ಬೆಂಗಳೂರು: ರಾಜ್ಯದಲ್ಲಿ ವಕೀಲರ ಮೇಲಿನ ದೌರ್ಜನ್ಯ ಘಟನೆಗಳನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘ (ಎಎಬಿ) ಕರೆ ನೀಡಿದ್ದ ಪ್ರತಿಭಟನೆಯ ವೇಳೆ ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಹಾಲ್ನಲ್ಲಿ ಗದ್ದಲ ಉಂಟುಮಾಡಿದ ಆರೋಪದಡಿ ವಕೀಲರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಮುಕ್ತಾಯಗೊಳಿಸಿದೆ.
ಹೈಕೋರ್ಟ್ ದಾಖಲಿಸಿಕೊಂಡಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ದ್ವಿಸದಸ್ಯ ನ್ಯಾಯಪೀಠ, ಆರೋಪಿ ವಕೀಲರು ಸಲ್ಲಿಸಿದ ಬೇಷರತ್ ಕ್ಷಮಾಪಣೆ ದಾಖಲಿಸಿಕೊಂಡು ಪ್ರಕರಣವನ್ನು ಇತ್ಯರ್ಥಪಡಿಸಿದೆ.
‘ಆರೋಪಿ ವಕೀಲರು ಆರಂಭದಲ್ಲೇ ಬೇಷರತ್ ಕ್ಷಮೆ ಕೋರಿ ಪ್ರಮಾಣಪತ್ರ ಸಲ್ಲಿಸಿರುವುದರಿಂದ ಕ್ಷಮೆಯ ಪ್ರಾಮಾಣಿಕತೆಯನ್ನು ಅನುಮಾನಿಸಲು ಕಾರಣವಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ ಆರೋಪಿಗಳನ್ನು ಖುಲಾಸೆಗೊಳಿಸಿತು. ‘ಪ್ರತಿ ಭಟನೆಗಳ ಸಂದರ್ಭದಲ್ಲಿ ವಕೀಲರು ಕಲಾಪಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ವರ್ತಿಸಬಾರದು’ ಎಂದು ಹೇಳಿತು.
261124-51-1279305098

