ಬೆಂಗಳೂರು, ನವೆಂಬರ್ 24: ಸಾಮಾಜಿಕ ಜಾಲತಾಣ ದಿಗ್ಗಜ ಮೆಟಾ ಸಂಸ್ಥೆಯ ವಿರುದ್ಧ ಯುವ ಕಾಂಗ್ರೆಸ್ ಸಮರ ಸಾರಿದೆ. ಸಂಸ್ಥೆಯು ರಾಜಕೀಯ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಲ್ಲದೆ, ನಡೆಯನ್ನು ಖಂಡಿಸಿ ಬೆಂಗಳೂರಿನ ವಿವಿಧೆಡೆ ‘ಮೆಟಾ ಬಿಜೆಪಿ ಕಾ ಬೇಟಾ’ ಎಂಬ ಘೋಷಣೆಯೊಂದಿಗೆ ಬೃಹತ್ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ನೇತೃತ್ವದಲ್ಲಿ ಈ ಅಭಿಯಾನ ನಡೆಸಲಾಗಿದೆ. ಮೆಟಾ ಸಂಸ್ಥೆ ಹಾಗೂ ಅದರ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರನ್ನು ಗುರಿಯಾಗಿಸಿಕೊಂಡು ಬ್ಯಾನರ್‌ಗಳನ್ನು ಹಾಕಲಾಗಿದೆ. ಮಾರ್ಕ್ ಜುಕರ್‌ಬರ್ಗ್ ಅವರನ್ನು ವ್ಯಂಗ್ಯವಾಗಿ ‘ಮಾರ್ಕ್ ಬಿಜೆಪಿಬರ್ಗ್’ ಎಂದು ಉಲ್ಲೇಖಿಸಲಾಗಿದೆ.

ಮೆಟಾ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಭಾಷಣಗಳಿಗೆ ಕಡಿವಾಣ ಹಾಕುವ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂಬುದು ಯುವ ಕಾಂಗ್ರೆಸ್‌ನ ಪ್ರಮುಖ ಆರೋಪವಾಗಿದೆ. ಅಲ್ಲದೆ, ಸುಳ್ಳು ಸುದ್ದಿಗಳ ಪ್ರಸಾರಕ್ಕೆ ಅವಕಾಶ ನೀಡುತ್ತಿದೆ ಮತ್ತು ರಾಜಕೀಯ ಪ್ರಭಾವಕ್ಕೆ ಮಣಿಯುವ ಧೋರಣೆ ಅನುಸರಿಸುತ್ತಿದೆ ಎಂದು ಯುವ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಕೆದಾರರ ವೈಯಕ್ತಿಕ ಮಾಹಿತಿಯ ಗೌಪ್ಯತೆ ವಿಚಾರದಲ್ಲೂ ಮೆಟಾ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳು ಯಾವುದೇ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡಬಾರದು. ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಮೆಟಾ ಸಂಸ್ಥೆ ತನ್ನ ಪಕ್ಷಪಾತದ ಧೋರಣೆಯನ್ನು ಕೈಬಿಟ್ಟು, ಹೆಚ್ಚು ಹೊಣೆಗಾರಿಕೆಯಿಂದ ವರ್ತಿಸಬೇಕು ಎಂದು ಯುವ ಕಾಂಗ್ರೆಸ್ ಒತ್ತಾಯಿಸಿದೆ.

ಬೆಂಗಳೂರಿನಾದ್ಯಂತ ಬ್ಯಾನರ್ ಅಭಿಯಾನ

ಬೆಂಗಳೂರಿನ ಸಾದಹಳ್ಳಿ ಗೇಟ್, ನ್ಯೂ ಏರ್‌ಪೋರ್ಟ್ ರಸ್ತೆಯ ಟೋಲ್ ಪ್ಲಾಜಾ ಸಮೀಪ ಹಾಗೂ ಚಿಕ್ಕಜಾಲ ಸೇರಿದಂತೆ ನಗರದ ವಿವಿಧೆಡೆ ಈ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಮೆಟಾ ಸಂಸ್ಥೆಯ ವಿರುದ್ಧ ಯುವ ಕಾಂಗ್ರೆಸ್ ನಡೆಸಿರುವ ಈ ಅಭಿಯಾನ ಗಮನ ಸೆಳೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ