ಬೆಂಗಳೂರು: ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಪಾನ್‌ ಪ್ರವಾಸದಿಂದ ವಾಪಸಾದ ನಂತರ ಆಶಾ ಕಾರ್ಯಕರ್ತೆಯರ ನೋವಿಗೆ ಸ್ಪಂದಿಸಬಹುದೇನೊ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹಗಲು ರಾತ್ರಿ ಎನ್ನದೇ ಚಳಿಯಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಪ, ಹೂವಿನಂತಹ ಹೃದಯ ಹೊಂದಿರುವ ಮುಖ್ಯಮಂತ್ರಿ ಅವರು ಆಶಾ ಕಾರ್ಯಕರ್ತೆಯರಿಗೆ ಸ್ಪಂದಿಸಬೇಕಿತ್ತು. ಅವರದ್ದು ಬಂಡೆಯಂಥ ಹೃದಯ ಅಲ್ಲ‌ ಅನ್ನೋದು ನನ್ನ ಭಾವನೆ. ಬಹುಶಃ ಟೋಕಿಯೋ ಪ್ರವಾಸದಿಂದ ವಾಪಸ್ ಬಂದ ಬಳಿಕ ಈ ಹೆಣ್ಣುಮಕ್ಕಳ ನೋವಿಗೆ ಸ್ಪಂದಿಸಬಹುದು ಎಂಬ ನಿರೀಕ್ಷೆ ಇದೆ’ ಎಂದರು.

‘ಆಶಾ ಕಾರ್ಯಕರ್ತೆಯರ ಶ್ರಮದ ಬಗ್ಗೆ ಬಾಯಿ ಮಾತಿನಲ್ಲಿ ಎಲ್ಲರೂ ಅನುಕಂಪದಿಂದಲೇ ಮಾತನಾಡುತ್ತೇವೆ. ಇಲ್ಲಿ ಕೇಂದ್ರದ ಹೊಣೆ, ರಾಜ್ಯ ಸರ್ಕಾರದ ಹೊಣೆ ಎನ್ನುವುದಕ್ಕಿಂತ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಅವರ ಗೌರವ ಧನ ಹೆಚ್ಚಳ ಮಾಡಲು ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಭಾರತ್‌ ಜೋಡೊ ಸಂಘಗಳ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರಿಗೆ ₹1,000 ಕೋಟಿ ಕೊಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಕೊಡಲು ಮನಸ್ಸಿಲ್ಲವೇನೊ’ ಎಂದು ಪ್ರಶ್ನಿಸಿದರು.

‘ನಮ್ಮ ಮುಖ್ಯಮಂತ್ರಿಗಳದ್ದು ಬಂಡೆ ರೀತಿಯ ಹೃದಯ ಅಲ್ಲ. ಹೂವಿನಂತಹ ಹೃದಯ ಅಲ್ಲವೇ? ಇಷ್ಟೊತ್ತಿಗೆ ಆಶಾ ಕಾರ್ಯಕರ್ತೆಯರ ಸಂಕಷ್ಟಕ್ಕೆ ಅವರು ಮಿಡಿಯಬೇಕಿತ್ತು. ಅವರ ಹೃದಯ ಕರಗಬೇಕಿತ್ತು. ಯಾಕೆ ಕರಗಿಲ್ಲವೋ ಗೊತ್ತಿಲ್ಲ’ ಎಂದು ಕುಟುಕಿದರು.

ಬರ ಪರಿಹಾರದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಹೋಗಬೇಕು ಎನ್ನುತ್ತಿದ್ದಾರೆ. ನೈಸ್‌ ಯೋಜನೆ ವಿರುದ್ಧ ಲಂಡನ್‌ ಕೋರ್ಟ್‌ಗೆ ಹೋಗಬೇಕು ಎಂದ ಸರ್ಕಾರವಿದು. ಬರ ಪರಿಹಾರ ಕೋರಿ ಲಂಡನ್‌ ಕೋರ್ಟ್‌ಗೂ ಹೋಗಬಹುದು’ ಎಂದು ಅಪಹಾಸ್ಯ ಮಾಡಿದರು.

‘ನಮ್ಮ ಮುಖ್ಯಮಂತ್ರಿ ಅವರು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಜತೆಗೆ ಆತ್ಮೀಯವಾಗಿದ್ದಾರೆ. ಅವರು ಅಷ್ಟು ಆತ್ಮೀಯವಾಗಿ ಇದ್ದಿದ್ದರೆ, ಬರ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಪರಿಸ್ಥಿತಿ ಬರುತ್ತಿತ್ತೇ’ ಎಂದು ಪ್ರಶ್ನಿಸಿದರು.

‘ಹಿರಿಯೂರು ಟಿಕೆಟ್ ವಿಚಾರದಲ್ಲಿ ನನಗೆ ಯಾವುದೇ ರೀತಿಯ ಆತುರ ಇಲ್ಲ. ಚುನಾವಣೆ ನಡೆಯುತ್ತದೆಯೋ ಇಲ್ಲವೋ ಗೊತ್ತಿಲ್ಲ. ಎನ್‌ಡಿಎಯಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದಷ್ಟೇ ನನ್ನ ಆದ್ಯತೆ. ಪಾಪ, ಮುಖ್ಯಮಂತ್ರಿ ಅವರು ಹಿರಿಯೂರು ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದ್ದಾರೆ‌. ಆ ಕ್ಷೇತ್ರವನ್ನು ದತ್ತು ತೆಗೆದುಕೊಂಡು, ಕನಕಪುರದ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತಾರಂತೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಆಶಾ’ಗಳಿಗೆ ಸ್ಪಂದಿಸದವರಿಂದ ಬೆಂಗಳೂರು ಹಬ್ಬ: ಅಶೋಕ

ಬೆಂಗಳೂರು: ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಸ್ಪಂದಿಸದ ರಾಜ್ಯ ಸರ್ಕಾರವು, ಬೆಂಗಳೂರು ಹಬ್ಬ ಮಾಡಲು ಹೊರಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸುಮಾರು 10,000 ಆಶಾ ಕಾರ್ಯಕರ್ತೆಯರ ಬಳಕೆಗೆ ಇರುವುದು ಎಂಟು ಶೌಚಾಲಯ ಮಾತ್ರ. ತಮ್ಮ ಮಕ್ಕಳಿಗೆ ಹಾಲುಣಿಸಲು ಅಲ್ಲಿ ಅವರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಂತಹ ವಿಷಮ ಸ್ಥಿತಿಯಲ್ಲಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಅಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಬದಲಿಗೆ ಬೆಂಗಳೂರು ಹಬ್ಬ ಮಾಡಲು ಹೊರಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಮತಾಂತರ ಜಾಸ್ತಿಯಾಗಿದೆ. ಲವ್‌ ಜಿಹಾದ್‌ ಹೆಸರಲ್ಲಿ ಹಿಂದೂಗಳನ್ನು, ಆಮಿಷ ನೀಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಮತಾಂತರ ನಿಷೇಧ ಕಾನೂನನ್ನು ರದ್ದುಪಡಿಸಿದರೆ ಕಾಂಗ್ರೆಸ್‌ ಮತಾಂತರದ ಪರ ಎಂದು ಗೊತ್ತಾಗುತ್ತದೆ. ಈಗಾಗಲೇ ಜಗತ್ತಿನಲ್ಲಿ ಯಾವ್ಯಾವ ಧರ್ಮಗಳ ಜನರ ಸಂಖ್ಯೆ ಹೆಚ್ಚಲಿದೆ ಎಂಬ ಒಂದು ವರದಿ ಬಂದಿದೆ. ಈ ಕಾನೂನು ರದ್ದು ಮಾಡಿದರೆ ಹಿಂದೂಗಳಿಗೆ ಕಾಂಗ್ರೆಸ್‌ನ ನೈಜತೆ ತಿಳಿಯುತ್ತದೆ. ಗೋ ಹತ್ಯೆ ನಿಷೇಧ ಕಾನೂನು ಕೂಡ ವಾಪಸ್‌ ಪಡೆಯಬಾರದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಜಾ ಮಾಡಲುಹೋಗಿಲ್ಲ: ಸಚಿವ ಮುನಿಯಪ್ಪ

ಕೋಲಾರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರಾಜ್ಯಕ್ಕೆ ಸೌಲಭ್ಯಗಳನ್ನು ತರಲು ಜಪಾನ್‌ಗೆ ತೆರಳಿದ್ದಾರೆಯೇ ಹೊರತು ಮಜಾ ಮಾಡಲು ಹೋಗಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

‘ರೈತರು, ಆಶಾ ಕಾರ್ಯಕರ್ತೆಯರು ಸಂಕಷ್ಟದಲ್ಲಿರುವಾಗ ಮುಖ್ಯಮಂತ್ರಿ ಮೋಜು ಮಸ್ತಿಗೆ ಜಪಾನ್‌ಗೆ ಹೋಗಿದ್ದಾರೆ’ ಎಂಬ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಬಿಜೆಪಿ ರಾಜಕೀಯ ಪಕ್ಷ. ಅವರು ಏನಾದರೂ ಹೇಳಿಕೆ ನೀಡುತ್ತಲೇ ಇರಬೇಕು. ಆದರೆ ಹಿಂದೆ ಅವರು ಕೂಡ ಆಡಳಿತ ನಡೆಸಿದ್ದಾರೆ. ಮೋಜು ಮಸ್ತಿ ಎಂಬ ಪದ ಬಳಸುವುದು ಸರಿ ಅಲ್ಲ’ ಎಂದರು.

261124-51-910567603