ಬೆಂಗಳೂರು: ‘ಸಚಿವ ಬಾಲಕೃಷ್ಣನಿಗೆ ಕೃಷ್ಣವಿಲ್ಲ, ಕೇವಲ ಬಾಲ ಆತ. ಆ ಬಾಲಕ್ಕೆಲ್ಲ ನಾನು ಉತ್ತರ ನೀಡುವುದಿಲ್ಲ’ ಎಂದು ಶಾಸಕ ಕೆ.ಎನ್‌. ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ರಾಜಣ್ಣ, ‘ಅವರು (ರಾಜಣ್ಣ) ಜೆಡಿಎಸ್‌ಗೆ ಹೋಗುತ್ತಾರ’ ಎಂದು ಹೇಳಿದ ಸಚಿವ ಬಾಲಕೃಷ್ಣ ವಿರುದ್ಧ ಏಕವಚನದಲ್ಲೇ ಅಸಮಾಧಾನ ಹೊರಹಾಕಿದರು. ಅಲ್ಲದೆ, ‘ನಾನೇಕೆ ಜೆಡಿಎಸ್‌ಗೆ ಹೋಗಲಿ’ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ವಿಧಾನಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಭೇಟಿಯಾದ ಕುರಿತಂತೆ ಪ್ರತಿಕ್ರಿಯಿಸಿ, ‘ರಾಜೇಂದ್ರ ರಾಷ್ಟ್ರಮಟ್ಟದ ಸಹಕಾರಿ ಸಂಸ್ಥೆಯಾದ ಕ್ರಿಬ್ಕೋ (ಕೃಷಿಕ್‌ ಭಾರತಿ ಕೋ-ಆಪರೇಟಿವ್‌ ಲಿ.) ನಿರ್ದೇಶಕ. ಕ್ರಿಬ್ಕೋ ಏಷ್ಯಾದಲ್ಲೇ ಅತಿದೊಡ್ಡ ಯೂರಿಯಾ ಉತ್ಪಾದಕ ಸಹಕಾರಿ ಸಂಸ್ಥೆ. ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿಯ ಸಬ್ಸಿಡಿ ಬರಬೇಕಾಗುತ್ತದೆ. ಹೀಗಾಗಿ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ಸಭೆ ಕರೆಯುತ್ತಿರುತ್ತಾರೆ. ಕೇಂದ್ರ ಸಹಕಾರ ಸಚಿವರಾಗಿರುವ ಅಮಿತ್‌ ಶಾ ಅವರನ್ನು  ಆಡಳಿತಾತ್ಮಕ ಕಾರಣಗಳಿಗೆ ಭೇಟಿ ಮಾಡಬೇಕಾಗುತ್ತದೆ. ಕರ್ನಾಟಕದಿಂದ ರಾಜೇಂದ್ರ ಒಬ್ಬರೇ ನಿರ್ದೇಶಕರಾಗಿರುವ ಕಾರಣ ಸಂಪರ್ಕದಲ್ಲಿದ್ದಾರೆ’ ಎಂದು ವಿವರಿಸಿದರು.

ಸ್ಟಿಂಗ್‌ ಕಾರ್ಯಾಚರಣೆ ಕುರಿತಂತೆ ಮಾತನಾಡಿದ ರಾಜಣ್ಣ, ‘ಈ ಕುರಿತಂತೆ ವಿಧಾನಸಭೆಯಲ್ಲಿ ಹಿಂದೆಯೇ ಮಾತನಾಡಿದ್ದೇನೆ. ಇನ್ನೂ 25ರಿಂದ 30 ಸ್ಟಿಂಗ್‌ ಕಾರ್ಯಾಚರಣೆಗಳಿವೆ. ಸಂದರ್ಭಕ್ಕೆ ತಕ್ಕಂತೆ ಒಂದೊಂದನ್ನೇ ಹೊರಗೆ ಹಾಕುತ್ತಾರೆ’ ಎಂದರು.

ಚುನಾವಣಾ ರಾಜಕೀಯದಿಂದ ಸಿದ್ದರಾಮಯ್ಯ ಅವರ ನಿವೃತ್ತಿ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿ, ‘ಸಿದ್ದರಾಮಯ್ಯ ಅವರು ಚುನಾವಣೆಗೆ ನಿಲ್ಲುವುದಿಲ್ಲ ಎನ್ನುವುದೇ ಕಾಂಗ್ರೆಸ್‌ಗೆ ಹೊಡೆತ ನೀಡಲಿದೆ. ಜೊತೆಗೆ, ಅಹಿಂದ ಸಂಘಟನೆಗೂ ಮಾರಕ ಆಗಲಿದೆ. ಚುನಾವಣೆ ರಾಜಕೀಯದಿಂದ ಸಿದ್ದರಾಮಯ್ಯ ದೂರವುಳಿದರೆ ಕಾಂಗ್ರೆಸ್‌ಗೆ ಅಹಿಂದ ಶಕ್ತಿ ಕಡಿಮೆ ಆಗಲಿದೆ’ ಎಂದರು.

‘ಈ ಕುರಿತು ಸಿದ್ದರಾಮಯ್ಯ ಅವರೊಂದಿಗೆ ನಾನು ಮಾತನಾಡಿದ್ದೇನೆ. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪದೇಪದೆ ಹೇಳಬೇಡಿ. ಸಂದರ್ಭ ಬಂದಾಗ ಅದರ ಬಗ್ಗೆ ಚಿಂತನೆ ಮಾಡೋಣ ಎಂದು ತಿಳಿಸಿದ್ದೇನೆ’ ಎಂದರು.