ಕೆ.ಆರ್.ಪುರ: ‘ಹೊಸ ರಸ್ತೆಗಳ ನಿರ್ಮಾಣ ಸೇರಿದಂತೆ ಬೆಂಗಳೂರಿನಲ್ಲಿ ಸುಮಾರು ₹20 ಸಾವಿರ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ ಅಡಿಯಲ್ಲಿ ಅಭಿವೃದ್ಧಿಗೊಳಿಸುತ್ತಿರುವ ನೀರುಗಾಲುವೆ ಮತ್ತು ಪ್ರವಾಹ ನಿಯಂತ್ರಣ ಕಾಮಗಾರಿಗಳಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಗುಂಜೂರಿನಲ್ಲಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ನಮ್ಮ ಸರ್ಕಾರ ನಗರದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಿದೆ. ಮಳೆಗಾಲದಲ್ಲಿ ಪ್ರವಾಹ ಉಂಟಾಗದಂತೆ ನೀರುಗಾಲುವೆಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ಸಂಚಾರ ದಟ್ಟಣೆ ನಿವಾರಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಸರ್ಕಾರದ ಗುರಿ. ನಗರದ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಕಳೆದ ಮೂರು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು ಇತಿಹಾಸದಲ್ಲಿ ಅಭಿವೃದ್ಧಿಗಾಗಿ ಹಿಂದೆಂದೂ ಇಷ್ಟೊಂದು ಪ್ರಮಾಣದ ಹಣ ಹೂಡಿಕೆ ಮಾಡಿರುವ ಉದಾಹರಣೆ ಇಲ್ಲ’ ಎಂದರು.

‘ಮಳೆ ಬಂದಾಗ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸುಮಾರು ₹2,000 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಮತ್ತು ಮಳೆನೀರು ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಜಿಬಿಎ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಇನ್ನೂ ಹಲವು ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಒತ್ತುವರಿ ತೆರವು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದರು.

‘ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಜಾರಿಗೆ ಬಂದ ನರ್ಮ್ ಯೋಜನೆಯಡಿ ಬೆಂಗಳೂರು ನಗರದಲ್ಲಿ ಹಲವು ಪ್ರಮುಖ ಕಾಮಗಾರಿಗಳು ನಡೆದಿವೆ. ಹೊಸಕೋಟೆ ರಸ್ತೆ, ಕೆ.ಆರ್. ಪುರ ಭಾಗದ ರಸ್ತೆ, ವಿಮಾನ ನಿಲ್ದಾಣ, ಮೇಲ್ಸೇತುವೆ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಹಾಗೂ ನೆಲಮಂಗಲ ಮೇಲ್ಸೇತುವೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ರಾಜಕೀಯ ಉದ್ದೇಶದಿಂದ ಮಾಡಿದ್ದಲ್ಲ. ನಗರದ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಂಡ ಕೆಲಸಗಳು’ ಎಂದು ತಿಳಿಸಿದರು.

‘ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಗರ ಯೋಜನೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ಬೆಂಗಳೂರು ನಗರದಲ್ಲಿ ರಸ್ತೆ ಗ್ರಿಡ್ ವ್ಯವಸ್ಥೆ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಸ್ತೆ ಗ್ರಿಡ್‌ಗಳ ವ್ಯಾಪ್ತಿಯಲ್ಲಿ ಅನಿಯಂತ್ರಿತ ಕಟ್ಟಡ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಎಲ್ಲಿಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ, ಎಲ್ಲಿ ತಡೆಗೋಡೆ ನಿರ್ಮಿಸಬೇಕು ಎಂಬುದರ ಕುರಿತು ಸಮಗ್ರ ನಕ್ಷೆ ಸಿದ್ಧಪಡಿಸಿ ಪರಿಶೀಲಿಸಲಾಗುತ್ತಿದೆ. ಮೇಲ್ಸೇತುವೆ, ಡಬಲ್ ಡೆಕರ್ ರಸ್ತೆ ಹಾಗೂ ಮೆಟ್ರೊ ವಿಸ್ತರಣೆಯಂತಹ ಯೋಜನೆಗಳಿಗೂ ಸರ್ಕಾರ ಆದ್ಯತೆ ನೀಡಿದೆ’ ಎಂದರು.

ಸಚಿವ ಕೃಷ್ಣ ಬೈರೇಗೌಡ, ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿಖಾನ್, ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ವಿಧಾನ ಪರಿಷತ್ ಸದಸ್ಯ ಎ.ಪಿ. ರಂಗನಾಥ್, ಮಾಜಿ ಸಚಿವ ಎಚ್.ನಾಗೇಶ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪೂರ್ವ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್, ಬಿಬಿಎಂಪಿ ಮಾಜಿ ಸದಸ್ಯ ಉದಯ್ ಕುಮಾರ್, ಮುಖಂಡರಾದ ನಲ್ಲೂರಹಳ್ಳಿ ಟಿ.ನಾಗೇಶ್, ಜಯರಾಮ್ ರೆಡ್ಡಿ, ಆರ್.ರಾಮಕೃಷ್ಣಪ್ಪ, ಶ್ರೀನಿವಾಸ್ ರೆಡ್ಡಿ ಉಪಸ್ಥಿತರಿದ್ದರು.

ವಾಟ್ಸ್‌ಆ್ಯಪ್‌ನಲ್ಲಿ ಉಚಿತವಾಗಿ ಇ–ಖಾತಾ

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿನ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸ್‌ ಆ್ಯಪ್‌ ಮೂಲಕ ಇ-ಖಾತಾವನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.

ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾದ ‘ಭೂ-ಗ್ಯಾರಂಟಿ – ನನ್ನ ಖಾತಾ, ನನ್ನ ಹಕ್ಕು’ ಅಭಿಯಾನದಡಿ, ಆಸ್ತಿ ಮಾಲೀಕರು ತಮ್ಮ ಇ-ಖಾತಾ ಪ್ರಮಾಣಪತ್ರವನ್ನು ಪಿಡಿಎಫ್‌ ರೂಪದಲ್ಲಿ, ವಿಶಿಷ್ಟ ಇಪಿಐಡಿ ಸಂಖ್ಯೆಯೊಂದಿಗೆ ಪಡೆಯಲಿದ್ದಾರೆ. ಇದರಿಂದ ಸಾರ್ವಜನಿಕರು ಯಾವುದೇ ಸರ್ಕಾರಿ ಕಚೇರಿಗೆ ಭೇಟಿ ನೀಡದೆ ಅಥವಾ ಮಧ್ಯವರ್ತಿಗಳನ್ನು ಸಂಪರ್ಕಿಸದೆ ತಮ್ಮ ಇ-ಖಾತಾ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿರಿಸಿಕೊಳ್ಳಬಹುದು ಎಂದರು.

ಆಸ್ತಿ ತೆರಿಗೆ ಪಾವತಿಸುವ ಸಂರ್ಭದಲ್ಲಿ ನೀಡಲಾಗಿರುವ ಮೊಬೈಲ್‌ ಸಂಖ್ಯೆಗೆ ಇ–ಖಾತಾವನ್ನು ವಾಟ್ಸ್‌ ಆ್ಯಪ್‌ ಮಾಡಲಾಗುವುದು. ವಾಟ್ಸ್‌ ಆ್ಯಪ್‌ ಸಂದೇಶದೊಂದಿಗೆ ಜಿಬಿಎನ ಅಧಿಕೃತ ಇ-ಆಸ್ತಿ ಪೋರ್ಟಲ್‌ ಆದ https://GBAeAasthi.karnataka.gov.in ಲಿಂಕ್ ಅನ್ನು ಸಹ ನೀಡಲಾಗಿದ್ದು, ಇಪಿಐಡಿ ಬಳಸಿ ಆನ್‌ಲೈನ್ ಮೂಲಕ ಇ-ಖಾತಾದಲ್ಲಿ ತಿದ್ದುಪಡಿ ಅಥವಾ ಮಾಲೀಕತ್ವ ಬದಲಾವಣೆ (ಮ್ಯುಟೇಷನ್) ಪ್ರಕ್ರಿಯೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರಿ ಸೇವೆಗಳನ್ನು ನೇರವಾಗಿ ನಾಗರಿಕರ ಮನೆಬಾಗಿಲಿಗೆ ತಲುಪಿಸುವ ಈ ಉಪಕ್ರಮವು, ಕಚೇರಿ ಅನಗತ್ಯ ಭೇಟಿಗಳನ್ನು ತಪ್ಪಿಸುವುದರ ಜೊತೆಗೆ, ಪಾರದರ್ಶಕ, ಸುಲಭ ಹಾಗೂ ನಾಗರಿಕ ಸ್ನೇಹಿ ಸೇವಾ ವಿತರಣೆಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.

ಅಕ್ರಮ‌ ಮತದಾರರ ಸೇರ್ಪಡೆ

‘ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೆಂಗಳೂರಿನಲ್ಲಿ ಸುಮಾರು 45 ಲಕ್ಷ ಮತಗಳು ಕಡಿಮೆಯಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆ ಮತ್ತು ತೆಗೆದುಹಾಕುವಿಕೆ ಕುರಿತು ಗಂಭೀರ ಪರಿಶೀಲನೆ ಅಗತ್ಯವಿದೆ. ಕೆಲವು ಕ್ಷೇತ್ರಗಳಲ್ಲಿ ಹೊಸದಾಗಿ 12 ಸಾವಿರರಿಂದ 15 ಸಾವಿರ ಮತಗಳನ್ನು ಮೂಲ ದಾಖಲೆಗಳಿಲ್ಲದೆ ಸೇರ್ಪಡೆ ಮಾಡಲಾಗಿದೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

‘ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರು ಇರಬಾರದು. ಅದೇ ರೀತಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಬಾರದು. ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು. ಇದು ಕೇವಲ ಮತದಾನದ ಹಕ್ಕಲ್ಲ, ಸ್ವಾಭಿಮಾನದ ಹಕ್ಕು. ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು’ ಎಂದು ತಿಳಿಸಿದರು.

ಜಲ ಭದ್ರತೆ, ವಿಪತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ

₹2,000 ಕೋಟಿ; ಯೋಜನೆಯ ಒಟ್ಟು ಅಂದಾಜು ವೆಚ್ಚ

₹1,700 ಕೋಟಿ; ವಿಶ್ವಬ್ಯಾಂಕ್‌ ನೆರವು

₹300 ಕೋಟಿ; ರಾಜ್ಯ ಸರ್ಕಾರದ ಪಾಲು

351; ಪ್ರಸ್ತಾವಿತ ಕಾಮಗಾರಿಗಳು

==

859.90 ಕಿ.ಮೀ; ನಗರದಲ್ಲಿ ರಾಜಕಾಲುವೆಗಳ ಒಟ್ಟು ಉದ್ದ

686 ಕಿ.ಮೀ; ರಾಜಕಾಲುವೆಗಳ ತಡೆಗೋಡೆ ಅಭಿವೃದ್ಧಿ ಪೂರ್ಣ

75 ಕಿ.ಮೀ; 2005ರವರೆಗೆ ಅಭಿವೃದ್ಧಿ

102 ಕಿ.ಮೀ; 2006ರಿಂದ 2015ರವರೆಗೆ ಅಭಿವೃದ್ಧಿ

212 ಕಿ.ಮೀ; 2016ರಿಂದ 2018ರವರೆಗೆ ಕಾಮಗಾರಿ

102 ಕಿ.ಮೀ; 2019ರಿಂದ 2021ರವರೆ ಅಭಿವೃದ್ಧಿ

195 ಕಿ.ಮೀ; 2002ರಿಂದ ತಡೆಗೋಡೆ ನಿರ್ಮಾಣ ಕಾಮಗಾರಿಗಳು

ವಾಟ್ಸ್‌ಆ್ಯಪ್‌ನಲ್ಲಿ ಇ–ಖಾತಾ

261118-4-365990698