ಮುಂಬೈ: ಸಾಮಾನ್ಯವಾಗಿ ಕೋಟ್ಯಧಿಪತಿಗಳ ಮನೆಯ ಮಕ್ಕಳು ಅತಿ ದುಬಾರಿ ಸ್ಮಾರ್ಟ್‌ಫೋನ್‌ಗಳು, ಹೊಳೆಯುವ ಐಪ್ಯಾಡ್‌ಗಳು ಅಥವಾ ಗೇಮಿಂಗ್ ಟ್ಯಾಬ್ಲೆಟ್‌ಗಳಲ್ಲಿ ಮುಳುಗಿರುವುದನ್ನು ನಾವು ನೋಡುತ್ತೇವೆ. ಆದರೆ ಭಾರತದ ಅತ್ಯಂತ ಪ್ರಭಾವಿ ಉದ್ಯಮಿ ಕುಟುಂಬದ ಕುರಿತಾದ ದೃಶ್ಯವೊಂದು ಸಾರ್ವಜನಿಕರು ಹಾಗೂ ನೆಟ್ಟಿಗರ ಗಮನವನ್ನು ವಿಶೇಷವಾಗಿ ಸೆಳೆದಿದೆ.

ದೇಶದ ಬೃಹತ್ ತಂತ್ರಜ್ಞಾನ ಹಾಗೂ ಟೆಲಿಕಾಂ ಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಐತಿಹಾಸಿಕ ಇನೀಷಿಯಲ್ ಪಬ್ಲಿಕ್ ಆಫರಿಂಗ್ (IPO) ಶೇರು ಮಾರುಕಟ್ಟೆ ಪಟ್ಟಿ ಸಮಾರಂಭವು ಅಕ್ಟೋಬರ್ 28 ರಂದು ಅದ್ಧೂರಿಯಾಗಿ ನೆರವೇರಿತು. ಕಂಪನಿಯು ಪ್ರತಿ ಶೇರಿಗೆ ₹1,119 ಬೆಲೆ ನಿಗದಿಪಡಿಸಿ ಬರೋಬ್ಬರಿ 27 ಕೋಟಿ ಹೊಸ ಶೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಹೊಸ ಇತಿಹಾಸ ಬರೆಯಿತು. ಈ ಸಮಾರಂಭದಲ್ಲಿ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಸೇರಿದಂತೆ ಅಂಬಾನಿ ಕುಟುಂಬದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಆದರೆ, ಈ ಅದ್ಧೂರಿ ಉದ್ಯಮ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದದ್ದು ಅಂಬಾನಿ ಕುಟುಂಬದ ಮುದ್ದಾದ ಮಕ್ಕಳ ಓಡಾಟ, ಜೋಡಿಸಿದ್ದ ಹೂವಿನ ಕುಂಡದ ಮೇಲೆ ಬಿದ್ದು ಹೊರಳಾಡುವ ತರ್ಲೆ ತುಂಟಾಟ. ಜೊತೆಗೆ ಮಕ್ಕಳ ಕೈನಲ್ಲಿ ಇದ್ದ ಆ ಒಂದು ಸಾಧನ. ಏನದು ಇಲ್ಲಿದೆ ಅದರ ಬಗ್ಗೆ ಸಂಫೂರ್ಣ ಮಾಹಿತಿ.

ಗಮನಸೆಳೆದ ಮಕ್ಕಳ ಸಾಧನ, ಸಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ

ಅಂಬಾನಿ ಕುಟುಂಬದ ಮಕ್ಕಳು ಸಾರ್ವಜನಿಕ ಸಮಾರಂಭದಲ್ಲಿ ಯಾವುದೇ ರೀತಿಯ ಡಿಜಿಟಲ್ ಸಾಧನಗಳ ಗೊಂದಲವಿಲ್ಲದೆ, ತಮ್ಮ ಕೈಯಲ್ಲಿದ್ದ ಮೊಬೈಲ್ ನಂತಹ ವಸ್ತುವಿನಲ್ಲಿ ಬರೆಯುವುದು, ಅಕ್ಷರಗಳನ್ನು ಅಭ್ಯಾಸ ಮಾಡುವುದು ಹಾಗೂ ಚಿಕ್ಕ ಚಿಕ್ಕ ಚಿತ್ರಗಳನ್ನು ಬಿಡಿಸುವುದರಲ್ಲಿ ನಿರತರಾಗಿದ್ದರು. ಎಲ್ಲರಿಗೂ ಮಕ್ಕಳ ಕೈನಲ್ಲಿ ಏನಿದು ವಸ್ತು ಎಂಬುದೇ ಕುತೂಹಲವಿತ್ತು. ಇದು ಮೊಬೈಲ್, ಐಪ್ಯಾಡ್ ಅಲ್ಲ ಬದಲಾಗಿ ಅದರ ಹೆಸರು ಎಲ್‌ಸಿಡಿ. ಇದು ಮಕ್ಕಳ ಬುದ್ದಿ ಚುರುಕಾಗಲು, ಅಕ್ಷರಗಳ ಅಭ್ಯಾಸ ಮಾಡಲು ಉಪಯೋಗ ಆಗುವ ಸಾಧನ. ಅದಲ್ಲದೆ ಈ ಅಪರೂಪದ ಕ್ಷಣದ ವೀಡಿಯೊ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಮಕ್ಕಳ ಬೆಳವಣಿಗೆಯಲ್ಲಿ 'ಸ್ಕ್ರೀನ್-ಫ್ರೀ' ಅಥವಾ ಪರದೆರಹಿತ ವಾತಾವರಣದ ಮಹತ್ವದ ಕುರಿತು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಮೊಬೈಲ್ ಅಭ್ಯಾಸ ಮಾಡಿಸದೆ, ಸೃಜನಶೀಲತೆಗೆ ಒತ್ತು ನೀಡುತ್ತಿರುವ ಅಂಬಾನಿ ಕುಟುಂಬದ ಪೋಷಕತ್ವದ ಶೈಲಿಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಏನಿದು LCD ಬರವಣಿಗೆ ಪ್ಯಾಡ್? ಇದರ ವಿಶೇಷತೆಗಳೇನು?

ಈ ಸಾಧನಗಳು ಮಕ್ಕಳಿಗೆ ಗೊಂದಲ-ಮುಕ್ತ, ಕಾಗದರಹಿತ ಹಾಗೂ ಸುರಕ್ಷಿತ ಕಲಿಕೆಯ ಅನುಭವವನ್ನು ನೀಡುತ್ತವೆ. ಸಾಮಾನ್ಯ ಟ್ಯಾಬ್ಲೆಟ್‌ಗಳಂತೆ ಇವುಗಳಿಂದ ಕಣ್ಣಿಗೆ ಹಾನಿಕಾರಕವಾದ ಬೆಳಕು ಅಥವಾ ವಿಕಿರಣಗಳು ಹೊರಹೊಮ್ಮುವುದಿಲ್ಲ. ಇವುಗಳಲ್ಲಿ ಪ್ರತ್ಯೇಕ ಸ್ಟೈಲಸ್ ಪೆನ್ ನೀಡಲಾಗಿದ್ದು, ಪೆನ್ನಿನ ಒತ್ತಡಕ್ಕೆ ಅನುಗುಣವಾಗಿ ಪರದೆಯ ಮೇಲೆ ತೆಳುವಾದ ಅಥವಾ ದಪ್ಪಗಿನ ಗೆರೆಗಳು ಮೂಡುತ್ತವೆ. ಮಗು ಬಿಡಿಸಿದ ಚಿತ್ರ ಅಥವಾ ಬರೆದ ಅಕ್ಷರಗಳನ್ನು ಒಂದು ಸಿಂಗಲ್-ಟಚ್ ಅಳಿಸುವ ಬಟನ್ ಒತ್ತುವ ಮೂಲಕ ತಕ್ಷಣವೇ ತೆರವುಗೊಳಿಸಿ, ಮತ್ತೆ ಮತ್ತೆ ಬಳಸಬಹುದು.

ಮಾರುಕಟ್ಟೆಯಲ್ಲಿ ಲಭ್ಯತೆ ಮತ್ತು ಕೈಗೆಟುಕುವ ದರಗಳು:

ಇಂತಹ ಮರುಬರಹ ಮಾಡಬಹುದಾದ ಎಲೆಕ್ಟ್ರಾನಿಕ್ ಸ್ಲೇಟ್‌ಗಳು ಪ್ರಸ್ತುತ ಸ್ಥಳೀಯ ಮಾರುಕಟ್ಟೆಗಳಲ್ಲಿ ಹಾಗೂ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿವೆ/ ಆರಂಭಿಕ ಹಂತದ ಜೆನೆರಿಕ್ LCD ರೈಟಿಂಗ್ ಪ್ಯಾಡ್‌ಗಳು ಕೇವಲ ₹197 ಬೆಲೆಗೆ ದೊರೆಯುತ್ತವೆ. ಪೆನ್ಸಿಲ್ ಕೇಸ್ ಮತ್ತು ಕ್ಯಾಲ್ಕುಲೇಟರ್ ಒಳಗೊಂಡಿರುವ 'AMB 3 in 1' ನಂತಹ ಬಹುಪಯೋಗಿ ಪ್ಯಾಡ್‌ಗಳು ಸುಮಾರು ₹276 ಕ್ಕೆ ಲಭ್ಯವಿವೆ. 'ಪೋರ್ಟ್ರೋನಿಕ್ಸ್ ರಫ್‌ಪ್ಯಾಡ್ 8.5E' ನಂತಹ ಗುಣಮಟ್ಟದ ಬ್ರಾಂಡೆಡ್ ಪುನಃ ಬರೆಯಬಹುದಾದ ಪ್ಯಾಡ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.

ಸಾಂಪ್ರದಾಯಿಕ ಶೈಲಿಯ ಕಲಿಕೆಗೆ ಹೊಸ ಮೆರುಗು:

ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿಯೂ ಸಾಂಪ್ರದಾಯಿಕ ಹಾಗೂ ಪ್ರಾಯೋಗಿಕ ಚಟುವಟಿಕೆಗಳು ಮಕ್ಕಳ ಆರಂಭಿಕ ಕಲಿಕೆಗೆ ಎಷ್ಟು ಸಹಕಾರಿ ಎಂಬುದಕ್ಕೆ ಈ ಘಟನೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಚಿಕ್ಕ ಮಕ್ಕಳಲ್ಲಿ ಮೊಬೈಲ್ ಪರದೆಯ ಮಾನ್ಯತೆ ಕಡಿಮೆ ಮಾಡಿ, ಅವರಲ್ಲಿ ಹೊಸ ಕಲ್ಪನೆ, ಬರವಣಿಗೆ ಅಭ್ಯಾಸ ಹಾಗೂ ಚಿತ್ರಕಲೆಯ ಆಸಕ್ತಿಯನ್ನು ಹೆಚ್ಚಿಸಲು ಇಂತಹ ಸರಳ ಹಾಗೂ ಕೈಗೆಟುಕುವ ಸಾಧನಗಳು ಪೋಷಕರಿಗೆ ಅತ್ಯುತ್ತಮ ಆಯ್ಕೆಯಾಗಿ ಹೊರಹೊಮ್ಮಿವೆ.

ನೀತಾ ಮತ್ತು ಮುಖೇಶ್ ಅಂಬಾನಿ ಮೊಮ್ಮಕ್ಕಳು

ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಅವರಿಗೆ ನಾಲ್ವರು ಮೊಮ್ಮಕ್ಕಳಿದ್ದಾರೆ. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಪೃಥ್ವಿ ಆಕಾಶ್ ಅಂಬಾನಿ ಮತ್ತು ವೇದಾ ಆಕಾಶ್ ಅಂಬಾನಿ. ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ಅವಳಿ ಮಕ್ಕಳಾದ ಆದಿಯಾ ಶಕ್ತಿ ಪಿರಾಮಲ್ ಮತ್ತು ಕೃಷ್ಣ ಪಿರಮಾಲ್.