ಬೆಂಗಳೂರು: ಸರ್ಕಾರಿ ಕೋಟಾದಡಿ 2024–25ನೇ ಸಾಲಿನಲ್ಲಿ ಎಂಬಿಬಿಎಎಸ್‌ ಪೂರ್ಣಗೊಳಿಸಿ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷದ ಕಡ್ಡಾಯ ಸೇವೆಗೆ ನಿಯೋಜನೆಗೊಂಡ ವೈದ್ಯರ ಪ್ರತಿ ತಿಂಗಳ ವೇತನ ಕಡಿತಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಸರ್ಕಾರದ ಆದೇಶ ಪ್ರಶ್ನಿಸಿ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲ್ಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಶಶಿಕುಮಾರ್ ಶಿವರಾಮ್‌ ರಾಠೋಡ್ ಸೇರಿದಂತೆ ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಒಟ್ಟು 38 ಎಂಬಿಬಿಎಸ್ ಪದವೀಧರರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ (ಎಚ್‌ಎಫ್‌ಡಬ್ಲ್ಯುಎಸ್‌) ಯೋಜನೆಯಡಿ ನಿಯೋಜನೆಗೊಂಡು ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಕ್ರಮವಾಗಿ ತಿಂಗಳಿಗೆ ₹75 ಸಾವಿರ ಮತ್ತು ₹62,666 ಪಾವತಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಪ್ರಕರಣ: ಎಚ್‌ಎಫ್‌ಡಬ್ಲ್ಯುಎಸ್‌ ಯೋಜನೆ ಅಡಿಯಲ್ಲಿ ನಿಯೋಜನೆ ಗೊಂಡ ವೈದ್ಯರಿಗೆ ತಿಂಗಳಿಗೆ ₹62,666 ಹಾಗೂ ಎನ್‌ಎಚ್‌ಎಂ ಅಡಿಯಲ್ಲಿ ನಿಯೋಜನೆಗೊಂಡ ವೈದ್ಯರಿಗೆ ₹75 ಸಾವಿರ ವೇತನ ನಿಗದಿಪಡಿಸಿ 2025ರ ಆಗಸ್ಟ್ 18ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಆದರೆ, 2025ರ ಅಕ್ಟೋಬರ್ 28ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಿ, ಎಚ್‌ಎಫ್‌ಡಬ್ಲ್ಯುಎಸ್‌ ಯೋಜನೆಯಡಿ ನಿಯೋಜನೆಗೊಂಡ ವೈದ್ಯರ ತಿಂಗಳ ವೇತನವನ್ನು ₹60 ಸಾವಿರಕ್ಕೆ ಹಾಗೂ ಎಚ್‌ಎಂಎಚ್‌ ಯೋಜನೆಯಡಿ ನಿಯೋಜನೆಗೊಂಡ ವೈದ್ಯರ ವೇತನವನ್ನು ತಿಂಗಳಿಗೆ 70 ಸಾವಿರಕ್ಕೆ ಇಳಿಕೆ ಮಾಡಿತ್ತು.

‘ಸರ್ಕಾರದ ಈ ಆದೇಶ ಕಾನೂನು ಬಾಹಿರ. ಹಳೆಯ ಅಧಿಸೂಚನೆ ಅನುಸಾರವೇ ವೇತನ ನೀಡಬೇಕು. ಕಳೆದ ವರ್ಷದ ಆಗಸ್ಟ್‌ನಿಂದ ಈತನಕದ ವೇತನ ಹಿಂಬಾಕಿ ಪಾವತಿಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

261118-4-337436435