ಬೆಂಗಳೂರು: ‘ಎತ್ತಿನಹೊಳೆ ಯೋಜನೆ ಮೂಲಕ ವರ್ಷದಲ್ಲೇ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರಿಗೆ ಕುಡಿಯುವ ನೀರು ಒದಗಿಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಆಯೋಜಿಸಿರುವ ಕೃಷಿ ಮೇಳದಲ್ಲಿ ಮಂಗಳವಾರ ಪ್ರಗತಿಪರ ರೈತರಿಗೆ ಪ್ರಶಸ್ತಿ ‍ಪ್ರದಾನ ಮಾಡಿ ಮಾತನಾಡಿ, ‘2027ರ ವರ್ಷಾಂತ್ಯದೊಳಗೆ ಪಶ್ಚಿಮಘಟ್ಟದಿಂದ ಮುಳಬಾಗಿಲು ತಾಲ್ಲೂಕಿನವರೆಗೂ ಎತ್ತಿನಹೊಳೆ ನೀರು ಹರಿಯಲಿದೆ’ ಎಂದರು.

‘ಕೆ.ಸಿ ವ್ಯಾಲಿ ಮತ್ತು ಎಚ್‌.ಎನ್‌ ವ್ಯಾಲಿ ಯೋಜನೆಗಳ ನೀರು ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಾಲುತ್ತಿಲ್ಲ. ಬಯಲು ಸೀಮೆಯ ಮಳೆಯಾಶ್ರಿತ ಜಿಲ್ಲೆಗಳಿಗೆ ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳು ಆಸರೆಯಾಗಲಿವೆ. ಚಿತ್ರದುರ್ಗ, ಹಾಸನ, ತುಮಕೂರು ಜಿಲ್ಲೆಗಳಿಗೂ ಅನುಕೂಲವಾಗಲಿದೆ’ ಎಂದು ಹೇಳಿದರು.

ಪ್ರಗತಿಪರ ಕೃಷಿಕರಾಗಿ: ‘ಎಂಜಿನಿಯರಿಂಗ್, ಪದವೀಧರರಿಗೆ ಉದ್ಯೋಗ ಸಿಗುತ್ತಿಲ್ಲ. ಹಳ್ಳಿಗಳಿಗೆ ಮರಳಿ ಪ್ರಗತಿಪರ ಕೃಷಿಕರಾಗಿ ಉದ್ಯೋಗಗಳನ್ನು ಸೃಷ್ಟಿಸಬೇಕು’ ಎಂದು ಮುನಿಯಪ್ಪ ಸಲಹೆ ನೀಡಿದರು.

‘ಪಾಳು ಬಿದ್ದಿರುವ ಜಮೀನುಗಳನ್ನು ಹಸನು ಮಾಡಿದರೆ, ಶೇ 5ರಷ್ಟು ಜನರಿಗೆ ಉದ್ಯೋಗ ನೀಡಬಹುದಾಗಿದೆ. ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಯಶಸ್ಸು ಗಳಿಸಬೇಕು’ ಎಂದು ಸಲಹೆ ನೀಡಿದರು.

‘ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಅತಿ ಹೆಚ್ಚು ಜನರಿಗೆ ಜೀವನಾಧಾರವಾಗಿದೆ. ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಜವಾಹರಲಾಲ್‌ ನೆಹರೂ, ಲಾಲ್‌ಬಹದ್ದೂರ್‌ ಶಾಸ್ತ್ರಿ, ಇಂದಿರಾಗಾಂಧಿ ಅಡಿಪಾಯ ಹಾಕಿದ್ದರು. ಬಾಬು ಜಗಜೀವನ್‌ರಾಮ್ ಅವರು ಕೃಷಿ ಸಚಿವರಾಗಿದ್ದಾಗ ಲಕ್ಷಾಂತರ ಎಕರೆ ಭೂಮಿಯನ್ನು ಬಡವರು, ಭೂ ರಹಿತರಿಗೆ ಹಂಚಲಾಗಿತ್ತು. ಹಸಿರು ಕ್ರಾಂತಿ ನಡೆದಿತ್ತು’ ಎಂದರು.

‘ಮಿಶ್ರ ಬೆಳೆ ಸೂಕ್ತ’

‘ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಟೊಮೆಟೊ ಹೆಚ್ಚು ಬೆಳೆಯಲಾಗುತ್ತದೆ. ಒಬ್ಬ ರೈತ ಟೊಮೆಟೊ ಹಾಕುತ್ತಿದ್ದಂತೆ ಎಲ್ಲರೂ ಅವನನ್ನೇ ಅನುಸರಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ. ಹೀಗಾಗಿ ಮಿಶ್ರ ಬೆಳೆ, ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು. ಈ ಬಗ್ಗೆ ಕೃಷಿ ಸಂಸ್ಥೆಗಳು ಜಾಗೃತಿ ಮೂಡಿಸಬೇಕು’ ಎಂದು ಮುನಿಯಪ್ಪ ಹೇಳಿದರು.

‘ಕೃಷಿ ಸ್ವಾಭಿಮಾನದ ಕಸುಬಾಗಿದ್ದು, ನಾನೂ ರಾಗಿ ಬೆಳೆಯುತ್ತಿದ್ದೆ. ಎಕರೆಗೆ 25 ಕ್ವಿಂಟಲ್ ಫಸಲು ಸಿಕ್ಕಿತ್ತು. 1965ರಲ್ಲಿ ರೇಷ್ಮೆ ಕೃಷಿಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದೆ. ಹೀಗಾಗಿ, ಯಾವುದೇ ವೃತ್ತಿಯಾದರೂ ಭೂಮಿಯೊಂದಿಗಿನ ಸಂಬಂಧವನ್ನು ಬಿಡಬಾರದು. ಯುವ ರೈತರು ಕಡಿಮೆ ಭೂಮಿಯಲ್ಲಿ ಸಮಗ್ರ ಕೃಷಿ ಮೂಲಕ ಹೆಚ್ಚು ಲಾಭಗಳಿಸುತ್ತಿರುವುದು ಆಶಾದಾಯಕವಾಗಿದೆ’ ಎಂದರು.

6 ಲಕ್ಷ ಟನ್‌ ರಾಗಿಯನ್ನು ಕಳೆದ ವರ್ಷ ರೈತರಿಂದ ಖರೀದಿಸಲಾಗಿತ್ತು. ಈ ಬಾರಿ 8 ಲಕ್ಷ ಟನ್ ರಾಗಿ ಖರೀದಿಸಲಾಗುವುದು. ಈ ಮೂಲಕ ರೈತರಿಗೆ ಬೆನ್ನಿಗೆ ಸರ್ಕಾರ ನಿಲ್ಲಲಿದೆ ಕೆ.ಎಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ

261118-4-131870008