಲ್ ಮಾಡುವ ಬದಲು ನೇರವಾಗಿ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಅಹವಾಲು ಆಲಿಸಲಿ. ಇಲ್ಲವಾದರೆ ಅವರು ರಿಯಲ್ ಎಸ್ಟೇಟ್ ಉದ್ಯಮಿ ಎಂದು ಸಾಬೀತಾಗುತ್ತದೆ’ ಎಂದರು.

‘ಸೋನಿಯಾ ಗಾಂಧಿಯವರ ಪುಸ್ತಕ ಬಿಡುಗಡೆಗೆ ಕಾಂಗ್ರೆಸ್‌ನವರು ಎಲ್ಲಿಲ್ಲದ ಉತ್ಸಾಹ ತೋರಿದ್ದರು. ಸಚಿವ ಮುನಿಯಪ್ಪ ಹತ್ತು ಸಾವಿರ ಪುಸ್ತಕ ಖರೀದಿ ಮಾಡುವುದಾಗಿ ಹೇಳಿದ್ದಾರೆ. ಪುಸ್ತಕ ಮಾರಾಟಕ್ಕೂ ಮೊದಲು ಜನರ ಸಮಸ್ಯೆ ಆಲಿಸಬೇಕು. ಇದಕ್ಕೆ ತೋರುವ ಉತ್ಸಾಹವನ್ನು ಆಶಾ ಹೋರಾಟಗಾರರ ಸಮಸ್ಯೆ ಈಡೇರಿಸಲು ತೋರಿಸಲಿ’ ಎಂದರು.

‘ರಾಜೀನಾಮೆ ನಾಟಕ’: ‘ನಯನಾ ಮೋಟಮ್ಮ ಸೇರಿ ಕಾಂಗ್ರೆಸ್ ಶಾಸಕರು ಜನರ ಕಣ್ಣಿಗೆ ಮಣ್ಣೆರಚಲು ರಾಜೀನಾಮೆ ನಾಟಕವಾಡಿದ್ದಾರೆ. ರಾಜೀನಾಮೆ ಪತ್ರ ಒಂದು ಸಾಲಿನಲ್ಲೇ ಇರಬೇಕು.‌ ಆದರೆ ಅದನ್ನು ಒಂದು ಸಾಲಿನಲ್ಲಿ ಬರೆದಿಲ್ಲ ಹಾಗೂ ನೇರವಾಗಿ ಸಭಾಧ್ಯಕ್ಷರಿಗೆ ನೀಡಿಲ್ಲ. ಹೀಗೆ ಸುಮ್ಮನೆ ಮೊದಲೇ ಮಾತಾಡಿಕೊಂಡು ನಾಟಕ ಮಾಡಿದ್ದಾರೆ.‌ ಅವರು ನಿಜಕ್ಕೂ ರಾಜೀನಾಮೆ‌ ನೀಡಿದ್ದರೆ ಆನೆಗಾಗಿ ರಾಜೀನಾಮೆ ನೀಡಿದ್ದರು ಎಂದು ದಾಖಲೆಯಾಗುತ್ತಿತ್ತು’ ಎಂದು ಅಶೋಕ ಟೀಕಿಸಿದರು.

‘ಸಮನ್ವಯ ಸಮಿತಿ ಸಭೆ’: ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಮನ್ವಯ ಸಮಿತಿ ಸಭೆ ಗುರುವಾರ ನಡೆಯಲಿದೆ. ಟಿಕೆಟ್ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಚುಟುಕಾಗಿ ಉತ್ತರಿಸಿದರು. ‘ಮುಖ್ಯಮಂತ್ರಿ ಬಂಡವಾಳ ಆಕರ್ಷಣೆಗೆ ಜಪಾನ್‌ ಸುತ್ತುತ್ತಿದ್ದರೆ, ಇತ್ತ ಇಷ್ಟು ವರ್ಷದಲ್ಲಿ ಇವರು ಬೆಂಗಳೂರಿಗೆ ಏನೂ ಮಾಡದೆ ಕಂಪನಿಗಳು ಮಹಾರಾಷ್ಟ್ರ, ಆಂಧ್ರಕ್ಕೆ ಹೋಗುತ್ತಿವೆ’ ಎಂದರು.

ಹಿಂದಿನ ಚುನಾವಣೆಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸಿದ್ದರು. ಈಗ ಇಬ್ಬರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅವರು ಪಾಠ ಕಲಿಸಲಿದ್ದಾರೆ ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ

261126-4-1117867330