ಬೆಂಗಳೂರು: ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ‘ಸ್ಟಿಂಗ್’ ಕಾರ್ಯಾಚರಣೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ‘ಸ್ಟಿಂಗ್’ಗೆ ಬಳಸಿದ್ದ ಮೊಬೈಲ್‌ಗಾಗಿ ಶೋಧ ಮುಂದುವರಿಸಿದ್ದಾರೆ.
ಕಾಂಗ್ರೆಸ್‌ನ ಉಚ್ಚಾಟಿತ ನಾಯಕಿ ಕೃಪಾ ಆಳ್ವ ‘ಸ್ಟಿಂಗ್’ ಕಾರ್ಯಾಚರಣೆಯಲ್ಲಿ ಸಹ ಭಾಗಿ ಆಗಿರುವ ಸಂಶಯದ ಮೇಲೆ, ಸಿಸಿಬಿ ಪೊಲೀಸರು ಸೋಮವಾರ ಅವರನ್ನು ವಿಚಾರಣೆಗೆ ಕರೆದಿದ್ದರು. ಈ ವೇಳೆ ತನಿಖಾಧಿಕಾರಿಗಳು, ಕಾರ್ಯಾಚರಣೆಗೆ ಬಳಸಿದ್ದ ಮೊಬೈಲ್ ಫೋನ್ ಹಸ್ತಾಂತರಿಸುವಂತೆ ಕೇಳಿದ್ದರು. ಆಗ, ಕೃಪಾ ತಮ್ಮ ಬಳಿ ಅಂತಹ ಯಾವುದೇ ಮೊಬೈಲ್ ಇಲ್ಲ ಎಂಬುದಾಗಿ ಉತ್ತರಿಸಿದರು ಎಂದು ಗೊತ್ತಾಗಿದೆ.
2022ರಲ್ಲಿ ವಿಡಿಯೊ ರೆಕಾರ್ಡ್ ಮಾಡಲಾಗಿತ್ತು. ರೆಕಾರ್ಡಿಂಗ್‌ಗೆ ಬಳಸಿದ್ದ ಮೊಬೈಲ್ ಅಥವಾ ಕ್ಯಾಮೆರಾ, ಮೂಲ ವಿಡಿಯೊ ತುಣುಕು ತನಿಖಾಧಿಕಾರಿಗಳಿಗೆ ಇನ್ನೂ ಸಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.
ಕೃಪಾ ಅವರನ್ನು ಮೂರು ಬಾರಿ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ‘ಸ್ಟಿಂಗ್’ ಬಗ್ಗೆ ಪ್ರಶ್ನೆ ಕೇಳಿದಾಗ ‘ನನಗೂ ಪ್ರಕರಣಕ್ಕೂ ಸಂಬಂಧ ಇಲ್ಲ. ಆ ಕಾರ್ಯಾಚರಣೆಯ ಬಗ್ಗೆ ತಿಳಿದಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ತನಿಖೆಯ ಭಾಗವಾಗಿ 2022ರಲ್ಲಿ ತಾವು ಬಳಸುತ್ತಿದ್ದ ಮೊಬೈಲ್ ಅನ್ನೇ ನೀಡುವಂತೆ ಸೂಚಿಸಿ ಕಳುಹಿಸಲಾಗಿದೆ. ಪವರ್ ಟಿ.ವಿಯ ರಾಕೇಶ್ ಶೆಟ್ಟಿ, ಪ್ರಶಾಂತ್ ಅವರಿಗೂ ಮೊಬೈಲ್ ಹಸ್ತಾಂತರಿಸುವಂತೆ ಸೂಚಿಸಲಾಗಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ.
261118-51-1422293940

