ಮಂಗಳೂರು: ‘ರಾಜ್ಯದ ಎಲ್ಲ ಜನೌಷಧ ಕೇಂದ್ರಗಳ ತಪಾಸಣೆ ಪೂರ್ಣಗೊಂಡು ವರದಿ ಬಂದಿದೆ. ಅಂಗಡಿ ಮಾಲೀಕರು ಸ್ಥಳೀಯ ಕಂಪನಿಗಳಿಂದ ಕಡಿಮೆ ದರಕ್ಕೆ ಔಷಧಿ ಖರೀದಿಸಿ ಜನೌಷಧ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಳಪೆ ಔಷಧ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಅತಿ ಕಡಿಮೆ ದರ ನಮೂದಿಸಿ ದವರಿಗೆ ಟೆಂಡರ್ ನೀಡುವ ವ್ಯವಸ್ಥೆಯಿಂದಾಗಿ ಗುಣಮಟ್ಟವಿಲ್ಲದ ಔಷಧ ಪೂರೈಕೆಯಾಗುತ್ತಿದೆ ಎಂದರು. ‘ನವದೆಹಲಿಯಿಂದ ಸಕಾಲಕ್ಕೆ ಔಷಧ ಪೂರೈಕೆಯಾಗದ ಕಾರಣ ಅಂಗಡಿ ಮಾಲೀಕರು ಬಾಡಿಗೆ ಮತ್ತು ವಿದ್ಯುತ್ ಬಿಲ್ ಕಟ್ಟಲಾಗದೆ ಔಷಧ ಖರೀದಿಗೆ ಸ್ಥಳೀಯ ಕಂಪನಿಗಳ ಮೊರೆಹೋಗಿದ್ದಾರೆ. ಅಂಗಡಿ ಮಾಲೀಕರು ಸಾಲ ಮಾಡಿ ವ್ಯಾಪಾರ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಮಾನವೀಯತೆಯಿಂದ ಇನ್ನೂ ಅಂಗಡಿಗಳಿಗೆ ಬೀಗ ಹಾಕಿ ಪ್ರಕರಣ ದಾಖಲಿಸಿಲ್ಲ. ಕೇಂದ್ರ ಆರೋಗ್ಯ ಸಚಿವರು ತಕ್ಷಣ ಸಮಸ್ಯೆಗೆ ಸ್ಪಂದಿಸದೇ ಇದ್ದರೆ ರಾಜ್ಯ ಸರ್ಕಾರ ಅನಿವಾರ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದರು.

ನವದೆಹಲಿಯಲ್ಲಿ ಪ್ಯಾಕ್ ಮಾಡಿದ ನೀರಿನ ಮಾದರಿಯಲ್ಲಿ ರಾಸಾಯನಿಕ ಅಂಶ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿ ಪ್ರತಿ ಕ್ರಿಯಿಸಿದ ಸಚಿವರು, ರಾಜ್ಯದ 112 ನೀರು ಶುದ್ಧೀಕರಣ ಮತ್ತು ಮಿನರಲ್ ವಾಟರ್ ಘಟಕಗಳ ತಪಾಸಣೆ ಮಾಡಿದ್ದು ಲೋಪ ಕಂಡುಬಂದ 12 ಘಟಕಗಳಿಗೆ ಬೀಗ ಜಡಿಯಲಾಗಿದೆ. 60 ಘಟಕಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಲಾಜಿಲ್ಲದೆ ಬಂದ್ ಮಾಡಲಾಗುವುದು. ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಗುಣಮಟ್ಟ ಇಲ್ಲದ ನೀರು ಸರಬರಾಜು ಆಗುತ್ತಿದ್ದರೆ ಅದನ್ನು ನಿಷೇಧಿಸಲಾಗುವುದು ಎಂದು ಹೇಳಿದರು.