ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಸ್ಥಳಾಂತರ ಮಾಡುವ ಅರಣ್ಯ ಇಲಾಖೆಯ ನಡೆಯನ್ನು ಖಂಡಿಸಿ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಸೋಮವಾರ ಮಧ್ಯಾಹ್ನ ರಾಜೀನಾಮೆ ಪತ್ರದೊಂದಿಗೆ ವಿಧಾನಸೌಧಕ್ಕೆ ಬಂದ ನಯನಾ ಮೋಟಮ್ಮ, ಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ ಅವರ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದರು.

‘ನಾನು ಮೂಡಿಗೆರೆ ಕ್ಷೇತ್ರದ ಶಾಸಕಿ ಸ್ಥಾನಕ್ಕೆ ಸ್ವಯಂಪ್ರೇರಿತವಾಗಿ, ಆದರೆ, ಅತ್ಯಂತ ನೋವು ಹಾಗೂ ಅಸಮಾಧಾನದಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವ ಅವರು, ‘ಚಿಕ್ಕಮಗಳೂರು ಜಿಲ್ಲೆಯ ಯಾವುದೇ ಶಾಸಕರ ಗಮನಕ್ಕೆ ತಾರದೆ ಮತ್ತು ಕ್ಷೇತ್ರದ ಜನಪ್ರತಿನಿಧಿಯಾದ ನನ್ನೊಂದಿಗೂ ಸಮಾಲೋಚನೆ ನಡೆಸದೆ ಏಕಾಏಕಿ ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ತತ್ಕೊಳ ಮೀಸಲು ಅರಣ್ಯಕ್ಕೆ ಆನೆಗಳನ್ನು ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿರುವುದು ಅತ್ಯಂತ ಖಂಡನೀಯ’ ಎಂದಿದ್ದಾರೆ.

‘ಈ ಹಿಂದೆ ಬೇಲೂರಿನಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಘಟನೆಯ ನಂತರ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಲಿಂಗೇಗೌಡರ ಕೋರಿಕೆಯ ಮೇರೆಗೆ ಈ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಆ ಸಂದರ್ಭದಲ್ಲೂ ಚಿಕ್ಕಮಗಳೂರು ಜಿಲ್ಲೆಯ ಒಬ್ಬನೇ ಒಬ್ಬ ಶಾಸಕರ ಅಭಿಪ್ರಾಯವನ್ನಾಗಲಿ, ಒಪ್ಪಿಗೆಯನ್ನಾಗಲಿ ಪಡೆಯುವ ಸೌಜನ್ಯವನ್ನು ಸರ್ಕಾರ ಅಥವಾ ಇಲಾಖೆ ತೋರಿಸಲಿಲ್ಲ. ಆನೆಗಳನ್ನು ಓಡಿಸುವ ಕುರಿತು ಕೈಗೊಂಡಿರುವ ಈ ಏಕಪಕ್ಷೀಯ ನಿರ್ಣಯವು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದ್ದು ಇದನ್ನು ವಿರೋಧಿಸಿ ಕ್ಷೇತ್ರದ ಜನರ ಹಿತರಕ್ಷಣೆಗಾಗಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಬೇಕು’ ಎಂದೂ ಉಲ್ಲೇಖಿಸಿದ್ದಾರೆ.

ರಾಜೀನಾಮೆ ಪತ್ರ ಕ್ರಮಬದ್ಧವಿಲ್ಲ: ‘ನಯನಾ ಮೋಟಮ್ಮ ಸಲ್ಲಿಸಿರುವ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ. ರಾಜೀನಾಮೆ ನೀಡುವವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಒಂದು ಸಾಲಿನ ಕೈ ಬರಹದ ಮೂಲಕ ಪತ್ರ ಸಲ್ಲಿಸಬೇಕು. ಕಾರಣಗಳನ್ನು ತಿಳಿಸಿ ಟೈಪ್‌ ಮಾಡಿದರೆ ಅದು ಕ್ರಮ ಬದ್ಧವಾಗುವುದಿಲ್ಲ’ ಎಂದು ವಿಧಾನಸಭೆ ಸಚಿವಾಲಯದ ಮೂಲಗಳು ತಿಳಿಸಿವೆ.

'ಓಡಿಸಲು ಆದೇಶಿಸಿದ್ದು ಅರಣ್ಯ ಸಚಿವರು'

ಬೆಂಗಳೂರು: 'ಶಾಸಕಿ ನಯನಾ ಮೋಟಮ್ಮ ರಾಜೀನಾಮೆಗೂ ನನಗೂ ಯಾವ ಸಂಬಂಧವೂ ಇಲ್ಲ. ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಆದೇಶಿಸಿರುವುದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರೇ ಹೊರತು, ನಾನಲ್ಲ' ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಸುದ್ದಿಗಾರರ ಜತೆ ಅವರು ಮಾತನಾಡಿದರು. 'ರಾಜೀನಾಮೆ ಕೊಡುವುದು, ಬಿಡುವುದು ನಯನಾ ಮೋಟಮ್ಮ ಅವರ ಇಚ್ಛೆ. ಅದು ಅವರ ಭಾವನೆ. ನಾವೇನು ಮಾಡಲಾಗುತ್ತದೆ' ಎಂದು ಪ್ರಶ್ನಿಸಿದರು.

'ಈ ವಿಚಾರದಲ್ಲಿ ರಾಜಕಾರಣವನ್ನು ಬದಿಗಿಟ್ಟು, ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ' ಎಂದೂ ಹೇಳಿದರು.

'ಬೇಲೂರಿನಲ್ಲಿ ಒಂದು ಎಕರೆಯೂ ಅರಣ್ಯ ಇಲ್ಲ. ಅಂತಹ ಜಾಗಕ್ಕೆ ಆನೆಗಳು ಬಂದುಬಿಟ್ಟಿವೆ. ಅನಾಹುತಗಳಾಗುತ್ತಿವೆ. ರೈತರ ಭೂಮಿಯಲ್ಲಿ ಆನೆ ಲೂಟಿಗೆ ಹೇಗೆ ಅವಕಾಶ ಕೊಟ್ಟಿದ್ದೀರಿ? ಮೊದಲು ಅವುಗಳನ್ನು ಸ್ಥಳಾಂತರಿಸಿ ಎಂದೆಲ್ಲಾ ಜನರು ಗಲಾಟೆ ಮಾಡಿದರು. ಕೊನೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಕಾಡಾನೆಗಳನ್ನು 1.24 ಲಕ್ಷ ಎಕರೆ ವಿಸ್ತೀರ್ಣದ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಆದೇಶ ಮಾಡಿದರು' ಎಂದು ವಿವರಿಸಿದರು.

`ನಯನಾ ಮೋಟಮ್ಮ ಅವರಿಗೆ ನಾನು ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಬೇಲೂರಿನಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ಮಾರ್ಗಮಧ್ಯೆ ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲೇ ಅವುಗಳು ಉಳಿದರೆ ಎನ್ನುವ ಆತಂಕ ಅವರಿಗಿದೆ. ಹಾಗಾಗುವುದಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಸಿದ್ದೇನೆ. ಕಾರ್ಯಾಚರಣೆ ವೇಳೆ 15 -20 ದಿನ ಸಮಸ್ಯೆ ಆಗಬಹುದು ಎಂಬುದನ್ನೂ ಹೇಳಿದ್ದೇನೆ. ಮನವೊಲಿಕೆ ಆಗುವುದು ಬಿಡುವುದು, ಅವರಿಗೆ ಬಿಟ್ಟದ್ದು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಅರಣ್ಯ ಇಲಾಖೆಯ ವೈಫಲ್ಯ'

'ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಆದರೆ, ಶಾಸಕರು ರಾಜೀನಾಮೆ ನೀಡುವುದರಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ' ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು 'ಈಶ್ವರ ಖಂಡ್ರೆ ಅಥವಾ ರಾಮಲಿಂಗಾರೆಡ್ಡಿ ಅವರು ಅರಣ್ಯ ಸಚಿವರಾಗಿ ಮುತುವರ್ಜಿಯಿಂದ ಕೆಲಸ ಮಾಡಿದ್ದಾರೆ. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳೇ ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಾರೆ' ಎಂದು ಆರೋಪಿಸಿದರು.

'ನನ್ನ ಕ್ಷೇತ್ರದಲ್ಲಿ ಆನೆ ಓಡಾಟ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಹಾಕಬೇಕೆಂದು ಎರಡು ವರ್ಷಗಳ ಹಿಂದೆ ತೀರ್ಮಾನವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯೋಚಿಸಿಯೇ ಇಲ್ಲ. ಕ್ಷೇತ್ರದ ಜನರು ಕರೆ ಮಾಡಿದರೆ, ಆನೆ ದಾಳಿಯೋ ಅಥವಾ ಹುಲಿ ದಾಳಿಯೋ ಎಂದು ಕಳವಳ ಪಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನಡೆದುಕೊಳ್ಳುವ ರೀತಿ ನೋಡಿದರೆ, ನಯನ ಮೋಟಮ್ಮ ಅವರ ಆಕ್ರೋಶ ಸರಿಯಾಗಿದೆ' ಎಂದರು.