ಮೈಸೂರು: ‘ನನ್ನ ಹಾಗೂ ಸಿದ್ದರಾಮಯ್ಯ ಅವರದ್ದು 40 ವರ್ಷದ ಸ್ನೇಹ. ನಾವಿಬ್ಬರೂ ಯಾವತ್ತೂ ಜಗಳವನ್ನೇ ಮಾಡಿಲ್ಲ. ಹೀಗಿರುವಾಗ ಅಂತರ, ಮುನಿಸು ಎಲ್ಲಿಂದ ಬಂತು? ನಮ್ಮ ಸ್ನೇಹ ಅಷ್ಟು ಬೇಗ ಬಿರುಕು ಬಿಡುವುದಿಲ್ಲ. ಒಮ್ಮೆ ಸ್ನೇಹಿತರಾದವರು ಯಾವಾಗಲೂ ಸ್ನೇಹಿತರೇ...’
ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರನ್ನು ಬುಧವಾರ ಕುವೆಂಪು ನಗರದಲ್ಲಿರುವ ನಿವಾಸದಲ್ಲಿ ಕಂಡು ಮಾತುಕತೆ ನಡೆಸಿ ಹೊರಬಂದ ಶಾಸಕ ಡಾ.ಎಚ್.ಸಿ. ಮಹದೇವಪ್ಪ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಕೆಲವು ತಿಂಗಳಿಂದ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಂಡಿದ್ದ ಅವರ ಈ ದಿಢೀರ್ ಭೇಟಿ ಸಹಜವಾಗಿ ಕುತೂಹಲ ಮೂಡಿಸಿತ್ತು.
ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ‘ಸಿದ್ದರಾಮಯ್ಯ ಮನೆಗೆ ನಾನು ಬರುವುದು ಹೊಸದೇನಲ್ಲ. ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯಗಳೂ ಇಲ್ಲ. ಎಲ್ಲವೂ ಊಹಾಪೋಹಗಳು ನಡೆಯುತ್ತಿದ್ದವು. ಜಗಳ ಆಡಿಲ್ಲದ ಮೇಲೆ ಒಂದಾಗುವ ಪ್ರಶ್ನೆ ಎಲ್ಲಿಂದ ಬರುತ್ತದೆ’ ಎಂದರು. ಸಂವಿಧಾನ ದಿನಾಚರಣೆ ವಿಚಾರದಲ್ಲೂ ಯಾವ ಗೊಂದಲಗಳು ಕೂಡ ಇಲ್ಲ ಎಂದರು.
ಸಿದ್ದರಾಮಯ್ಯ ಅವರಿಗೆ ಹಸ್ತಲಾಘವ ಮಾಡುವಂತೆ ಸಚಿವ ಜಮೀರ್ ಮಾಡಿದ ಸನ್ನೆಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ‘ನಮ್ಮಲ್ಲಿ ಆ ತರಹದ ಔಪಚಾರಿಕತೆ ಹಿಂದಿನಿಂದಲೂ ಇಲ್ಲ’ ಎಂದರು.
261126-39-2032933969

