ಬೆಂಗಳೂರು: ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಸ್ಥೆಯು, 2022ರ ಜೂನ್‌ 15ರಿಂದ 2026ರ ನವೆಂಬರ್‌ 15ರವರೆಗೆ ಭ್ರಷ್ಟಾಚಾರ ಸಂಬಂಧಿ 46,298 ಪ್ರಕರಣಗಳನ್ನು ದಾಖಲಿಸಿದ್ದು, 29,242 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.

2022ರ ಸೆಪ್ಟೆಂಬರ್‌ 10ರಿಂದ 2026ರ ನವೆಂಬರ್‌ 15ರವರೆಗೆ 322 ದಾಳಿ ಪ್ರಕರಣಗಳು, 976 ಟ್ರ್ಯಾಪ್‌ ಪ್ರಕರಣಗಳು ಮತ್ತು 138 ಇತರೆ ಪ್ರಕರಣಗಳು ದಾಖಲಾಗಿರುತ್ತವೆ. ಭ್ರಷ್ಟಾಚಾರ ನಿಗ್ರಹ ದಳದಿಂದ 2,159 ಪ್ರಕರಣಗಳು ದಾಖಲಾಗಿರುತ್ತವೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

ಈ ಅವಧಿಯಲ್ಲಿ 952 ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, 697 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಈ ಪೈಕಿ 153 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಹೊಸದಾಗಿ 1,115 ಇಲಾಖಾ ವಿಚಾರಣಾ ಪ್ರಕರಣಗಳು ದಾಖಲಾಗಿವೆ. ಹಳೆಯವೂ ಸೇರಿ ಒಟ್ಟು 2,052 ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರಗಳಿಗೆ ಅಂತಿಮ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದೆ.