ಬೆಂಗಳೂರು: ‘ಬಿಜೆಪಿ ಮತ್ತು ಜೆಡಿಎಸ್‌ನವರು ಅಧಿಕಾರದಲ್ಲಿ ಇದ್ದಾಗ ಬಡವರಿಗೆ ನಿವೇಶನ ನೀಡಲಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 15 ಲಕ್ಷ ನಿವೇಶನ ಘೋಷಣೆ ಮಾಡಿದ್ದು, ಇದರಲ್ಲಿ ಮೊದಲು ಕೊಳೆಗೇರಿ ಜನರಿಗೆ ನಿವೇಶನ ನೀಡಲು ಸರ್ಕಾರ ತೀರ್ಮಾನಿಸಿದೆ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ಬಿಬಿಎಂಪಿ ಮಾಜಿ ಸದಸ್ಯ ಜಿ.ಕೆ. ವೆಂಕಟೇಶ್ ಮತ್ತು ಲಗ್ಗೆರೆ ಭಾಗದ ಮುಖಂಡ ಗಣೇಶ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಸೇರಿಸಿಕೊಂಡ ನಂತರ ಅವರು ಮಾತನಾಡಿದರು.
‘ವಸತಿ ಸಚಿವ ಜಮೀರ್ ಅಹ್ಮದ್‌ಖಾನ್ ಮತ್ತು ಮುಖ್ಯಮಂತ್ರಿ ಅವರು ಮುಂದಿನ ಒಂದೇ ವರ್ಷದಲ್ಲಿ 1 ಲಕ್ಷ ಮನೆ ಹಂಚಿಕೆ ಮಾಡಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಕರೆ ನೀಡಿದರು.
‘ಲಪಟಾಯಿಸಿದ್ದು ಯಾರೆಂಬುದು ಗೊತ್ತಿಲ್ಲ’: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾತನಾಡಿ, ‘ಲಗ್ಗೆರೆ ನನಗೆ ಹೊಸದಲ್ಲ. ನಾನು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿದ್ದಾಗ ಲಗ್ಗೆರೆ ಅಭಿವೃದ್ಧಿಗೆ 52 ಎಕರೆ ಜಮೀನು ಕೊಡಿಸಿದ್ದೆವು. ಈಗ 40 ಎಕರೆಗೆ ಬಂದು ನಿಂತಿದೆ. 12 ಎಕರೆಯನ್ನು ಯಾರು ಲಪಟಾಯಿಸಿದರೋ ಗೊತ್ತಿಲ್ಲ’ ಎಂದರು.
ಸಚಿವ ಜಮೀರ್ ಅಹ್ಮದ್ ಖಾನ್, ನಗರ ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ, ಕಾಂಗ್ರೆಸ್ ವಕ್ತಾರೆ ಕುಸುಮಾ ಹನುಮಂತರಾಯಪ್ಪ ಇದ್ದರು.
261124-4-1791360875

