ನವದೆಹಲಿ: ಕಾವೇರಿ ಕಣಿವೆಯ ಹೆಚ್ಚುವರಿ ನೀರು ಬಳಕೆಗೆ ತಮಿಳುನಾಡು ಕೈಗೆತ್ತಿಕೊಂಡಿರುವ ‘ಕಾವೇರಿ– ವೆಲ್ಲಾರ್–ಗುಂಡಾರ್‌’ ನದಿ ಜೋಡಣೆ ಯೋಜನೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕರ್ನಾಟಕ ಸರ್ಕಾರವು ಮಧ್ಯಂತರ ಅರ್ಜಿ ಸಲ್ಲಿಸಿದೆ.

ನದಿ ಜೋಡಣೆಗೆ ತಾತ್ವಿಕ ಅನುಮೋದನೆ ನೀಡುವಂತೆ ಹಾಗೂ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2021ರಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಗೆ ತಡೆಯಾಜ್ಞೆ ನೀಡಬೇಕೆಂದು ಕರ್ನಾಟಕ ಸರ್ಕಾರ ಈ ಹಿಂದೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ‘ಕೇಂದ್ರ ಸರ್ಕಾರವು ಈ ಯೋಜನೆಗೆ ಇನ್ನೂ ಅನುಮತಿ ನೀಡಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಪರಿಗಣಿಸುತ್ತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತ್ತು.

‘ಈ ಯೋಜನೆಯು ಕಾವೇರಿ ನ್ಯಾಯಮಂಡಳಿ ತೀರ್ಪಿನ ಸ್ಪಷ್ಟ ಉಲ್ಲಂಘನೆ’ ಎಂದು ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ, ರಾಜ್ಯ ಸರ್ಕಾರ ಹೊಸ ಅರ್ಜಿ ಸಲ್ಲಿಸಿದೆ. ಈ ಅರ್ಜಿಯು ಡಿಸೆಂಬರ್‌ ಎರಡನೇ ವಾರದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ತಕರಾರು ಎತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ‘ಕಾವೇರಿ ನದಿ ಜೋಡಣೆ’ ಯೋಜನೆಗೆ ಆಕ್ಷೇಪಿಸಿ ನ್ಯಾಯಾಲಯದ ಕದ ತಟ್ಟಿದೆ.

ನದಿ ಜೋಡಣೆ ಸಂಬಂಧ ಮದ್ರಾಸ್ ಹೈಕೋರ್ಟ್‌ನ ಪೀಠವು 2024ರ ಆಗಸ್ಟ್‌ನಲ್ಲಿ ಹೊರಡಿಸಿರುವ ಆದೇಶವೊಂದರ ಬಗ್ಗೆ ಕರ್ನಾಟಕಕ್ಕೆ ಮಾಹಿತಿ ಲಭ್ಯವಾಗಿದೆ. ಈ ಆದೇಶದಲ್ಲಿ ತಮಿಳುನಾಡು ಸಲ್ಲಿಸಿದ ಸ್ಥಿತಿಗತಿ ವರದಿಯನ್ನು ಉಲ್ಲೇಖಿಸಲಾಗಿದೆ. ಯೋಜನೆಯ ಮೊದಲ ಹಂತದ ಕೆಲವುಭಾಗಗಳ ಕಾಮಗಾರಿಯು 2021ರಿಂದಲೇ ನಡೆಯುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ,ಈ ವಿಷಯವನ್ನು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ ಮುಂದೆ ಮಂಡಿಸಿರಲಿಲ್ಲ. ರಾಜ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಮೊದಲ ಹಂತದ ಹಲವಾರು ಕಾಮಗಾರಿಗಳು ನಿರ್ಮಾಣ ಪೂರ್ಣಗೊಂಡಿದ್ದು, ಮುಂದಿನ ಕಾಮಗಾರಿಗಳಿಗಾಗಿ ಭೂಸ್ವಾಧೀನವನ್ನೂಮಾಡಿಕೊಳ್ಳಲಾಗಿದೆ. ಹೀಗಾಗಿ, ಈ ಯೋಜನೆಗೆ ಕೂಡಲೇ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಮೆಟ್ಟೂರಿನಿಂದ ನೀರು ಬಳಸುವ ಯೋಜನೆ

ತಮಿಳುನಾಡು ಕಾವೇರಿ– ವೆಲ್ಲಾರ್–ಗುಂಡಾರ್‌ ನದಿ ಜೋಡಣೆ ಯೋಜನೆಗಾಗಿ, ಮೆಟ್ಟೂರು ಅಣೆಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು (8.60 ಟಿಎಂಸಿ ಅಡಿ) ಬಳಸಿಕೊಳ್ಳಲು ಯೋಜಿಸಿದೆ. ಕರ್ನಾಟಕದಿಂದ ಹರಿದು ಬರುವ ಈ ಹೆಚ್ಚುವರಿ ನೀರನ್ನು ತಮಿಳುನಾಡು ಏಕಪಕ್ಷೀಯವಾಗಿ ಬಳಸಿಕೊಂಡರೆ, ಮುಂದೆ ಇದನ್ನೇ ಆಧಾರವಾಗಿಟ್ಟುಕೊಂಡು ಪಾಲು ಕೇಳಬಹುದು. ಇದು ಕಾವೇರಿ ನದಿಯ ಹೆಚ್ಚುವರಿ ನೀರಿನಲ್ಲಿ ಕರ್ನಾಟಕ ಕ್ಕಿರುವ ಹಕ್ಕುಗಳಿಗೆ ಧಕ್ಕೆ ತರಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಯಡಿ ತಮಿಳುನಾಡಿಗೆ ನೀರು ಸಿಗುತ್ತದೆ ಎಂಬ ನೆರೆ ರಾಜ್ಯದ ವಾದವು ಸಮರ್ಥನೀಯವಲ್ಲ. ಸಂಸ್ಥೆ ಸಿದ್ಧಪಡಿಸಿರುವ ವಿವರವಾದ ಯೋಜನಾ ವರದಿ ಪ್ರಕಾರ, ಗೋದಾವರಿ–ಕಾವೇರಿ ನದಿ ಜೋಡಣೆ ಯೋಜನೆಯು ಕಾವೇರಿ ಜಲಾನಯನ ಪ್ರದೇಶವನ್ನು ತಲುಪುವ ಮೊದಲೇ ಕೊನೆಗೊಳ್ಳುತ್ತದೆ. ಅಲ್ಲದೆ, ಈ ಯೋಜನೆಯಡಿ ತಮಿಳುನಾಡಿಗೆ ಪ್ರಸ್ತಾಪಿಸಲಾಗಿದ್ದ ನೀರಿನ ಹಂಚಿಕೆಯನ್ನು 83.27 ಟಿಎಂಸಿ ಅಡಿಗಳಿಂದ 40.93 ಟಿಎಂಸಿ ಅಡಿಗಳಿಗೆ ಇಳಿಸಲಾಗಿದೆ. ಹೀಗಾಗಿ, ಈ ಯೋಜನೆಗೆ ಕೂಡಲೇ ತಡೆ ನೀಡಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

261124-51-699170716