ಬೆಂಗಳೂರು: ‘ಹೆಚ್ಚು ಸಮರ್ಥ, ಪರಿಸರಸ್ನೇಹಿ, ಎಲ್ಲರಿಗೂ ಬಳಸಲು ಸುಲಭವಾದ ಮತ್ತು ವಾಸಕ್ಕೆ ಯೋಗ್ಯವಾದ ನಗರಗಳನ್ನು ಕಟ್ಟುವ ಪ್ರಯತ್ನದ ಭಾಗವಾಗಿ, ಕರ್ನಾಟಕವು ನಗರ ಯೋಜನೆ, ಸಂಚಾರ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಜಗತ್ತಿನ ಉತ್ತಮ ಪದ್ಧತಿಗಳನ್ನು ಅಧ್ಯಯನ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಜಪಾನ್ ಪ್ರವಾಸದ ವೇಳೆ ಶಿವಕುಮಾರ್ ಅವರು ನಗೋಯಾದ ಸಕಾಏ ಭೂಗತ ಜಾಲವನ್ನು ಸೋಮವಾರ ವೀಕ್ಷಿಸಿ ಮಾತನಾಡಿದರು.
ಇದು ಮೆಟ್ರೋ ನಿಲ್ದಾಣಗಳು, ವಾಣಿಜ್ಯ ಕೇಂದ್ರಗಳು ಮತ್ತು ದೊಡ್ಡ ಕಟ್ಟಡಗಳನ್ನು ಭೂಗತ ದಾರಿಗಳು ಮತ್ತು ಶಾಪಿಂಗ್ ಜಾಗಗಳ ವಿಶಾಲ ಜಾಲದ ಮೂಲಕ ಒಂದಕ್ಕೊಂದು ಜೋಡಿಸುವ ಸಮಗ್ರ ನಗರ ಮೂಲಸೌಕರ್ಯ ವ್ಯವಸ್ಥೆಯಾಗಿದೆ ಎಂದು ಹೇಳಿದರು.
ಈ ಜೋಡಿ ಜಾಲವು ಅಡೆತಡೆಯಿಲ್ಲದ ಸಂಪರ್ಕವನ್ನು ಹೇಗೆ ಕಲ್ಪಿಸುತ್ತದೆ, ನೆಲಮಟ್ಟದ ಮೂಲಸೌಕರ್ಯದ ಮೇಲಿನ ಅವಲಂಬನೆಯನ್ನು ಹೇಗೆ ಕಡಿಮೆ ಮಾಡುತ್ತದೆ ಮತ್ತು ಅಮೂಲ್ಯವಾದ ನಗರದ ಜಾಗವನ್ನು ಹೇಗೆ ಸಮರ್ಥವಾಗಿ ಬಳಸಲು ಅನುವು ಮಾಡಿಕೊಡುತ್ತದೆ ಎಂಬುದನ್ನು ಅವರು ಪರಿಶೀಲಿಸಿದರು.
ಈ ಮಾದರಿಯು ಕರ್ನಾಟಕಕ್ಕೆ, ಅದರಲ್ಲೂ ಬೆಂಗಳೂರು ಮತ್ತು ವೇಗವಾಗಿ ಬೆಳೆಯುತ್ತಿರುವ ಇತರ ನಗರಗಳಲ್ಲಿ ಹೆಚ್ಚುತ್ತಿರುವ ಸಂಚಾರ ಸಮಸ್ಯೆಗಳನ್ನು ಬಗೆಹರಿಸಲು ಪರಿಹಾರೋಪಾಯ ಸೂಚಿಸಬಹುದು ಎಂದು ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜೆಪಿಎನ್ ಟ್ಯಾಕ್ಸಿ: ಟೊಯೋಟಾದ ಜೆಪಿಎನ್ ಟ್ಯಾಕ್ಸಿ ಬಗ್ಗೆಯೂ ಮುಖ್ಯಮಂತ್ರಿ ಹೆಚ್ಚಿನ ಆಸಕ್ತಿ ತೋರಿದರು. ಇದು ಪ್ರಯಾಣಿಕರ ಆರಾಮ ಮತ್ತು ಸುಲಭ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಎಲ್ಪಿಜಿ-ಹೈಬ್ರಿಡ್ ಟ್ಯಾಕ್ಸಿ. ಈ ವಾಹನದಲ್ಲಿ ವಿಶಾಲವಾದ ಒಳಭಾಗ, ಅಗಲವಾದ ಸ್ಲೈಡಿಂಗ್ ಬಾಗಿಲುಗಳು, ಕಡಿಮೆ ಎತ್ತರದ ನೆಲದ ಮೂಲಕ ಹತ್ತುವ ವ್ಯವಸ್ಥೆ ಮತ್ತು ಗಾಲಿಕುರ್ಚಿಗೆ ಅನುಕೂಲವಾದ ಸೌಲಭ್ಯಗಳಿವೆ. ಹೀಗಾಗಿ ಇದು ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಸೂಕ್ತವಾಗಿದೆ.
ಜೆಪಿಎನ್ ಟ್ಯಾಕ್ಸಿಯನ್ನು ಕರ್ನಾಟಕದಲ್ಲಿ ಪರಿಚಯಿಸುವ ಸಾಧ್ಯತೆಯನ್ನು ಪರಿಶೀಲಿಸಲು ಮತ್ತು ರಾಜ್ಯದಲ್ಲಿ ಅದರ ತಯಾರಿಕೆಗೆ ಇರುವ ಅವಕಾಶಗಳನ್ನು ಅಧ್ಯಯನ ಮಾಡಲು ಶಿವಕುಮಾರ್ ಆಸಕ್ತಿ ವ್ಯಕ್ತಪಡಿಸಿದರು.
ಸಮಗ್ರ ನಗರ ಯೋಜನೆ ಮತ್ತು ಹೊಸ ರೀತಿಯ ಸಾರ್ವಜನಿಕ ಸಾರಿಗೆ ಪರಿಹಾರಗಳಲ್ಲಿ ಜಪಾನ್ಗೆ ಇರುವ ಅನುಭವವು, ಕರ್ನಾಟಕದ ನಗರ ಮೂಲಸೌಕರ್ಯವನ್ನು ಆಧುನಿಕಗೊಳಿಸುವ, ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಬಲಪಡಿಸುವ ಮತ್ತು ಜನರ ಜೀವನದ ಗುಣಮಟ್ಟವನ್ನು ಉತ್ತಮಪಡಿಸುವ ಪ್ರಯತ್ನಗಳಿಗೆ ಉಪಯುಕ್ತ ಸಲಹೆಗಳನ್ನು ನೀಡಬಲ್ಲದು ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
