ಮಲಯಾಳಂ ಮತ್ತು ತಮಿಳು ಚಿತ್ರರಂಗದ ಖ್ಯಾತ ನಟ ಶ್ರೀಜಿತ್ ರವಿ ಅವರಿಗೆ ಭಾರಿ ಸಂಕಷ್ಟ ಎದುರಾಗಿದೆ. 2022ರ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ತ್ರಿಶೂರ್ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಅಪ್ರಾಪ್ತ ಮಕ್ಕಳ ಎದುರು ಅಸಭ್ಯವಾಗಿ ವರ್ತಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ನಟನಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ತ್ರಿಶೂರ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ರಮ್ಯಾ ಮೆನನ್ ಅವರು ಸೋಮವಾರ ಈ ತೀರ್ಪು ಪ್ರಕಟಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 ಹಾಗೂ ಪೋಕ್ಸೊ ಕಾಯ್ದೆಯಡಿ ಶ್ರೀಜಿತ್ ರವಿ ತಪ್ಪಿತಸ್ಥ ಎಂದು ಕೋರ್ಟ್ ಘೋಷಿಸಿದೆ. ಜೈಲು ಶಿಕ್ಷೆಯ ಜೊತೆಗೆ 50,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಕೇರಳ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆಯನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಿದೆ. ಇಬ್ಬರು ಶ್ಯೂರಿಟಿಗಳು ಹಾಗೂ 50 ಸಾವಿರ ರೂಪಾಯಿ ಬಾಂಡ್ ಆಧಾರದ ಮೇಲೆ ಅವರಿಗೆ ಜಾಮೀನು ನೀಡಲಾಗಿದೆ. ಡಿಸೆಂಬರ್ 23, 2026ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
2022ರ ಜುಲೈ 4ರಂದು ಈ ಆಘಾತಕಾರಿ ಘಟನೆ ನಡೆದಿತ್ತು. ಶಾಲೆ ಮುಗಿಸಿ ಅಪಾರ್ಟ್ಮೆಂಟ್ಗೆ ಮರಳುತ್ತಿದ್ದ ಮಕ್ಕಳ ಎದುರು ನಟ ಅಸಭ್ಯವಾಗಿ ವರ್ತಿಸಿ ಬೆದರಿಕೆ ಹಾಕಿದ್ದರು. ಈ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಶ್ರೀಜಿತ್ ಈ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದ್ದವು.
ಇದನ್ನೂ ಓದಿ: ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿರುವುದೇಕೆ ನಿತ್ಯಾ ಮೆನನ್: ಕೊಟ್ಟರು ಉತ್ತರ
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರವಾಗಿ ಎಲ್ಲಾ 21 ಸಾಕ್ಷಿಗಳು ನಟನ ವಿರುದ್ಧ ಸಾಕ್ಷ್ಯ ನುಡಿದಿದ್ದರು. 50 ವರ್ಷದ ಶ್ರೀಜಿತ್ ರವಿ ಹಿರಿಯ ನಟ ಟಿ.ಜಿ. ರವಿ ಅವರ ಪುತ್ರರಾಗಿದ್ದಾರೆ. 2005ರಿಂದ ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ಪೋಷಕ ಹಾಗೂ ಖಳನಾಯಕನ ಪಾತ್ರಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

