ಸೂರ್ಯನಾರಾಯಣ ವಿ., ಬಿ.ವಿ.ಶ್ರೀನಾಥ್

ಕೋವಿಡ್ ಕಾಲದಲ್ಲಿ ದೇಶದ ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದವರು ಆಶಾ ಕಾರ್ಯಕರ್ತೆಯರು. ಮನೆ ಮನೆ ಭೇಟಿ, ಔಷಧ ವಿತರಣೆ, ಆಮ್ಲಜನಕ ಮಟ್ಟದ ಪರೀಕ್ಷೆ, ನಿಷೇಧಿತ ವಲಯಗಳಲ್ಲಿನ ಜನರ ಓಡಾಟದ ಮೇಲೆ ನಿಗಾ ಇಡುವುದು, ಸೋಂಕು ಮತ್ತು ಲಸಿಕೆ ಬಗ್ಗೆ ಜಾಗೃತಿ ಮೂಡಿಸುವುದು– ಹೀಗೆ ತಾವೂ ಸೋಂಕಿನ ಅಪಾಯ ಎದುರಿಸುತ್ತಿದ್ದರೂ, ಸಮುದಾಯದ ಆರೋಗ್ಯ ರಕ್ಷಣೆಗೆ ಶ್ರಮಿಸಿದವರು ಆಶಾ ಕಾರ್ಯಕರ್ತೆಯರು.

ದಿನವೂ ಗ್ರಾಮಗಳಲ್ಲಿ ಸಂಚರಿಸುತ್ತಾ, ಆರೋಗ್ಯ ಸೇವೆಗಳ ವಲಯದಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಕೂಗು ಈಗ ರಾಜ್ಯದ ಶಕ್ತಿಕೇಂದ್ರದಲ್ಲಿ ‍ಪ್ರತಿಧ್ವನಿಸುತ್ತಿದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿರುವ ಸಾವಿರಾರು ಮಹಿಳೆಯರು, ತಮ್ಮ ಪುಟ್ಟ ಮಕ್ಕಳ ಜತೆಗೆ ಬೆಂಗಳೂರಿನ ಚಳಿಯಲ್ಲಿ ನಡುಗುತ್ತಾ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದು, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ತಮಗೆ ಸಿಗುತ್ತಿರುವ ಗೌರವಧನದಿಂದ ಜೀವನದ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲು ಕಷ್ಟವಾಗುತ್ತಿದೆ ಎನ್ನುವುದು ಅವರ ಅಳಲು.

ಹೇಳಿದ್ದೊಂದು, ಆಗಿದ್ದೊಂದು: 2005ರಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ (ಎನ್‌ಆರ್‌ಎಚ್‌ಎಂ) ಅಡಿ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರನ್ನು (ಆಶಾ) ನಿಯೋಜಿಸುವ ಪ್ರಕ್ರಿಯೆ ಆರಂಭಿಸಿತು. ದೇಶದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಗಳನ್ನು ಜನರಿಗೆ ದೊರೆಯುವಂತೆ ಮಾಡುವುದು ಯೋಜನೆಯ ಉದ್ದೇಶವಾಗಿತ್ತು. ಆಶಾ ಕಾರ್ಯಕರ್ತೆಯರು ಸ್ವಯಂಸೇವಕರಾಗಿದ್ದು, ಅವರಿಗೆ ಸಂಬಳ ಇರುವುದಿಲ್ಲ; ಗೌರವಧನವಷ್ಟೆ ನೀಡಲಾಗುವುದು. ಅವರ ಮುಖ್ಯ ಜೀವನೋಪಾಯಕ್ಕೆ ಅಡ್ಡಿಯುಂಟಾಗದಂತೆ ದಿನಕ್ಕೆ ಎರಡ್ಮೂರು ಗಂಟೆಯಷ್ಟೆ ಕೆಲಸ; ಅದೂ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸವಿರುತ್ತದೆ ಎಂದು ಆರಂಭದಲ್ಲಿ ತಿಳಿಸಲಾಗಿತ್ತು.

ಆದರೆ, ಗ್ರಾಮೀಣ ಪ್ರದೇಶದ ಜನರ ಅಗತ್ಯ ಮತ್ತು ಹಲವು ರೀತಿಯ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರು, ಗರ್ಭಿಣಿಯರು, ಮಹಿಳೆಯರ ಕಾರಣಕ್ಕಾಗಿ ಆಶಾ ಕಾರ್ಯಕರ್ತೆಯರು ದಿನದ ಬಹುಪಾಲು ಅವಧಿ ಕೆಲಸಕ್ಕಾಗಿ ಊರು, ಆಸ್ಪತ್ರೆ, ಕಚೇರಿ ಸುತ್ತಬೇಕಾದ ಸಂದರ್ಭ ಸೃಷ್ಟಿಯಾಯಿತು. ಜತೆಗೆ, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸಲೂ ಅವರನ್ನು ಬಳಸಿಕೊಳ್ಳುವ ಪರಿಪಾಟ ಆರಂಭವಾಗಿ, ಅವರಿಗೆ ಕೆಲಸದ ಹೊರೆ ಹೆಚ್ಚಾಯಿತು. 8ರಿಂದ 14 ಗಂಟೆ ಕೆಲಸ ಮಾಡಬೇಕಾದ ದಿನಗಳೇ ತಿಂಗಳಲ್ಲಿ ಹೆಚ್ಚಿರುತ್ತವೆ. ಕೆಲವೊಮ್ಮೆ ವಾರಾಂತ್ಯವೂ ಕೆಲಸ ಮಾಡಬೇಕಾದ ಸ್ಥಿತಿ. ಆದರೆ, ಅವರು ‘ಸ್ವಯಂಸೇವಕರು’ ಎಂದಿರುವುದರಿಂದ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಅವರಿಗೆ ಸೂಕ್ತ ಸಂಬಳ ಸವಲತ್ತು ಒದಗಿಸದೇ, ಕನಿಷ್ಠ ವೇತನವೂ ಸಿಗದಂತಾಗಿದೆ. ಅವರ ಪರಿಸ್ಥಿತಿಯು ‘ಕೆಲಸ ಪೂರ್ಣಕಾಲಿಕ, ಗೌರವಧನ ಅಲ್ಪಕಾಲಿಕ’ ಎನ್ನುವಂತಾಗಿದ್ದು ಇದೇ ಅವರ ಇಂದಿನ ಸಂಕಟಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರು ಕನಿಷ್ಠ ಗೌರವಧನಕ್ಕಾಗಿ ಪ್ರತಿಭಟನೆ, ಮುಷ್ಕರ ನಡೆಸುವುದು ಸಾಮಾನ್ಯ ಎನ್ನುವಂತಾಗಿದೆ.

ಆಶಾ ಕಾರ್ಯಕರ್ತೆಯರಿಗೆ ನೀಡುವ ಗೌರವಧನ, ಪ್ರೋತ್ಸಾಹಧನದಲ್ಲಿ ವಿವಿಧ ರಾಜ್ಯಗಳ ನಡುವೆ ವ್ಯತ್ಯಾಸ ಇದೆ. ಕೆಲವು ರಾಜ್ಯಗಳಲ್ಲಿ ಮಾಸಿಕವಾಗಿ ಗೌರವಧನವನ್ನೇ ನಿಗದಿಪಡಿಸಲಾಗಿಲ್ಲ. ಮಾಡಿದ ಕೆಲಸದ ಆಧಾರದಲ್ಲಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಉತ್ತರ ಪ್ರದೇಶ, ಬಿಹಾರ, ಗುಜರಾತ್‌ನಂತಹ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ, ಕೇರಳಂ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಅಲ್ಪಮಟ್ಟಗೆ ಉತ್ತಮ ಎನ್ನಬಹುದಾದ ಗೌರವಧನ ನೀಡಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿಯೂ, ತಮ್ಮ ಕೆಲಸ ಮತ್ತು ತಮ್ಮ ಜೀವನ ನಿರ್ವಹಣೆಯ ದೃಷ್ಟಿಯಿಂದ ಗೌರವಧನವನ್ನು ₹15 ಸಾವಿರಕ್ಕೆ ಹೆಚ್ಚಿಸಬೇಕು ಎನ್ನುವುದು ಆಶಾ ಕಾರ್ಯಕರ್ತೆಯರ ಒತ್ತಾಯ.

ಬಹುತೇಕ ಆರೋಗ್ಯ ಕಾರ್ಯಕರ್ತೆಯರು, ಗ್ರಾಮೀಣ ಭಾಗದ ಹಿಂದುಳಿದ ವರ್ಗಗಳ ಬಡ ಕುಟುಂಬಗಳಿಗೆ ಸೇರಿದವರು. ಅವರನ್ನು ‘ಸ್ವಯಂಸೇವಕರು’ ಎಂದು ವರ್ಗೀಕರಿಸುವ ಮೂಲಕ ಸರ್ಕಾರಗಳು ಅವರ ದುಡಿಮೆಯ ಮೌಲ್ಯವನ್ನು ಕುಂದಿಸುತ್ತಿವೆ; ಕಡಿಮೆ ಆದಾಯದ ಅನೇಕ ರಾಷ್ಟ್ರಗಳಲ್ಲಿ ಇದೇ ಪ್ರವೃತ್ತಿ ಕಂಡುಬಂದಿದೆ ಎಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರು ಹೇಳುತ್ತಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಕ್ಷೇತ್ರದ ಖಾಸಗೀಕರಣಕ್ಕೆ ಮುಂದಾಗಿದ್ದು, ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವ ಹಣ ಕಡಿತ ಮಾಡಲು ಚಿಂತನೆ ನಡೆಸಿವೆ. ಇದರ ಭಾಗವಾಗಿಯೇ ಕಾಯಂ ಸಿಬ್ಬಂದಿ ನೇಮಕಕ್ಕೆ ಮುಂದಾಗುತ್ತಿಲ್ಲ ಎನ್ನಲಾಗಿದೆ. ತಮಿಳುನಾಡಿನಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಡಯಾಲಿಸಿಸ್ ಸೇವೆ ಒದಗಿಸುವ ಯೋಜನೆ ಜಾರಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕಾಗಿ ವೆಚ್ಚ ಮಾಡುವ ಜವಾಬ್ದಾರಿಯಿಂದ ಸರ್ಕಾರಗಳು ನುಣುಚಿಕೊಳ್ಳುತ್ತಿರುವುದಕ್ಕೆ ಇದೊಂದು ಉದಾಹರಣೆ ಎನ್ನುವ ವಿಶ್ಲೇಷಣೆ ಇದೆ.

ಆಧಾರ: ಸೆಂಟರ್ ಫಾರ್ ಬಜೆಟ್ ಆ್ಯಂಡ್‌ ಗವರ್ನೆನ್ಸ್‌ ಅಕೌಂಟಬಿಲಿಟಿ, ಎನ್‌ಎಚ್‌ಎಂ ವೆಬ್‌ಸೈಟ್, ಸಂಸತ್ತಿನಲ್ಲಿ ಸಚಿವರ ಉತ್ತರ

ಆಶಾ ಕಾರ್ಯಕರ್ತೆಯರು ಏಕೆ ಬೇಕು?

ಭಾರತದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಜಾರಿಗೊಳಿಸುವಾಗ, ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಲಭ್ಯವಾಗಬೇಕು ಎನ್ನುವುದರ ಜತೆಗೆ ತಾಯಿ ಮರಣ ಪ್ರಮಾಣ (ಎಂಎಂಆರ್) ಮತ್ತು ಶಿಶು ಮರಣ ಪ್ರಮಾಣವನ್ನು (ಐಎಂಆರ್) ಕಡಿಮೆ ಮಾಡುವುದೂ ಅದರ ಉದ್ದೇಶವಾಗಿತ್ತು. ಸಮುದಾಯದ ಸಹಭಾಗಿತ್ವ ಇಲ್ಲದೇ ಅದು ಸಾಧ್ಯವಿಲ್ಲ ಎಂದೇ ಆಶಾ ಕಾರ್ಯಕರ್ತೆಯರನ್ನು ಈ ಕಾರ್ಯದಲ್ಲಿ ಒಳಗೊಳ್ಳಲಾಗಿತ್ತು. ದೇಶದಲ್ಲಿ ಈಗ ಎಂಎಂಆರ್, ಐಎಂಆರ್ ಕಡಿಮೆ ಆಗಿದ್ದರೆ, ಅದರಲ್ಲಿ ಈ ಕಾರ್ಯಕರ್ತೆಯರ ಪಾತ್ರವೂ ಇದೆ. ಈ ಸಾಧನೆಗಾಗಿ ಆಶಾ ಕಾರ್ಯಕರ್ತೆಯರಿಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ‘ಜಾಗತಿಕ ಆರೋಗ್ಯ ನಾಯಕರು’ ಪ್ರಶಸ್ತಿ (2022) ದೊರಕಿದೆ. ಭಾರತದಲ್ಲಿ ಮಹಿಳೆಯರು, ಮಕ್ಕಳ ಅಪೌಷ್ಟಿಕತೆಯ ನಿವಾರಣೆಯಲ್ಲೂ ಆರೋಗ್ಯ ಕಾರ್ಯಕರ್ತೆಯರ ಪಾತ್ರ ಹಿರಿದಾಗಿದೆ.

ಇಂದು ವಿವಿಧ ಕಾರಣಗಳಿಂದ ದೇಶದ ಜನಸಂಖ್ಯೆಯಲ್ಲಿ, ಅದರಲ್ಲೂ ಯುವಜನರಲ್ಲಿ, ಮಧುಮೇಹ, ರಕ್ತದೊತ್ತಡದಂಥ ಸಮಸ್ಯೆಗಳು ಹೆಚ್ಚಾಗುತ್ತಿವೆ. ಜಾಗತಿಕ ಮಟ್ಟದಲ್ಲಿಯೇ ಭಾರತದಲ್ಲಿ ಇಂಥವರ ಸಂಖ್ಯೆ ಹೆಚ್ಚಾಗಿದೆ. ಜತೆಗೆ, ದೇಶದಲ್ಲಿ ಮುಂದಿನ ದಿನಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚಲಿದ್ದು, ಯುವಜನರ ಸಂಖ್ಯೆ ಕಡಿಮೆಯಾಗಲಿದೆ. ಈ ಸ್ಥಿತಿ ಎದುರಿಸಲು ಸಾರ್ವಜನಿಕ ಆರೋಗ್ಯ ಸೇವೆಗಳ ಕ್ಷೇತ್ರವು ಹೆಚ್ಚು ಸದೃಢವಾಗಿರಬೇಕಾಗುತ್ತದೆ. ಈ ದಿಸೆಯಲ್ಲಿ ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಪ್ರಸ್ತುತದಲ್ಲಿಯೂ ಭವಿಷ್ಯದಲ್ಲಿಯೂ ಹೆಚ್ಚು ಮಹತ್ವ ಇದೆ. ದೇಶದ ಆರೋಗ್ಯ ಕ್ಷೇತ್ರದ ಆಸರೆ ಎಂದು ಹೆಸರಾಗಿರುವವರೇ ಇಂದು ತಮಗೆ ಆಸರೆ ನೀಡುವಂತೆ ಸರ್ಕಾರಕ್ಕೆ ಮೊರೆಯಿಡುತ್ತಿದ್ದಾರೆ.

ದುಡಿಯುವವರ ವಿಭಜಿಸುವ ಯತ್ನ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಪ್ರೋತ್ಸಾಹಧನವನ್ನು ತಕ್ಷಣವೇ ಹೆಚ್ಚಿಸಬೇಕು. ಹೆಚ್ಚು ಜಿಎಸ್‌ಟಿ ಕಟ್ಟುತ್ತಿರುವ ಎರಡನೇ ರಾಜ್ಯ ಕರ್ನಾಟಕದಲ್ಲಿ ಗೌರವಧನ ಹೆಚ್ಚಿಸಲು ಸಾಧ್ಯವಿಲ್ಲವೇ? ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿದರೆ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಅತಿಥಿ ಶಿಕ್ಷಕರು ಸೇರಿದಂತೆ ಇತರ ವಲಯಗಳ ನೌಕರರೂ ಬೇಡಿಕೆ ಮುಂದಿಡುತ್ತಾರೆ ಎಂಬ ಸರ್ಕಾರದ ವಾದ ಸರಿಯಲ್ಲ. ಒಂದು ವರ್ಗದ ಕಾರ್ಮಿಕರ ಸಂಕಷ್ಟವನ್ನು ಮತ್ತೊಂದು ವರ್ಗದ ಕಾರ್ಮಿಕರ ವಿರುದ್ಧ ಬಳಸುವುದು ದುಡಿಯುವ ಜನರನ್ನು ವಿಭಜಿಸುವ ಪ್ರಯತ್ನವಾಗಿದೆ

ಕೆ.ಸೋಮಶೇಖರ್ ಯಾದಗಿರಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ

ಹೆಚ್ಚಿದ ಜವಾಬ್ದಾರಿ

ನಾವು ಆಶಾ ಕಾರ್ಯಕರ್ತೆಯರಾಗಿ ಸೇರ್ಪಡೆಗೊಳ್ಳುವಾಗ ದಿನಕ್ಕೆ 2–3 ಗಂಟೆ ಕೆಲಸ ಮಾಡಿದರೆ ಸಾಕು ಎಂದು ಹೇಳಿದ್ದರು. 19 ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಕೆಲಸ, ಜವಾಬ್ದಾರಿ ಹೆಚ್ಚಳವಾಗಿದೆಯೇ ವಿನಾ, ನಮಗೆ ನೀಡುತ್ತಿರುವ ಗೌರವಧನ ಅದಕ್ಕೆ ತಕ್ಕಂತೆ ಜಾಸ್ತಿಯಾಗಿಲ್ಲ. ಪ್ರತಿ ಬಾರಿ ಹೋರಾಟ ಮಾಡಿಯೇ ನಾವು ರಾಜ್ಯ ಸರ್ಕಾರವನ್ನು ಎಚ್ಚರಿಸಬೇಕಾಗಿದೆ. ₹10 ಸಾವಿರ ನಿಶ್ಚಿತ ಗೌರವಧನ ನೀಡಲಾಗುವುದು ಎಂದು ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸಿಲ್ಲ. ಕೇರಳಂನಲ್ಲಿ ರಾಜ್ಯ ಸರ್ಕಾರ ಪ್ರತಿ ತಿಂಗಳು ₹12 ಸಾವಿರ ಕೊಡುತ್ತಿದೆ. ನಿವೃತ್ತಿ ಆದಾಗ ₹5 ಲಕ್ಷ ಇಡುಗಂಟು ನೀಡುತ್ತಿದೆ. ನಮ್ಮಲ್ಲಿ ₹20 ಸಾವಿರ ಮಾತ್ರ ಕೊಡಲಾಗುತ್ತಿದೆ. ಹಾಗಾಗಿ, ನಾವು ಚಳಿ–ಬಿಸಿಲು ಲೆಕ್ಕಿಸದೆ ಅಹೋರಾತ್ರಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ

ಕವಿತಾ, ಚಾಮರಾಜನಗರ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ

ಕರ್ನಾಟಕದಲ್ಲಿ ‘ಆಶಾ’ ಹೋರಾಟ

ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಯೋಜನೆಗಳ ಅನುಷ್ಠಾನದಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಅವರು ಇಲ್ಲ ಎಂದರೆ, ಜನರಿಗೆ ಆರೋಗ್ಯ ಸೇವೆಯನ್ನು ತಲುಪಿಸುವುದು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಇಲಾಖೆಯ ಅಧಿಕಾರಿಗಳು ಅಷ್ಟರ ಮಟ್ಟಿಗೆ ಈ ಕಾರ್ಯಕರ್ತೆಯರನ್ನು ಅವಲಂಬಿಸಿದ್ದಾರೆ.

‘ಸರ್ಕಾರ ನಮ್ಮಿಂದ ಎಲ್ಲ ಕೆಲಸಗಳನ್ನೂ ಮಾಡಿಸುತ್ತದೆ. ಆದರೆ, ಅದಕ್ಕೆ ತಕ್ಕಂತೆ ಸಂಬಳ ಕೊಡುವುದಿಲ್ಲ’ ಎಂಬುದು ಆಶಾ ಕಾರ್ಯಕರ್ತೆಯರ ಅಳಲು.

ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು 20 ವರ್ಷಗಳಿಂದ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ.

ತಾವು ಮಾಡುತ್ತಿರುವ ಕೆಲಸಕ್ಕೆ ಸೂಕ್ತ ಸಂಭಾವನೆ ನೀಡಬೇಕು ಎಂಬ ಆಶಾ ಕಾರ್ಯಕರ್ತೆಯರ ಬೇಡಿಕೆ ಆರಂಭದಿಂದಲೂ ಇದೆ. ರಾಜ್ಯದಲ್ಲಿ ಸಂಘಟನೆಯನ್ನು ರೂಪಿಸಿಕೊಂಡ ನಂತರ ಅದರ ಅಡಿಯಲ್ಲೇ ಅವರು ಹೋರಾಟಗಳನ್ನು ಸಂಘಟಿಸುತ್ತಿದ್ದಾರೆ. 2010ರಿಂದಲೂ ಅವರ ಹೋರಾಟಗಳು ನಡೆಯುತ್ತಿವೆ.

‘ನಮ್ಮ ಕಷ್ಟಗಳು ಆಳುವವರ ಕಣ್ಣಿಗೆ ಕಾಣುತ್ತಿಲ್ಲ. ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಪ್ರತಿಬಾರಿಯೂ ಹೋರಾಟ ಮಾಡಿಯೇ ಆಗಬೇಕಾಗಿದೆ. ಈ ಹಿಂದೆಯೂ ಅಷ್ಟೆ. ಹೋರಾಟದ ಮೂಲಕ ಎಚ್ಚರಿಸಿದ ನಂತರವಷ್ಟೇ, ಸರ್ಕಾರ ಗೌರವಧನವನ್ನು ಸ್ವಲ್ಪ ಹೆಚ್ಚಿಸಿತ್ತು. ಕಳೆದ ವರ್ಷವೂ ಇದೇ ಮಾದರಿ ಹೋರಾಟ ಸಂಘಟಿಸಿದ್ದೆವು. ಸರ್ಕಾರ ನೀಡಿದ ಭರವಸೆಗೆ ಮನ್ನಣೆ ನೀಡಿ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದೆವು. ಆದರೆ, ನೀಡಿದ ಭರವಸೆಯಂತೆ ₹10 ಸಾವಿರಕ್ಕೆ ಹೆಚ್ಚಿಸಲಿಲ್ಲ’ ಎಂದು ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಆರಂಭದಲ್ಲಿ, ಮಾಡುವ ನಿರ್ದಿಷ್ಟ ಕೆಲಸಕ್ಕೆ ನಿಗದಿತ ಪ್ರೋತ್ಸಾಹಧನದ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ನಂತರ ಸರ್ಕಾರ ಪ್ರತಿ ತಿಂಗಳು ನಿಶ್ಚಿತ ಮೊತ್ತವನ್ನು ಗೌರವಧನದ ರೂಪದಲ್ಲಿ ನೀಡಲು ನಿರ್ಧರಿಸಿತು. ಇಂತಹ ನಿರ್ಧಾರ ಕೈಗೊಂಡ ಮೊದಲ ರಾಜ್ಯ ಕರ್ನಾಟಕ.

l 2010ರಲ್ಲಿ ಮೊದಲ ಬಾರಿಗೆ ಆಶಾ ಕಾರ್ಯಕರ್ತೆಯರು ಸಮವಸ್ತ್ರ ಸೇರಿದಂತೆ ತಾವು ಮಾಡುವ ಕೆಲಸಕ್ಕೆ ಅತ್ಯಂತ ಅಗತ್ಯವಾದ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಬೀದಿಗೆ ಇಳಿದಿದ್ದರು.

l 2017ರಲ್ಲೂ ಗೌರವಧನ ಹೆಚ್ಚಳಕ್ಕೆ ಕಾರ್ಯಕರ್ತೆಯರು ಹೋರಾಟ ನಡೆಸಿದ್ದರು. ನಂತರ ಅದನ್ನು ತಿಂಗಳಿಗೆ ₹3,500ಕ್ಕೆ ನಿಗದಿ ಪಡಿಸಲಾಯಿತು

l 2019 ನವೆಂಬರ್‌ 1ರಿಂದ ಗೌರವಧನವನ್ನು ಮತ್ತೆ ₹500 ಹೆಚ್ಚಿಸಿ, ₹4,000 ನೀಡಲು ನಿರ್ಧರಿಸಲಾಯಿತು

l ನಂತರದಲ್ಲಿ ಮಾಸಿಕ ಗೌರವಧನವನ್ನು ₹5000 ಎಂದು ನಿಗದಿಪಡಿಸಲಾಗಿತ್ತು.

l ಕೋವಿಡ್‌ ಸಮಯದಲ್ಲಿ ಜೀವಭಯದ ನಡುವೆಯೂ ಕೆಲಸ ಮಾಡಿದ್ದ ಕಾರ್ಯಕರ್ತೆಯರು 2020ರ ಜುಲೈನಲ್ಲಿ ಮತ್ತೆ ಅನಿರ್ದಿಷ್ಟಾವಧಿ ಹೋರಾಟ ನಡೆಸಿದ್ದರು. ಮಾಸಿಕ ಗೌರವಧನವನ್ನು ₹12 ಸಾವಿರಕ್ಕೆ ಹೆಚ್ಚಿಸಬೇಕು ಎಂಬುದು ಅವರ ಆಗ್ರಹವಾಗಿತ್ತು.

261124-51-21380215