ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ತಂಬಾಕು ಮುಕ್ತ ಯುವ ಅಭಿಯಾನ 4.0 ಕಾರ್ಯಕ್ರಮಕ್ಕೆ ಮಂಗಳವಾರ ಆರೋಗ್ಯ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.
ಆರೋಗ್ಯ ಸೌಧದ ಮುಂಭಾಗ ಜಾಗೃತಿ ಜಾಥಾಕ್ಕೆ ಸಚಿವರು ಹಸಿರು ನಿಶಾನೆ ತೋರಿದರು. ಇದೇ ವೇಳೆ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ತಂಬಾಕು ವಿರೋಧಿ ಪ್ರತಿಜ್ಞೆ ಸ್ವೀಕರಿಸುವ ಮೂಲಕ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿದರು.
ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸುವುದು, ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತಗೊಳಿಸಲು ಕ್ರಮ ಕೈಗೊಳ್ಳುವುದು. ತಂಬಾಕು ನಿಯಂತ್ರಣ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಸಮುದಾಯದ ಸದಸ್ಯರು ಭಾಗವಹಿಸುವುದನ್ನು ಉತ್ತೇಜಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ತಂಬಾಕು ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು. ಅಭಿಯಾನವನ್ನು ರಾಜ್ಯದಾದ್ಯಂತ ವಿವಿಧ ಸರ್ಕಾರಿ ಇಲಾಖೆಗಳು, ಶಿಕ್ಷಣ ಸಂಸ್ಥೆಗಳು, ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಇತರ ಸಂಬಂಧಪಟ್ಟ ಪಾಲುದಾರ ಇಲಾಖೆಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ತಂಬಾಕು ಜಾಹೀರಾತು ನಿಷೇಧಕ್ಕೆ ಚಿಂತನೆ
ಬಿಎಂಟಿಸಿ ಬಸ್ಗಳ ಮೇಲೆ ತಂಬಾಕು ಜಾಹೀರಾತು ನಿಷೇಧಿಸುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ತಂಬಾಕು ಉತ್ಪನ್ನಗಳ ಪ್ರಚಾರಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಯು.ಟಿ.ಖಾದರ್ ಹೇಳಿದ್ದಾರೆ.
ಜಾಹೀರಾತು ಫಲಕಗಳ ಬಗ್ಗೆ ಜನಸಾಮಾನ್ಯರಿಂದ ಆಕ್ರೋಶ ವ್ಯಕ್ತವಾಗಿತ್ತು. ಹಲವು ಕಡೆ ಇನ್ನೂ ಜಾಹೀರಾತು ಫಲಕಗಳ ಪ್ರದರ್ಶನವಿದೆ. ಸೆಲೆಬ್ರಿಟಿಗಳ ಚಿತ್ರ ಬಳಕೆ ಈಗ ಕಡಿಮೆಯಾಗಿದೆ ಎಂದರು.
ಆರೋಗ್ಯ ಇಲಾಖೆ ಸಿಬ್ಬಂದಿಯ ಸಮಯ ಪಾಲನೆಗೆ ಆ್ಯಪ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿಕಿತ್ಸೆಗೆ ಹಣದ ಕೊರತೆ: ಮೊಬೈಲ್ ಅಡವಿಡಲು ಒತ್ತಾಯ- ಕ್ರಮಕ್ಕೆ ಸೂಚನೆ
ಚಿಕಿತ್ಸೆಗೆ ಅಗತ್ಯವಿದ್ದ ಹಣದಲ್ಲಿ ₹5 ಸಾವಿರ ಕೊರತೆಯಾದ ಕಾರಣಕ್ಕೆ ರೋಗಿಯ ಸಂಬಂಧಿಗೆ ಮೊಬೈಲ್ ಅಡವಿಡುವಂತೆ ನಗರದ ಥಣಿಸಂದ್ರದ ಖಾಸಗಿ ಆಸ್ಪತ್ರೆ ಸಿಬ್ಬಂದಿ ಒತ್ತಾಯಿಸಿದ್ದಾರೆ.
ವ್ಯಕ್ತಿಯೊಬ್ಬರು ತಲೆಗೆ ಪೆಟ್ಟಾಗಿ ಥಣಿಸಂದ್ರದ ಪ್ರಕೃತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆಸ್ಪತ್ರೆಯವರು ₹10,500 ಬಿಲ್ ಮಾಡಿದ್ದರು. ರೋಗಿಯ ಸಂಬಂಧಿಕರು ತಮ್ಮ ಬಳಿ ಇದ್ದ ₹5 ಸಾವಿರ ಪಾವತಿಸಿದ್ದಾರೆ. ಉಳಿದ ಹಣಕ್ಕಾಗಿ ಮೊಬೈಲ್ ನೀಡುವಂತೆ ಆಸ್ಪತ್ರೆ ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಖಾದರ್, ‘ಆಸ್ಪತ್ರೆ ಬಿಲ್ ಪಾವತಿಸುವಷ್ಟು ಹಣ ರೋಗಿಯ ಸಂಬಂಧಿಕರ ಬಳಿ ಇರಲಿಲ್ಲ. ಹೀಗಾಗಿ ಮೊಬೈಲ್ ಅಡವಿಡುವಂತೆ ಆಸ್ಪತ್ರೆ ಸಿಬ್ಬಂದಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.
261118-4-1069172035

