ಬೆಂಗಳೂರು: ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಅಧಿಸೂಚನೆ ಹೊರಡಿಸಿದೆ. ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ.
ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರನ್ನಾಗಿ ನೇಮಿಸಿ ವಿಧಾನಸಭಾ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಮುಖ್ಯ ಸಚೇತಕರಾಗಿದ್ದ ಅಶೋಕ ಎಂ. ಪಟ್ಟಣ ಅವರು ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ ಬೆನ್ನಲ್ಲೆ ಬೇಳೂರು ಅವರನ್ನು ನೇಮಿಸಲಾಗಿದೆ.
ಮಂಜುನಾಥ ಭಂಡಾರಿ ಅವರನ್ನು ವಿಧಾನ ಪರಿಷತ್ ಮುಖ್ಯ ಸಚೇತರನ್ನಾಗಿ ನೇಮಿಸಿ ವಿದಾನ ಪರಿಷತ್ ಸಚಿವಾಲಯ ಈಗಾಗಲೇ ಅಧಿಸೂಚನೆ ಹೊರಡಿಸಿದೆ.
ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡಿದ್ದ 15 ಶಾಸಕರಿಗೆ ನಿಗಮ– ಮಂಡಳಿ ಮತ್ತು ಇತರ ಸ್ಥಾನಮಾನಗಳನ್ನು ಕಾಂಗ್ರೆಸ್ ಹೈಕಮಾಂಡ್ ಇತ್ತೀಚೆಗೆ ಕಲ್ಪಿಸಿತ್ತು. ‘ನನ್ನ ಹಿರಿತನಕ್ಕೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆ ಸೂಕ್ತವಲ್ಲ. ಹೀಗಾಗಿ ತೃಪ್ತಿ ಇಲ್ಲ’ ಎಂದು ಸೇಠ್ ಪ್ರತಿಕ್ರಿಯಿಸಿದ್ದರು.

