ಬೆಂಗಳೂರು: ‘ಚೆಕ್ ಬೌನ್ಸ್ ಪ್ರಕರಣದಲ್ಲಿ ಲೀಗಲ್ ನೋಟಿಸ್ ಅನ್ನು ಪ್ರಾರಂಭದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸದೇ ಹೋಗುವುದು ಮೂಲಭೂತ ಲೋಪ ಎನಿಸುವುದಿಲ್ಲ. ಬದಲಾಗಿ ಅದನ್ನು ಸರಿಪಡಿಸಬಹುದಾಗಿದೆ’ ಎಂದು ತಿಳಿಸಿರುವ ಹೈಕೋರ್ಟ್ ₹1 ಕೋಟಿ ಮೊತ್ತದ ಎರಡು ಚೆಕ್ ಬೌನ್ಸ್ ಪ್ರಕರಣಗಳನ್ನು ರದ್ದುಗೊಳಿಸಲು ನಿರಾಕರಿಸಿದೆ.

‘ನಮ್ಮ ವಿರುದ್ಧ ಬೆಂಗಳೂರಿನ 15ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾಗಿರುವ ಚೆಕ್ ಬೌನ್ಸ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಎ.ಪ್ರಸಾದ್ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.

‘ಎನ್ಐ ಕಾಯ್ದೆಯ ಕಲಂ 138(ಬಿ) ಅಡಿಯಲ್ಲಿ ನಿಗದಿತ ಅವಧಿಯಲ್ಲಿ ನೋಟಿಸ್ ನೀಡಲಾಗಿದೆ ಮತ್ತು ಅದು ತಲುಪಿದೆ. ವಿಚಾರಣೆ ಇನ್ನೂ ಬಾಕಿ ಇರುವುದರಿಂದ ಮತ್ತು ಪ್ರಕರಣದ ಮುಂದಿನ ಹಂತದಲ್ಲಿ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸಲು ಹಾಗೂ ಸಾಕ್ಷಿ ವಿಚಾರಣೆ ಅಥವಾ ಹೆಚ್ಚುವರಿ ಸಾಕ್ಷ್ಯ ಸಲ್ಲಿಕೆಗೆ ಕಾನೂನಿನಲ್ಲಿ ಅವಕಾಶ ಇರುವುದರಿಂದ, ಇದೊಂದು ಸರಿಪಡಿಸಬಹುದಾದ ಲೋಪವಾಗಿದೆ’ ಎಂದು ನ್ಯಾಯಪೀಠ ವಿವರಿಸಿದೆ.

ಪ್ರಕರಣ: ಸ್ಥಿರಾಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರುದಾರ ಬಿ.ಲಿಂಗಪ್ಪ ಅವರಿಗೆ ಆರೋಪಿ ಪ್ರಸಾದ್ 2018ರ ಅಕ್ಟೋಬರ್‌ನಲ್ಲಿ ತಲಾ ₹50 ಲಕ್ಷದಂತೆ ಒಟ್ಟು ₹1 ಕೋಟಿ ಮೊತ್ತದ ಎರಡು ಚೆಕ್‌ಗಳನ್ನು ನೀಡಿದ್ದರು.

ಚೆಕ್‌ ಬೌನ್ಸ್ ಆದ ಕಾರಣದಿಂದ ಲಿಂಗಪ್ಪ ನೋಟಿಸ್ ಜಾರಿಗೊಳಿಸಿ, ಎನ್ಐ ಕಾಯ್ದೆ ಕಲಂ 138ರ ಅಡಿ ಖಾಸಗಿ ದೂರು ದಾಖಲಿಸಿದ್ದರು.

ದೂರಿಗೆ ಸಂಬಂಧಿಸಿದಂತೆ ಆರೋಪಿ ಪ್ರಸಾದ್, ‘ಎರಡು ಚೆಕ್‌ಗಳಿಗೆ ಸಂಬಂಧಿಸಿದಂತೆ ಒಂದು ನೋಟಿಸ್ ಮಾತ್ರ ನೀಡಲಾಗಿದೆ. ವಿಚಾರಣೆಯ ಹಂತದಲ್ಲಿ ದೂರುದಾರರು ವಿಭಿನ್ನ ಹೇಳಿಕೆ ನೀಡಿದ್ದಾರೆ’ ಎಂದು ಆಕ್ಷೇಪಿಸಿದ್ದರು. ಪ್ರಕರಣ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

261124-14-329911229