ಬೆಂಗಳೂರು, ನವೆಂಬರ್​​ 18:  ಬಿಐಇಸಿಯಲ್ಲಿ ನಿನ್ನೆಯಿಂದ (ನವೆಂಬರ್​​ 17) ಆರಂಭವಾಗಿರುವ 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್​​ನಲ್ಲಿ ಒಂದಕ್ಕಿಂತ ಒಂದು ವಿಭಿನ್ನ ತಂತ್ರಜ್ಞಾನಗಳ ರೋಬೋಟ್‌ಗಳು ನೋಡುಗರ ಕಣ್ಮನ ಸೆಳೆದಿವೆ. ಮನುಷ್ಯರು ಹೋಗಲಾಗದ ಸ್ಥಳಗಳಲ್ಲೂ ಸಂಚರಿಸಿ ಮಣ್ಣಿನ ಸ್ಯಾಂಪಲ್ ಸಂಗ್ರಹಿಸುವ ಮೈನಿಂಗ್ ರೋಬೋಟ್ ಇವುಗಳಲ್ಲಿ ವಿಶೇಷ ಆಕರ್ಷಣೆಯಾಗಿದೆ. ಚಿನ್ನ, ಕಬ್ಬಿಣದಂತಹ ಖನಿಜಗಳ ಗುಣಮಟ್ಟ ಪತ್ತೆಹಚ್ಚಲು ಈ ತಂತ್ರಜ್ಞಾನ ನೆರವಾಗಲಿದೆ ಎನ್ನಲಾಗಿದೆ.

ಸೇನಾ ಕಾರ್ಯಾಚರಣೆಗಳಿಗೂ ನೆರವಾಗಬಲ್ಲ ಈ ಯಂತ್ರಮಾನವ!

ಇನ್ನು ಸೈನಿಕರಿಗೆ ಅಗತ್ಯ ವಸ್ತುಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿರುವ ನಾಲ್ಕು ಕಾಲಿನ ರೋಬೋಟ್‌ಗಳೂ ಪ್ರದರ್ಶನದ ವಿಶೇಷವಾಗಿತ್ತು. ಈ ರೋಬೋಟ್‌ಗಳು ಸೇನಾ ಕಾರ್ಯಾಚರಣೆಗಳಿಗೂ ನೆರವಾಗಬಲ್ಲವಾಗಿದ್ದು, ಬೆಟ್ಟ, ಗುಡ್ಡ, ಮರಳುಗಾಡಿನಂತಹ ಕಠಿಣ ಪ್ರದೇಶಗಳಲ್ಲೂ ಸಂಚರಿಸುವ ಜೀಪ್ ಮಾದರಿಯ ರೋಬೋಟ್ ಕೂಡ ಗಮನಸೆಳೆದಿದೆ. ಸುಮಾರು 20 ಕೆ.ಜಿ. ತೂಕದ ಈ ರೋಬೋಟ್ 15 ಕೆ.ಜಿ. ವರೆಗೂ ಭಾರ ಹೊರುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ:  29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್​​ಗೆ ಸಿಎಂ ಡಿಕೆ ಶಿವಕುಮಾರ್​​ ಚಾಲನೆ

ಮನುಷ್ಯರಂತೆ ನಡೆಯುವ, ಕುಣಿಯುವ ರೋಬೋಟ್​​

ಮನುಷ್ಯನಿಗೆ ಬಾಡಿಗಾರ್ಡ್‌ನಂತೆ ರಕ್ಷಣೆ ನೀಡುವ ಹ್ಯೂಮನಾಯ್ಡ್ ರೋಬೋಟ್ ಕೂಡ ಎಲ್ಲರನ್ನೂ ಬೆರಗುಗೊಳಿಸಿದೆ. ಎದುರಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಈ ರೋಬೋಟ್, ಮನುಷ್ಯರಂತೆ ನಡೆಯುತ್ತೆ, ಕುಣಿಯುತ್ತೆ. ತರ್ಲೆ ಮಾಡಿದ್ರೆ ಹೊಡೆಯುತ್ತೆ! ಮತ್ತೊಂದೆಡೆ ಚಿಕ್ಕ ಗಾತ್ರದ ಮಾನವ ಸ್ನೇಹಿ ರೋಬೋಟ್ ತನ್ನ ಡ್ಯಾನ್ಸ್‌ನಿಂದ ಜನರನ್ನು ರಂಜಿಸುತ್ತಿದೆ. ಸ್ಪೀಕರ್, ಸಿಸಿ ಕ್ಯಾಮರಾ ಹೊಂದಿರುವ ಈ ರೋಬೋಟ್ ವಾಕಿಂಗ್‌ಗೂ ಸಾಥ್ ನೀಡಲಿದೆ.

ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಬೆಂಗಳೂರು ಟೆಕ್​​ ಸಮಿಟ್​​ ಆಯೋಜಿಸಲಾಗಿದೆ. ವಿಶ್ವದ 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, 700ಕ್ಕೂ ಹೆಚ್ಚು ಭಾಷಣಕಾರರು, 1,500ಕ್ಕೂ ಹೆಚ್ಚು ಪ್ರದರ್ಶಕರು, 16 ವಿಷಯಾಧಾರಿತ ವಿಭಾಗಗಳು, 13 ವೇದಿಕೆಗಳಲ್ಲಿ 140ಕ್ಕೂ ಹೆಚ್ಚು ವಿಚಾರಗೋಷ್ಠಿಗಳು ಸಮಿಟ್​​ನ ಭಾಗವಾಗಿರಲಿವೆ. ದೇಶದ 100 ನಗರಗಳಿಂದ 1,000ಕ್ಕೂ ಹೆಚ್ಚು ನವೋದ್ಯಮಗಳು ಸೇರಿ ಸ್ವೀಡನ್ ಪಾಲುದಾರ ರಾಷ್ಟ್ರ, ಆಸ್ಟ್ರೇಲಿಯಾ, ಪೋಲೆಂಡ್ ಮತ್ತು ಇಟಲಿ ಬೆಂಬಲಿತ ರಾಷ್ಟ್ರಗಳು ಕೂಡ ಸಮಿಟ್​​ನಲ್ಲಿ ಪಾಲ್ಗೊಂಡಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.