ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನವು ನ.20 ಮತ್ತು 21ರಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ಬಿ.ಸಿ.ಭಗವಾನ್‌ ತಿಳಿಸಿದರು.

ಇದೇ ಮೊದಲ ಬಾರಿಗೆ ಕನ್ನಡ ಸಮಗ್ರ ವೈದ್ಯಕೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ವೈದ್ಯಕೀಯ ಬರಹಗಾರ ಎಸ್.ಪಿ. ಯೋಗಣ್ಣ ಸರ್ವಾಧ್ಯಕ್ಷರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನ.20ರಂದು ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಆರೋಗ್ಯ ಸಚಿವ ಯು.ಟಿ. ಖಾದರ್‌, ಸಾಹಿತಿ ಬರಗೂರು ರಾಮಚಂದ್ರಪ್ಪ, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್‌ ಮೊಹಸಿನ್‌ ಪಾಲ್ಗೊಳ್ಳಲಿದ್ದಾರೆ ಎಂದರು.

‘ನರವಿಜ್ಞಾನ– ಮಿದುಳಿನ ರಕ್ತನಾಳಾಘಾತ’, ‘ಹೃದ್ರೋಗ ವಿಜ್ಞಾನ–ರಕ್ತ ಕುಂದಿಕೆ ಹೃದ್ರೋಗ’, ‘ಆಧುನಿಕ ಕನ್ನಡ ವೈದ್ಯ ಸಾಹಿತ್ಯ ಬೆಳವಣಿಗೆಯ ಮೈಲಿಗಲ್ಲುಗಳು’, ‘ವೈದ್ಯಕೀಯ ಕವಿಗೋಷ್ಠಿ’, ‘ಕನ್ನಡ ಆಯುರ್ವೇದ ಸಾಹಿತ್ಯದ ಬೆಳವಣಿಯೆ ಮೈಲಿಗಲ್ಲುಗಳು’, ‘ಆಧ್ಯಾತ್ಮಿಕ ಆರೋಗ್ಯ’, ‘ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ, ಸವಾಲುಗಳು ಮತ್ತು ನಿವಾರಣಾ ಮಾರ್ಗೋಪಾಯಗಳು’, ‘ಆಯುರ್ವೇದ ತ್ರಿದೋಷ ಸಿದ್ಧಾಂತದ ವೈಜ್ಞಾನಿಕ ನೋಟ’, ‘ಹೋಮಿಯೋಪಥಿಯ ವೈಜ್ಞಾನಿಕ ನೋಟ’, ‘ಸಂಕಿರಣ–ವಿಭಿನ್ನ ಸಹಾಯಕ ವೈದ್ಯ ವಿಜ್ಞಾನಗಳು’, ‘ಹೋಮಿಯೋಪಥಿ ಚಿಕಿತ್ಸಾ ವಿಶೇಷ’, ‘ಸಮ್ಮೇಳನಾಧ್ಯಕ್ಷರೊಂದಿಗೆ ಸಾಹಿತ್ಯ ಚರ್ಚೆ ಮತ್ತು ಸಂವಾದ’ ಸೇರಿದಂತೆ ಒಟ್ಟು 13 ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.

ಗೋಷ್ಠಿಗಳಲ್ಲಿ ಮಂಡನೆಯಾದ ವಿಚಾರಗಳನ್ನು ‘ವೈದ್ಯಪ್ರಭ’ ಕೃತಿಯಾಗಿ ಹೊರತರಲಾಗುವುದು. ಇಲ್ಲಿ ತೆಗೆದು ಕೊಂಡ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ನ.20ರಂದು ಕರ್ನಾಟಕ ರಾಜ್ಯೋತ್ಸವ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ರಾಶಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಗತಿಹಳ್ಳಿ ಚಂದ್ರಶೇಖರ್‌ ಅತಿಥಿಗಳಾಗಿದ್ದಾರೆ ಎಂದು ಹೇಳಿದರು.

ನ.21ರಂದು ಸಂಜೆ 3.20ಕ್ಕೆ ಸಮಾರೋಪ ನಡೆಯಲಿದೆ. ಆಳ್ವಾಸ್‌ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಮೋಹನ್‌ ಆಳ್ವ, ಸಾಹಿತಿ ಹಂಪನಾ ಭಾಗವಹಿಸುವರು ಎಂದರು.

261118-4-1250433569