ಬೆಂಗಳೂರು: ‘ರಾಹುಲ್ ಗಾಂಧಿಯವರೇ ನನಗೆ ಭರವಸೆ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ಸಚಿವ ಸ್ಥಾನದ ಬಗ್ಗೆ ತೀರ್ಮಾನ ಆಗುವ ವಿಶ್ವಾಸವಿದೆ. ನನಗೆ ಅವಕಾಶ ಸಿಗಲಿದೆ’ ಎಂದು ವಿಜಯನಗರ ಶಾಸಕ ಎಂ. ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘ತಾಳ್ಮೆ ನನ್ನ ದೌರ್ಬಲ್ಯವಲ್ಲ, ನನ್ನ ಶಕ್ತಿ. ತಾಳ್ಮೆಯನ್ನು ಪಕ್ಷ ಗುರುತಿಸುವ ವಿಶ್ವಾಸವಿದೆ. ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನಕ್ಕೂ ಮೊದಲು ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆಂಬ ಭರವಸೆಯಿದೆ’ ಎಂದರು.

‘ಪಕ್ಷ ನನ್ನ ಕೈ ಬಿಡಲ್ಲ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇದ್ದಾರೆ. ಅವರಿಬ್ಬರೂ ತೀರ್ಮಾನ ಮಾಡಿದ್ದು, ನನಗೆ ಸಚಿವ ಸ್ಥಾನ ಸಿಗುವ ಭರವಸೆಯಿದೆ. ನಾನು ಜೆಡಿಎಸ್‌ ಸೇರುವುದು ಊಹಾಪೋಹ’ ಎಂದರು.

‘ಪಕ್ಷ ಹೇಳಿದಂತೆ ನನ್ನನ್ನು ಸಚಿವನನ್ನಾಗಿ ಮಾಡಲಿದೆ. ನಾನು ಪಕ್ಷ ಹೇಳಿದಂತೆ ನಡೆದುಕೊಂಡು ಬಂದಿದ್ದೇನೆ. ಹಾಗೆಂದು, ವೆಯ್ಟಿಂಗ್‌ ಲಿಸ್ಟ್‌ನಲ್ಲಿ ಇಲ್ಲ. ಬಿಜೆಪಿ ಅವಧಿಯಲ್ಲಿ ಪ್ರಿಯಕೃಷ್ಣ ಒಬ್ಬರೇ ಗೆದ್ದಿದ್ದು. ಯಡಿಯೂರಪ್ಪ ಅವಧಿಯಲ್ಲೂ ಎಲ್ಲರ ನಡುವೆ ಒಬ್ಬನೇ ಗೆದ್ದಿದ್ದು. ಪಕ್ಷ ಅವಕಾಶ ಕೊಟ್ಟಾಗ ಪ್ರಿಯಕೃಷ್ಣ ಗೆದ್ದಿದ್ದಾರೆ’ ಎಂದರು.

‘ಪಕ್ಷ ಬದಲಾವಣೆ ಮಾಡುವ ಪ್ರಶ್ನೆಯಿಲ್ಲ. ಸಚಿವ ಸ್ಥಾನ ಹಿಂದೆ ಸಿಕ್ಕಿದೆ, ಈಗ ಸಿಕ್ಕಿಲ್ಲ ಎನ್ನುವ ಅಸಮಾಧಾನವೂ ಇಲ್ಲ. ಮುಂದಿನ ಬಾರಿಯೂ ನಾವು (ಕಾಂಗ್ರೆಸ್) ಅಧಿಕಾರಕ್ಕೆ ಬರುತ್ತೇವೆ. ನಮ್ಮ ಪಕ್ಷ 150 ಸ್ಥಾನ ಗೆಲ್ಲಲಿದೆ’ ಎಂದರು.

‘ಕಳೆದ ಅಧಿವೇಶನಕ್ಕೆ ಅನಿವಾರ್ಯ ಕಾರಣಗಳಿಂದ ಹೋಗಿರಲಿಲ್ಲ. ಚಳಿಗಾಲದ ಅಧಿವೇಶನಕ್ಕೆ ಬರುವ ಬಗ್ಗೆ ನೋಡೋಣ’ ಎಂದರು.

261126-4-2006611325