ಬೆಂಗಳೂರು: ಎಲ್ಲರ ಹೋರಾಟ, ಶ್ರಮದಫಲವಾಗಿ ಒಳಮೀಸಲಾತಿ ಅನುಷ್ಠಾನ ವಾಗಿದ್ದು, ಇನ್ನಾದರೂ ಎಡ–ಬಲವೆಂದು ಕಿತ್ತಾಡದೆ ಅಣ್ಣ–ತಮ್ಮಂದಿರಂತೆ ಒಟ್ಟಾಗಿ ಸಾಗಬೇಕು ಎಂದು ಸಮಾಜಕಲ್ಯಾಣ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ವಸಂತ ನಗರದಲ್ಲಿ ಗೋಲ್ಡನ್‌ ಅಂಬೇಡ್ಕರ್‌ ಫೌಂಡೇಷನ್‌, ರಾಜ್ಯ ಸಂವಿಧಾನ ಬಳಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಸರ್ಕಾರದ ಎಲ್ಲ ಸೌಲಭ್ಯಗಳನ್ನೂ ಒಳಮೀಸಲಾತಿ ಅನ್ವಯ ಎ, ಬಿ, ಸಿ ವರ್ಗಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುವುದು. ಪರಿಶಿಷ್ಟ ಜಾತಿಯ 101 ಜಾತಿಗಳಿಗೂ ನ್ಯಾಯ ಒದಗಿಸಲಾಗುವುದು’ ಎಂದರು.

‘ಚಿತ್ರದುರ್ಗದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಅನುಷ್ಠಾನಕ್ಕೆ ಕಾಂಗ್ರೆಸ್‌ ಪಕ್ಷ ನೀಡಿದ್ದ ಆಶ್ವಾಸನೆ, ಸುಪ್ರಿಂಕೋರ್ಟ್‌ ನಿರ್ದೇಶನದಂತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದಲ್ಲಿ ಒಳಮೀಸಲಾತಿ ಅನುಷ್ಠಾನ ಮಾಡಲಾಗಿದೆ. ಪರಿಶಿಷ್ಟ ಸಮುದಾಯ ಒಗ್ಗಟ್ಟು ತೋರಿದರೆ ಎಲ್ಲರಿಗೂ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ. ಅಂಬೇಡ್ಕರ್‌ ಅವರ ಆಶಯ ಸಾಕಾರಗೊಳ್ಳುತ್ತದೆ’ ಎಂದು ಹೇಳಿದರು.

‘ಪ್ರಸ್ತುತ ಇರುವ ಅನುದಾನದಲ್ಲಿ ಶಾಸಕರು ಸರ್ಕಾರದ ಸೌಲಭ್ಯಗಳನ್ನು ನೀಡಲು ಸಾಧ್ಯವಾಗದ ಕಾರಣ ಅವರಿಗೆಹೆಚ್ಚಿನ ಅನುದಾನ ಒದಗಿಸಲು ಅನುಕೂಲವಾಗುವಂತೆ ಸಾರಥಿ ಯೋಜನೆಯಡಿ ವಾಹನ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಮತ್ತಿತರ ಸೌಲಭ್ಯಗಳನ್ನು ಕ್ಷೇತ್ರವಾರು 50 ಜನರಿಗೆ ಕಲ್ಪಿಸಲು ಸಹಾರಿಯಾಗಲಿದೆ. ಈ ಕುರಿತು ಚರ್ಚೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

ಸಿದ್ದರಾಜು ಸ್ವಾಮೀಜಿ, ಭಂತೇಜಿ ಸ್ವಾಮೀಜಿ, ಪರಿಶಿಷ್ಟ ನೌಕರರ ಸಂಘದಆದ್ಯಕ್ಷ ಶಿವಕುಮಾರ್‌, ಗೋಲ್ಡನ್‌ ಅಂಬೇಡ್ಕರ್ ಸಂಘದ ಅಧ್ಯಕ್ಷ ಜಯಕಾಂತ್‌ ಚಾಲುಕ್ಯ, ರಾಮಪ್ಪ, ಜಂಬೂದ್ವೀಪ ಸಿದ್ದರಾಜು ಉಪಸ್ಥಿತರಿದ್ದರು.

ಪರಿಶಿಷ್ಟರ ಕಲ್ಯಾಣಕ್ಕೆ ಅನುದಾನ ಹಂಚಿಕೆ ಕುರಿತು ಮುಖ್ಯಮಂತ್ರಿ ಜತೆ ಸಭೆ ನಡೆದಿದೆ. ಜಿ.ಪರಮೇಶ್ವರ, ಸತೀಶ ಜಾರಕಿಹೊಳಿ ಸೇರಿ ಎಲ್ಲ ಸಚಿವರು ನ. 26ರಂದು ಸಭೆ ನಡೆಸಲಿದ್ದು, ವೆಚ್ಚದ ಹಂಚಿಕೆ ತೀರ್ಮಾನ ಆಗಲಿದೆ

ಕೆ.ಎಚ್. ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ

261118-4-790590725