ಬೆಂಗಳೂರು, ನ.18: ಮಾಸಿಕ 15,000 ರೂ. ಗ್ಯಾರಂಟಿ ಗೌರವಧನ ನಿಗದಿ ಹಾಗೂ 5 ಲಕ್ಷ ರೂ. ನಿವೃತ್ತಿ ಇಡಿಗಂಟು ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಸಾವಿರಾರು ಆಶಾ ಕಾರ್ಯಕರ್ತೆಯರು ರಾಜಧಾನಿ ಬೆಂಗಳೂರಿನಲ್ಲಿ ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಆಶಾ ಕಾರ್ಯಕರ್ತೆಯರು ಈ ಬೃಹತ್ ಹೋರಾಟದಲ್ಲಿ ಪಾಲ್ಗೊಂಡಿದ್ದು, ಬೇಡಿಕೆ ಈಡೇರಿಕೆ ಕುರಿತು ರಾಜ್ಯ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ಪತ್ರ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಆವರಣದಲ್ಲಿ ಜಾಗ ಸಾಲದಂತಾಗಿದೆ. ಇದರಿಂದಾಗಿ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಪಕ್ಕದ ಕಾಳಿದಾಸ ರಸ್ತೆ ಮತ್ತು ಮುಂಭಾಗದ ಶೇಷಾದ್ರಿ ರಸ್ತೆ ಮೇಲೆಯೇ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ರಸ್ತೆಗಳ ಮೇಲೆ ಪ್ರತಿಭಟನಾಕಾರರು ಕುಳಿತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಟ್ರಾಫಿಕ್ ಪೊಲೀಸರು ಈ ಎರಡೂ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರವನ್ನು ಬಂದ್ ಮಾಡಿದ್ದಾರೆ.
ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಆಶಾಗಳಿಗೆ ಸಿಗುತ್ತಿರುವ ಗೌರವಧನ ಎಷ್ಟು?
ಕರ್ನಾಟಕದಲ್ಲಿ ಸದ್ಯ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ₹5,000 ಹಾಗೂ ಕೇಂದ್ರ ಸರ್ಕಾರದಿಂದ ₹3,000 ಸೇರಿ ಒಟ್ಟು 8,000 ರೂ. ಮಾತ್ರ ಗೌರವಧನ ಸಿಗುತ್ತಿದೆ. ಆದರೆ ನೆರೆಯ ಮತ್ತು ಇತರ ರಾಜ್ಯಗಳಲ್ಲಿ ಹೆಚ್ಚಿನ ಗೌರವಧನ ನೀಡಲಾಗುತ್ತಿದೆ ಎಂದು ಆಶಾಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ:
ಹರಿಯಾಣ: ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ₹15,000 ಗೌರವಧನ.
ಕೇರಳ: ರಾಜ್ಯ ಸರ್ಕಾರವೇ ₹12,000 ಗೌರವಧನ ಹಾಗೂ ಕೆಲಸಕ್ಕೆ ಪ್ರೋತ್ಸಾಹಧನ.
ಪಶ್ಚಿಮ ಬಂಗಾಳ: ರಾಜ್ಯ ಸರ್ಕಾರದಿಂದ ₹11,250 ಗೌರವಧನ ಹಾಗೂ ಪ್ರೋತ್ಸಾಹಧನ.
ಆಂಧ್ರಪ್ರದೇಶ: ಕೇಂದ್ರ ಮತ್ತು ರಾಜ್ಯ ಸೇರಿ ₹10,000 ಗೌರವಧನ.
ಇದನ್ನೂ ಓದಿ: ರಾಜ್ಯದ 5 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ: ಹಾಸನದಲ್ಲಿ ಬಾಲಕನ ಶಾಲಾ ಬ್ಯಾಗ್, ಪ್ಯಾಂಟ್ ಜೇಬಿನಲ್ಲಿ ನೋಟಿನ ಕಂತೆ ಪತ್ತೆ
ಆಶಾ ಕಾರ್ಯಕರ್ತೆಯರ 8 ಪ್ರಮುಖ ಹಕ್ಕೊತ್ತಾಯಗಳು:
₹15,000 ಮಾಸಿಕ ಗೌರವಧನ: ವಿವಿಧ ರಾಜ್ಯಗಳಲ್ಲಿ ಹೆಚ್ಚಿಸಿರುವಂತೆ, ಕರ್ನಾಟಕದ ಆಶಾ ಕಾರ್ಯಕರ್ತೆಯರಿಗೂ ರಾಜ್ಯ ಸರ್ಕಾರದಿಂದ ಮಾಸಿಕ ₹15,000 ಗೌರವಧನ ನಿಗದಿಪಡಿಸಬೇಕು.
ಸಮಸ್ತ ಆ್ಯಪ್ ಒತ್ತಡಕ್ಕೆ ಬ್ರೇಕ್: ‘ಸಮಸ್ತ ಆ್ಯಪ್’ ಮೂಲಕ ಒತ್ತಾಯದ ಮೊಬೈಲ್ ಕೆಲಸ ಕೈಬಿಡಬೇಕು; ಇಲ್ಲವೇ ಮೊಬೈಲ್, ಸೂಕ್ತ ಪ್ರೋತ್ಸಾಹಧನ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
ಬಾಕಿ ಇಡಿಗಂಟು ಬಿಡುಗಡೆ: ಈಗಾಗಲೇ ನಿವೃತ್ತರಾಗಿರುವ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಇಡಿಗಂಟನ್ನು ಕೂಡಲೇ ಪಾವತಿಸಬೇಕು.
ಆಶಾ ನಿಧಿಯ ಬಾಕಿ ಹಣ: ಆಶಾ ನಿಧಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರೋತ್ಸಾಹಧನಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
ಸುಗಮಕಾರರ ಮರುನೇಮಕ & ಬಾಕಿ ವೇತನ: ಆಶಾ ಸುಗಮಕಾರರನ್ನು ಮರುನೇಮಕ ಮಾಡಿ ಸೂಕ್ತ ವೇತನ ನೀಡಬೇಕು ಹಾಗೂ ಬಾಕಿ ಇರುವ ಒಂದು ವರ್ಷದ ₹1,500 ಪಾವತಿಸಬೇಕು.
ಎನ್ಐಒಎಸ್ (NIOS) ತರಬೇತಿ ಪ್ರೋತ್ಸಾಹಧನ: ಎನ್ಐಒಎಸ್ ತರಬೇತಿ ಪೂರ್ಣಗೊಳಿಸಿದ ಆಶಾ ಮತ್ತು ಸುಗಮಕಾರರಿಗೆ ಪ್ರತಿ ತರಬೇತಿಗೆ ₹5,000 ವಿಶೇಷ ಪ್ರೋತ್ಸಾಹಧನ ನೀಡಬೇಕು.
ತೀವ್ರ ಕಾಯಿಲೆ ಚಿಕಿತ್ಸಾ ನೆರವು: ತೀವ್ರ ಕಾಯಿಲೆಯ ಚಿಕಿತ್ಸಾ ಅವಧಿಯಲ್ಲಿ ಕನಿಷ್ಠ ಮೂರು ತಿಂಗಳ ಗೌರವಧನ ಮತ್ತು ನಿಗದಿತ ಪ್ರೋತ್ಸಾಹಧನ ನೀಡಬೇಕು.
₹5 ಲಕ್ಷ ನಿವೃತ್ತಿ ಇಡಿಗಂಟು: ಸೇವಾ ನಿವೃತ್ತಿ ಇಡಿಗಂಟನ್ನು ಪಶ್ಚಿಮ ಬಂಗಾಳದ ಮಾದರಿಯಲ್ಲಿ ₹5 ಲಕ್ಷಕ್ಕೆ ಹೆಚ್ಚಿಸಬೇಕು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

