ಹಾವೇರಿ, ನವೆಂಬರ್ 24: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹಾವೇರಿಯಲ್ಲಿ ನಡೆಸುತ್ತಿದ್ದ ರೈತರ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ. ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ದರ ನೀಡಬೇಕು ಎಂದು ಪಟ್ಟು ಹಿಡಿದಿದ್ದ ರೈತರು, ಸತತ 14 ಗಂಟೆಗಳ ಸಭೆ ಮತ್ತು ಮಾತುಕತೆ ಬಳಿಕ 3,225 ರೂಪಾಯಿ ದರಕ್ಕೆ ತಾತ್ಕಾಲಿಕ ಒಪ್ಪಿಗೆ ಸೂಚಿಸಿದ್ದಾರೆ. ನಸುಕಿನ ಜಾವ 2 ಗಂಟೆಯವರೆಗೂ ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಈ ದರ ನೀಡಲು ಒಪ್ಪಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಒಳನುಗ್ಗಿ ಪ್ರತಿಭಟನೆ ನಡೆಸಿದ ರೈತರು

ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ್, ರೈತ ಮುಖಂಡ ಚೂನಪ್ಪ ಪೂಜಾರಿ ಸೇರಿದಂತೆ ಸುಮಾರು 30 ರೈತ ಮುಖಂಡರು ಹಾಗೂ ಮೂರು ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವೆ ಮಾತುಕತೆ ನಡೆಯಿತು. ಆರಂಭದಲ್ಲಿ ಪ್ರತಿ ಟನ್ ಕಬ್ಬಿಗೆ 3,100 ರೂಪಾಯಿಗಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಕಾರ್ಖಾನೆ ಮಾಲೀಕರು ಪಟ್ಟು ಹಿಡಿದಿದ್ದರು. ಇದರಿಂದ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ಗೇಟ್ ಮೂಲಕ ಒಳನುಗ್ಗಿ ಪ್ರತಿಭಟನೆ ನಡೆಸಿದರು. ಕೆಲ ರೈತರು ಜಿಲ್ಲಾಧಿಕಾರಿ ಕಚೇರಿ ಎದುರೇ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಆರನೇ ಸುತ್ತಿನ ಸಭೆಯಲ್ಲಿ ದರ ಅಂತಿಮ

ಐದನೇ ಸುತ್ತಿನ ಸಭೆಯಲ್ಲೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮತ್ತೆ ಆರನೇ ಸುತ್ತಿನ ಮಾತುಕತೆ ನಡೆಸಲಾಯಿತು. ಹಾವೇರಿ ಜಿಲ್ಲೆಯಲ್ಲಿ ಕಬ್ಬಿನ ರಿಕವರಿ ಪ್ರಮಾಣ ಶೇ 9.4ರಷ್ಟಿರುವುದರಿಂದ 3,100 ರೂಪಾಯಿಗಿಂತ ಹೆಚ್ಚು ದರ ನೀಡಲು ಸಾಧ್ಯವಿಲ್ಲ ಎಂದು ಕಾರ್ಖಾನೆ ಮಾಲೀಕರು ವಾದಿಸಿದರು. ಆದರೆ, ಇದಕ್ಕೆ ರೈತ ಮುಖಂಡರು ಒಪ್ಪಲಿಲ್ಲ. ಸತತ ಮಾತುಕತೆಯ ಬಳಿಕ ಪ್ರತಿ ಟನ್ ಕಬ್ಬಿಗೆ 3,225 ರೂಪಾಯಿ ನೀಡಲು ಕಾರ್ಖಾನೆ ಮಾಲೀಕರು ಒಪ್ಪಿಕೊಂಡರು. ರೈತ ಮುಖಂಡ ಚೂನಪ್ಪ ಪೂಜಾರಿ ಅವರು ಈ ದರಕ್ಕೆ ತಾತ್ಕಾಲಿಕ ಒಪ್ಪಿಗೆ ಸೂಚಿಸಿರುವುದಾಗಿ ತಿಳಿಸಿದರು.

ಕಬ್ಬಿನ ತೂಕದಲ್ಲಿ ಮೋಸ, ರಿಕವರಿ ಲ್ಯಾಬ್‌ಗೆ ಆಗ್ರಹ

ಹಾವೇರಿ ಜಿಲ್ಲೆಯಲ್ಲಿ ಕಬ್ಬಿನ ತೂಕ ಮಾಡುವಾಗ ರೈತರಿಗೆ ಮೋಸವಾಗುತ್ತಿದೆ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಆರೋಪಿಸಿದ್ದಾರೆ. ಕಬ್ಬಿನ ರಿಕವರಿ ಪ್ರಮಾಣವನ್ನು ವೈಜ್ಞಾನಿಕವಾಗಿ ಪರಿಶೀಲಿಸಲು ಪ್ರತ್ಯೇಕ ಪ್ರಯೋಗಾಲಯ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ರಿಕವರಿ ಲ್ಯಾಬ್ ನಿರ್ಮಾಣಕ್ಕಾಗಿ 500 ಕೋಟಿ ರೂಪಾಯಿ ಮೀಸಲಿಡಬೇಕು ಹಾಗೂ ಈ ವಿಚಾರವನ್ನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಇದೇ ವೇಳೆ, ದಾವಣಗೆರೆ ಮತ್ತು ಗದಗ ಜಿಲ್ಲೆಗಳ ಸಕ್ಕರೆ ಕಾರ್ಖಾನೆ ಮಾಲೀಕರು ಹಾವೇರಿಯಲ್ಲಿ ನಿಗದಿಪಡಿಸುವ ದರವನ್ನೇ ತಮ್ಮ ಕಾರ್ಖಾನೆಗಳಲ್ಲೂ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಸಿಎಂ ಜತೆ ಚರ್ಚಿಸಿ ರಿಕವರಿ ಲ್ಯಾಬ್ ನಿರ್ಮಾಣ: ಸಚಿವರು

ಮಾತುಕತೆ ಬಳಿಕ ಪ್ರತಿಕ್ರಿಯಿಸಿದ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಪ್ರತಿ ಟನ್ ಕಬ್ಬಿಗೆ 3,225 ರೂಪಾಯಿ ದರಕ್ಕೆ ರೈತರು ತಾತ್ಕಾಲಿಕವಾಗಿ ಒಪ್ಪಿದ್ದಾರೆ ಎಂದು ತಿಳಿಸಿದರು. ರಿಕವರಿ ಲ್ಯಾಬ್ ಸ್ಥಾಪನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಟನ್​ ಕಬ್ಬಿಗೆ 3500 ರೂ.ಗೆ ಪಟ್ಟು: ವಿಜಯಪುರ – ಬೆಳಗಾವಿ ಹೆದ್ದಾರಿ ಬಂದ್ ಮಾಡಿ ರೈತರ ಪ್ರತಿಭಟನೆ

ಬೆಳಗಾವಿ ಬಳಿಕ ಹಾವೇರಿಯಲ್ಲೂ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದೀಗ ದರ ನಿಗದಿಯಾದ ಹಿನ್ನೆಲೆಯಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಹಾಕಿದ್ದ ದಿಗ್ಬಂಧನವನ್ನು ತೆರವುಗೊಳಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಇರಿಸಿದ್ದ ಕಲ್ಲು, ಕಟ್ಟಿಗೆ ಹಾಗೂ ಮುಳ್ಳಿನ ಬೇಲಿಗಳನ್ನೂ ತೆಗೆದುಹಾಕಿದ್ದಾರೆ. ಆದರೆ, ತಮ್ಮ ಬೇಡಿಕೆಗಳು ಈಡೇರದಿದ್ದರೆ ಮುಂದಿನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9, ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ