ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಬಲವಾಡಿ ಗ್ರಾಮದ ದಿನಗೂಲಿ ಕಾರ್ಮಿಕರ ಪುತ್ರ ಭೂಷಣ್ ಠಾಕ್ರೆ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಛಲದಿಂದ 'ಕೌನ್ ಬನೇಗಾ ಕರೋಡ್ಪತಿ 18' (KBC 18) ಕಾರ್ಯಕ್ರಮದ ಈ ಸೀಸನ್ನ ಮೊದಲ ಕೋಟ್ಯಾಧಿಪತಿಯಾಗಿ ಹೊರಹೊಮ್ಮುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಮಿತಾಭ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಶೋನಲ್ಲಿ ₹1 ಕೋಟಿ ಗೆದ್ದಿರುವ ಭೂಷಣ್, ತಮ್ಮ ಶಿಕ್ಷಣಕ್ಕಾಗಿ ಮಾರಾಟ ಮಾಡಲಾಗಿದ್ದ ತಾಯಿಯ ಚಿನ್ನವನ್ನು ಮರಳಿ ಕೊಡಿಸುವುದಾಗಿ ಹಾಗೂ ತಮಗೆ ಯುಪಿಎಸ್ಸಿಗಿಂತ (UPSC) ಹೆಚ್ಚಾಗಿ ಕೆಬಿಸಿ ಮೇಲೆಯೇ ಭರವಸೆ ಇತ್ತು ಎಂದು ಹೇಳಿಕೊಂಡಿದ್ದಾರೆ.
'ಅಲೆಗಳಿಗೆ ಹೆದರಿದರೆ ದೋಣಿ ದಡ ಸೇರದು, ಪ್ರಯತ್ನಿಸುವವರಿಗೆ ಎಂದಿಗೂ ಸೋಲಾಗದು" ಎಂಬ ಕವಿ ಸೋಹನ್ಲಾಲ್ ದ್ವಿವೇದಿ ಅವರ ಸಾಲುಗಳು ಭೂಷಣ್ ಠಾಕ್ರೆ ಅವರ ಜೀವನಕ್ಕೆ ಅಕ್ಷರಶಃ ಅನ್ವಯಿಸುತ್ತವೆ. ಬಾಲ್ಯದಿಂದಲೂ ತಂದೆ-ತಾಯಿ ಬೇರೆಯವರ ಹೊಲಗಳಲ್ಲಿ ದಿನಗೂಲಿ ಕೆಲಸ ಮಾಡುವುದನ್ನು ನೋಡುತ್ತಾ ಬೆಳೆದ ಭೂಷಣ್, ತಮ್ಮ ಕುಟುಂಬದ ಬಡತನವನ್ನು ಹೋಗಲಾಡಿಸುವ ಕನಸನ್ನು ಇಂದು ನನಸಾಗಿಸಿದ್ದಾರೆ. ತಮ್ಮ ಹೆಸರಿಗೆ ತಕ್ಕಂತೆಯೇ ಕುಟುಂಬಕ್ಕೆ ನಿಜವಾದ 'ಭೂಷಣ' (ಆಭರಣ) ಆಗಿ ಹೊರಹೊಮ್ಮಿದ್ದಾರೆ.
'ದಿನಗೂಲಿ ಮಾಡುತ್ತಿದ್ದ ತಂದೆಯನ್ನು ನೋಡಿ ಹೃದಯ ಕಿತ್ತುಬರುತ್ತಿತ್ತು'
ತಮ್ಮ ಬಾಲ್ಯದ ಸಂಕಷ್ಟಗಳನ್ನು ನೆನೆದ ಭೂಷಣ್, "ನಾವು ಬಾಲ್ಯದಿಂದಲೂ ಕೇವಲ ಕಷ್ಟ, ಸವಾಲು ಮತ್ತು ಬಡತನವನ್ನೇ ನೋಡಿದ್ದೇವೆ. ತಂದೆ-ತಾಯಿ ಬೇರೆಯವರ ಹೊಲಗಳಲ್ಲಿ ಕೂಲಿ ಮಾಡಿ ನನ್ನನ್ನು ಮತ್ತು ನನ್ನ ತಮ್ಮನನ್ನು ಓದಿಸಿದರು. ನಾವು ಸರ್ಕಾರಿ ಶಾಲೆಯ ಹಾಸ್ಟೆಲ್ನಲ್ಲಿ ಇದ್ದು ಓದಿದೆವು. ನನ್ನ ತಂದೆ 55 ವರ್ಷ ವಯಸ್ಸಿನಲ್ಲೂ 20-22 ವರ್ಷದ ಯುವಕರಿಗೆ ಸರಿಸಮಾನವಾಗಿ ಕಷ್ಟಪಟ್ಟು ದುಡಿಯುವುದನ್ನು ನೋಡಿ ನನಗೆ ತುಂಬಾ ದುಃಖವಾಗುತ್ತಿತ್ತು. ಹೆಚ್ಚು ಕೆಲಸ ಮಾಡದಿದ್ದರೆ ಜನರು ಕೆಲಸ ಕೊಡುವುದಿಲ್ಲ ಎಂಬ ಕಾರಣಕ್ಕೆ ಅವರು ಮೈಮುರಿದು ದುಡಿಯುತ್ತಿದ್ದರು ಎಂದಿದ್ದಾರೆ.
ಕಳೆದ 3-4 ವರ್ಷಗಳಲ್ಲಿ ನನ್ನ ತಂದೆ ಒಂದೇ ಒಂದು ಹೊಸ ಬಟ್ಟೆಯನ್ನೂ ಖರೀದಿಸಿರಲಿಲ್ಲ. ಯಾವಾಗಲೂ ಕಲೆ ಬಿದ್ದ ಹಳೆಯ ಬಟ್ಟೆಗಳನ್ನೇ ಧರಿಸುತ್ತಿದ್ದರು. ಯುವಕನಾದ ಮಗ ಮನೆಯಲ್ಲಿ ಕುಳಿತಿದ್ದಾನೆ, ತನಗೆ ಸಹಾಯ ಮಾಡುತ್ತಿಲ್ಲ ಎಂಬ ಪರಿಸ್ಥಿತಿ ನೆನೆದು ಕಣ್ಣೀರು ಬರುತ್ತಿತ್ತು. ಆದರೆ, 'ನೀನು ಕೇವಲ ನಿನ್ನ ಓದಿನತ್ತ ಮಾತ್ರ ಗಮನ ಹರಿಸು' ಎಂದು ತಂದೆ ಹೇಳುತ್ತಿದ್ದರು. ಹೀಗಾಗಿ ನಾನು ಓದು ಮತ್ತು ಕೆಬಿಸಿ ಸಿದ್ಧತೆಯತ್ತ ಸಂಪೂರ್ಣ ಗಮನ ಹರಿಸಿದೆ" ಎಂದು ಭೂಷಣ್ ಭಾವುಕರಾಗಿ ತಿಳಿಸಿದ್ದಾರೆ.
'ಗೆದ್ದ ಹಣದಿಂದ ಅಮ್ಮನಿಗೆ ಒಡವೆ ಖರೀದಿಸುತ್ತೇನೆ'
ಗೆದ್ದಿರುವ ₹1 ಕೋಟಿ ಹಣವನ್ನು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಭೂಷಣ್, ಎರಡು ಪ್ರಮುಖ ಕನಸುಗಳನ್ನು ಹಂಚಿಕೊಂಡಿದ್ದಾರೆ. ಮೊದಲನೆಯದಾಗಿ, ಪ್ರತಿ ತಿಂಗಳು ನಿರಂತರ ಆದಾಯ ಬರುವಂತಹ ಸುರಕ್ಷಿತ ಯೋಜನೆಯಲ್ಲಿ ಹಣವನ್ನು ಹೂಡಿಕೆ (Invest) ಮಾಡಲು ಬಯಸುತ್ತೇನೆ. 'ಈ ಹಿಂದೆ ಚಿನ್ನ ಅಗ್ಗವಾಗಿದ್ದ ಕಾಲದಲ್ಲಿ ನನ್ನ ತಾಯಿ, ತಂದೆಯ ದುಡಿಮೆಯಲ್ಲಿ ಸ್ವಲ್ಪ ಸ್ವಲ್ಪವೇ ಹಣ ಉಳಿಸಿ 20-25 ಗ್ರಾಂ ಚಿನ್ನವನ್ನು ಕೂಡಿಟ್ಟಿದ್ದರು. ಆದರೆ ನನ್ನ ವಿದ್ಯಾಭ್ಯಾಸ ಮತ್ತು ಹಾಸ್ಟೆಲ್ ಖರ್ಚುಗಳಿಗಾಗಿ ಆ ಚಿನ್ನವೂ ಖರ್ಚಾಗಿ ಹೋಯಿತು. ನನ್ನ ತಾಯಿ ಜೀವನಪೂರ್ತಿ ಬೇರೆಯವರು ಒಡವೆ ಧರಿಸುವುದನ್ನು ನೋಡುತ್ತಲೇ ಕಾಲ ಕಳೆದರು; ಈಗ ಅವರು ಸ್ವತಃ ಚಿನ್ನದ ಆಭರಣಗಳನ್ನು ಧರಿಸಿ ಸಂಭ್ರಮಿಸುವುದನ್ನು ನಾನು ನೋಡಬೇಕೆಂದಿದ್ದೇನೆ. ಹೀಗಾಗಿ ತಾಯಿಗೆ ಚಿನ್ನದ ಆಭರಣಗಳನ್ನು ಖರೀದಿಸಿಕೊಡುತ್ತೇನೆ ಎಂದಿದ್ದಾರೆ.
ಜೇಬಿನಲ್ಲಿ ಕೇವಲ ₹24 ಇಟ್ಟುಕೊಂಡು ಮನೆ ಬಿಟ್ಟಿದ್ದ ಯುವಕ!
ಒಂದೂವರೆ ವರ್ಷದ ಹಿಂದೆ, "ಏನಾದರೂ ಸಾಧಿಸದೆ ಮನೆಗೆ ಮರಳುವುದಿಲ್ಲ" ಎಂಬ ಹಠಕ್ಕೆ ಬಿದ್ದು ಭೂಷಣ್ ಮನೆ ಬಿಟ್ಟು ಹೊರಟಿದ್ದರು; ಆ ಸಮಯದಲ್ಲಿ ಅವರ ಜೇಬಿನಲ್ಲಿ ಇದ್ದದ್ದು ಕೇವಲ 24 ರೂಪಾಯಿ ಮಾತ್ರ! "ಮನೆಯಲ್ಲೇನೋ ಸಾಧಿಸದೆ ಬರುವುದಿಲ್ಲ ಎಂದು ಹೇಳಿ ಹೊರಟಿದ್ದೆ, ಆದರೆ ನಿಜವಾಗಿಯೂ ಏನಾದರೂ ಮಾಡಲು ಸಾಧ್ಯವೇ ಎಂಬ ಭಯವೂ ಕಾಡುತ್ತಿತ್ತು. ನನ್ನಂತಹ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹುಡುಗನಿಗೆ ಅಮಿತಾಭ್ ಬಚ್ಚನ್ ಅವರ ಮುಂದೆ ಕುಳಿತುಕೊಳ್ಳುವ ಕನಸು ಕಾಣುವುದೇ ದೊಡ್ಡ ವಿಷಯ. ಆದರೆ ನಾನು ಯಾವಾಗಲೂ ಆಶಾವಾದಿಯಾಗಿದ್ದೆ, ಅದೇ ನನ್ನ ಕೈಹಿಡಿಯಿತು" ಎಂದು ಹೇಳಿದ್ದಾರೆ.
'ಕೌನ್ ಬನೇಗಾ ಕರೋಡ್ಪತಿ' ಭೂಷಣ್ ಪಾಲಿಗೆ ಯಾವಾಗಲೂ ಆಶಾಕಿರಣವಾಗಿತ್ತು. ಈ ಕುರಿತು ಮಾತನಾಡಿದ ಅವರು, "ನನಗೆ ಯುಪಿಎಸ್ಸಿ (UPSC) ಪರೀಕ್ಷೆಗಿಂತ ಹೆಚ್ಚಾಗಿ ಕೆಬಿಸಿ ಮೇಲೆಯೇ ಭರವಸೆ ಇತ್ತು. ನಾನು ಕೋಟ್ಯಾಧಿಪತಿಯಾಗುತ್ತೇನೆ ಎಂದು ಸದಾ ಕಲ್ಪಿಸಿಕೊಳ್ಳುತ್ತಿದ್ದೆ. ಈ ದಿನಕ್ಕಾಗಿ ನಾನು ಬರೋಬ್ಬರಿ 10 ವರ್ಷ ಕಾದಿದ್ದೇನೆ. 2016ರಲ್ಲಿ ನನಗೆ 18 ವರ್ಷ ತುಂಬಿ ಕೆಬಿಸಿಗೆ ನೋಂದಾಯಿಸಲು ಅರ್ಹನಾದಾಗಿನಿಂದ ನಿರಂತರವಾಗಿ ಪ್ರಯತ್ನಿಸುತ್ತಿದ್ದೆ. 2020ರವರೆಗೆ ಆಡಿಷನ್ಗೆ ಕರೆಯೇ ಬಂದಿರಲಿಲ್ಲ; ಬಳಿಕ 2021ರಿಂದ 2026ರವರೆಗೆ ಆಡಿಷನ್ ಕರೆ ಬಂದು ಸಂದರ್ಶನ ನೀಡಿದರೂ ಆಯ್ಕೆಯಾಗಿರಲಿಲ್ಲ. ಕೊನೆಗೂ ಈ ವರ್ಷ ಆಯ್ಕೆಯಾಗಿ ಕೋಟ್ಯಾಧಿಪತಿಯಾಗಿಯೇ ಬಿಟ್ಟೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅಕ್ಷರ ಜ್ಞಾನವಿಲ್ಲದಿದ್ದರೂ ತಮ್ಮ ತಂದೆ-ತಾಯಿ ಕೆಬಿಸಿ ಪ್ರಸಾರವಾದಾಗಲೆಲ್ಲಾ ತಮ್ಮನ್ನು ಕರೆದು ಕೂರಿಸುತ್ತಿದ್ದರು ಮತ್ತು ತಾವು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದಾಗ ಅತೀವ ಸಂತೋಷಪಡುತ್ತಿದ್ದರು ಎಂದು ಭೂಷಣ್ ನೆನೆದಿದ್ದಾರೆ. ಶೋನಲ್ಲಿ 10 ಮತ್ತು 11ನೇ ಪ್ರಶ್ನೆಯ ವೇಳೆ ಸ್ವಲ್ಪ ಅಳುಕಿದ್ದರೂ, ₹1 ಕೋಟಿ ಪ್ರಶ್ನೆಗೆ ದೊಡ್ಡ ರಿಸ್ಕ್ ತೆಗೆದುಕೊಂಡು ಉತ್ತರಿಸಿದ್ದಾಗಿ ತಿಳಿಸಿರುವ ಅವರು, ಆರಂಭದಲ್ಲಿ ಅಮಿತಾಭ್ ಬಚ್ಚನ್ ಅವರನ್ನು ನೋಡಿ ಭಯವಾಗಿದ್ದರೂ, ಬಿಗ್ ಬಿ ತೋರಿದ ಪ್ರೀತಿ ಮತ್ತು ಆತ್ಮೀಯ ಮಾತುಗಳು ತಮ್ಮ ಭಯವನ್ನು ದೂರ ಮಾಡಿದವು ಎಂದು ಹೇಳಿಕೊಂಡಿದ್ದಾರೆ.

