ಬೆಂಗಳೂರು: ‘ಬೇಡ್ತಿ-ವರದಾ (ಹಿರೇವಡ್ಡಟ್ಟಿ) ನದಿ ಜೋಡಣೆಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಹಾವೇರಿ ಜಿಲ್ಲೆಯಲ್ಲಿ ನೀರು ಶೇಖರಣಾ ಘಟಕ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಬೇಕು’ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಸೂಚಿಸಿದರು.
ಕೃಷ್ಣಾ ಭಾಗ್ಯ ಜಲ ನಿಗಮದ ಕೇಂದ್ರ ಕಚೇರಿಯಲ್ಲಿ ಪ್ರಗತಿಪರಿಶೀಲನೆ ನಡೆಸಿದ ಅವರು ‘ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ -ಸಿದ್ಧಪಡಿಸುತ್ತಿರುವ ಡಿಪಿಆರ್ ಪ್ರಕಾರ ಯೋಜನೆಗೆ ₹9,652.73 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಟೋಪೊಗ್ರಾಫಿಕಲ್ ಮತ್ತು ಜಿಯೋಲಾಜಿಕಲ್ ಸಮೀಕ್ಷೆಗಳು ಸಹ ಪ್ರಗತಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.
‘ಬೇಡ್ತಿ ನದಿಯ ಸುಮಾರು 18.5 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಮುಂಗಾರು ಹಂಗಾಮಿನಲ್ಲಿ ಪೈಪ್ಲೈನ್ ಮತ್ತು ಏತನೀರಾವರಿ ಮೂಲಕ ತುಂಗಭದ್ರಾ ಉಪ-ಕಣಿವೆಗೆ ತಿರುಗಿಸಲಾಗುತ್ತದೆ. ಈ ಯೋಜನೆಯಿಂದ 70,053 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು, 20.21 ಲಕ್ಷ ಜನರಿಗೆ ನೇರ ಪ್ರಯೋಜನವಾಗಲಿದೆ. ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ಕುಡಿಯುವ ನೀರಿನ ಬವಣೆ ನೀಗಲಿದೆ’ ಎಂದರು.
ಮೇಕೆದಾಟು: 14 ಜಿಲ್ಲೆಗಳಲ್ಲಿ ಪರ್ಯಾಯ ಭೂಮಿ
ಮೇಕೆದಾಟು ಯೋಜನೆಗಾಗಿ ಬಳಕೆಯಾಗುವ ಜಾಗಕ್ಕೆ ಬದಲಾಗಿ ಪರ್ಯಾಯ ಭೂಮಿಯನ್ನು ಬೆಂಗಳೂರು ದಕ್ಷಿಣ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ನೀಡಲು ನವೆಂಬರ್ ಅಂತ್ಯದೊಳಗೆ ಕ್ರಮ ಕೈಗೊಳ್ಳಬೇಕು ಎಂದು ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
‘ಈಗಾಗಲೇ 14 ಜಿಲ್ಲೆಗಳಲ್ಲಿ ಭೂಮಿ ಅಂತಿಮಗೊಳಿಸಲಾಗಿದೆ. ಪರಿಹಾರಾತ್ಮಕ ಭೂಮಿ ಗುರುತಿಸಲು ವಿಳಂಬ ಮಾಡಬಾರದು. ಅರಣ್ಯ ಇಲಾಖೆಯ ಅನುಮತಿಗೆ ಅಗತ್ಯವಿರುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದರು.
261118-51-1285170179

