ದೇವನಹಳ್ಳಿ, ನವೆಂಬರ್ 18: ಹಲವು ಕನಸುಗಳನ್ನು ಹೊತ್ತು, ಸಾಲ ಮಾಡಿ ಕಟ್ಟಿಸಿದ ಹೊಸ ಮನೆ. ಇನ್ನೇನು ನೆಮ್ಮದಿಯ ಜೀವನ ಆರಂಭಿಸಬೇಕು ಎನ್ನುವಷ್ಟರಲ್ಲಿ ಖದೀಮರು ಮನೆಗೆ ನುಗ್ಗಿ ದಂಪತಿಯನ್ನು ಬೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಗೃಹಪ್ರವೇಶವಾಗಿ ಕೇವಲ ಒಂದು ತಿಂಗಳು ಕಳೆದಿರುವಾಗಲೇ ನಡೆದ ಈ ದರೋಡೆ ಇಡೀ ಕುಟುಂಬವನ್ನು ಬೆಚ್ಚಿಬೀಳಿಸಿದೆ. ತಡರಾತ್ರಿ ಮನೆಗೆ ನುಗ್ಗಿದ ಮೂವರು ಮುಸುಕುಧಾರಿಗಳು ಲಾಂಗ್, ಮಚ್ಚು ತೋರಿಸಿ ದಂಪತಿಯನ್ನು ಬೆದರಿಸಿ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸಿಮೆಂಟ್ ಇಟ್ಟಿಗೆಯಿಂದ ಬಾಗಿಲು ಒಡೆದು ದರೋಡೆ!
ಮಲೆ ಸೊಣ್ಣಪ್ಪ ಎಂಬುವವರ ನೂತನ ಮನೆಯನ್ನೇ ಖದೀಮರು ಟಾರ್ಗೆಟ್ ಮಾಡಿದ್ದಾರೆ. ತಡರಾತ್ರಿ ಕಪ್ಪು ಬಣ್ಣದ ಪಲ್ಸರ್ ಬೈಕ್ನಲ್ಲಿ ಬಂದ ಮೂವರು ಮುಸುಕುಧಾರಿಗಳು ಮನೆಯ ಮುಖ್ಯ ಬಾಗಿಲನ್ನು ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಧ್ವಂಸಗೊಳಿಸಿದ್ದಾರೆ. ಬಳಿಕ ಬಾಗಿಲಿನ ಮೂಲಕ ಮನೆಯೊಳಗೆ ನುಗ್ಗಿದ್ದಾರೆ. ಈ ವೇಳೆ ಕೋಣೆಯಿಂದ ಹೊರಬರಲು ಮುಂದಾದ ದಂಪತಿಗೆ ಲಾಂಗ್ ಮತ್ತು ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾರೆ. ಕೂಗಾಡಿದರೆ ಪ್ರಾಣ ತೆಗೆಯುವುದಾಗಿ ಎಚ್ಚರಿಕೆ ನೀಡಿ ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾರೆ.
117 ಗ್ರಾಂ ಚಿನ್ನ, 8 ಸಾವಿರ ನಗದು ದೋಚಿ ಎಸ್ಕೇಪ್!
ಮನೆಯಲ್ಲಿದ್ದ ಸುಮಾರು 117 ಗ್ರಾಂ ಚಿನ್ನಾಭರಣ ಹಾಗೂ 8 ಸಾವಿರ ರೂಪಾಯಿ ನಗದನ್ನು ದೋಚಿರುವ ಖದೀಮರು, ಮನೆಯಲ್ಲಿದ್ದ ಮೊಬೈಲ್ಗಳನ್ನೂ ಕಸಿದುಕೊಂಡು ಬಂದಿದ್ದ ಕಪ್ಪು ಬಣ್ಣದ ಪಲ್ಸರ್ ಬೈಕ್ನಲ್ಲೇ ಪರಾರಿಯಾಗಿದ್ದಾರೆ. ಮುಖಕ್ಕೆ ಮಾಸ್ಕ್ ಹಾಗೂ ಮಂಕಿ ಕ್ಯಾಪ್ ಧರಿಸಿದ್ದರಿಂದ ಆರೋಪಿಗಳ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ವಿಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರ ತಂಡವೂ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಹೊಸ ಮನೆಯ ಸಂಭ್ರಮಕ್ಕೆ ಖದೀಮರ ಕಾಟ!
ಒಂದೇ ತಿಂಗಳ ಹಿಂದೆ ಗೃಹಪ್ರವೇಶ ಮಾಡಿ ಹೊಸ ಮನೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದ ಕುಟುಂಬಕ್ಕೆ ದರೋಡೆಕೋರರ ಕೃತ್ಯ ದೊಡ್ಡ ಆಘಾತ ನೀಡಿದೆ. ಮನೆಗೆ ನುಗ್ಗಿ ದಂಪತಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿರುವ ಘಟನೆ ಪುರ ಗ್ರಾಮದಲ್ಲಿ ಆತಂಕ ಮೂಡಿಸಿದೆ. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

