ಭಾರತೀಯ ಕ್ರಿಕೆಟ್ ಲೋಕದ ದಂತಕಥೆ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಈಗ ಅವರ ಮುಂದಿನ ನಡೆಗಳ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ. ಕ್ರಿಕೆಟ್ ಮೈದಾನದಿಂದ ದೂರ ಸರಿದಿರುವ ಧೋನಿ, ಈಗ ತಮ್ಮದೇ ಆದ ‘ಧೋನಿ ಎಂಟರ್‌ಟೈನ್‌ಮೆಂಟ್’ ಪ್ರೊಡಕ್ಷನ್ ಹೌಸ್ ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದಾರೆಯೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಧೋನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಯನ್ನು ಸದ್ಯ ಧೋನಿ ಪತ್ನಿ ಸಾಕ್ಷಿ ಧೋನಿ ಅವರು ವ್ಯವಸ್ಥಾಪಕ ನಿರ್ದೇಶಕಿಯಾಗಿ ಮತ್ತು ಸಾಕ್ಷಿ ಅವರ ತಾಯಿ ಶೀಲಾ ಸಿಂಗ್ ಅವರು ಸಿಇಒ ಆಗಿ ಮುನ್ನಡೆಸುತ್ತಿದ್ದಾರೆ. ಈ ಸಂಸ್ಥೆಯು ಈ ಹಿಂದೆ ರೋರ್ ಆಫ್ ದಿ ಲಯನ್’ ನಂತಹ ಉತ್ತಮ ಡಾಕ್ಯುಮೆಂಟರಿ ಹಾಗೂ ಡಿಜಿಟಲ್ ಕಂಟೆಂಟ್‌ಗಳನ್ನು ನಿರ್ಮಿಸಿ ಗಮನ ಸೆಳೆದಿತ್ತು.

2023ರಲ್ಲಿ ರಮೇಶ್ ತಮಿಳ್ಮಣಿ ನಿರ್ದೇಶನದ, ಹರೀಶ್ ಕಲ್ಯಾಣ್ ಮತ್ತು ಇವಾನಾ ಅಭಿನಯದ ‘ಲೆಟ್ಸ್ ಗೆಟ್ ಮ್ಯಾರೀಡ್’ ಎಂಬ ತಮಿಳು ಕೌಟುಂಬಿಕ ಸಿನಿಮಾದ ಮೂಲಕ ಧೋನಿ ಸಂಸ್ಥೆ ಮುಖ್ಯವಾಹಿನಿಯ ಚಲನಚಿತ್ರ ನಿರ್ಮಾಣಕ್ಕೆ ಪದಾರ್ಪಣೆ ಮಾಡಿತ್ತು. ಆದರೆ ಈ ಮೊದಲ ಸಿನಿಮಾ ಬಿಡುಗಡೆಯಾಗಿ ಈಗ ಬರೋಬ್ಬರಿ ಮೂರು ವರ್ಷಗಳು ಕಳೆದಿವೆ. ಅಂದಿನಿಂದ ಸಂಸ್ಥೆಯಿಂದ ಮತ್ತೊಂದು ದೊಡ್ಡ ಸಿನಿಮಾ ಘೋಷಣೆಯಾಗದ ಕಾರಣ, ಪ್ರೊಡಕ್ಷನ್ ಹೌಸ್ ಸ್ಥಗಿತಗೊಂಡಿದೆಯೇ ಎಂಬ ವದಂತಿಗಳೂ ಹಬ್ಬಿದ್ದವು.

ಇದನ್ನೂ ಓದಿ: ಸಿಎಸ್​​ಕೆ ನಾಯಕನಿಂದ ಮೆಂಟರ್​​ ವರೆಗೆ: ಮಹೇಂದ್ರ ಸಿಂಗ್​​ ಧೋನಿ ನಡೆದುಬಂದ ಐಪಿಎಲ್​​ ಹಾದಿ 

ಆದರೆ ವಾಸ್ತವದಲ್ಲಿ ಧೋನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಸ್ಥಗಿತಗೊಂಡಿಲ್ಲ, ಬದಲಾಗಿ ತೆರೆಮರೆಯಲ್ಲಿ ಸಕ್ರಿಯವಾಗಿದೆ. ಸಂಸ್ಥೆಯು ಸದ್ಯ ಪ್ರಾದೇಶಿಕ ಕಂಟೆಂಟ್‌ಗಳ ಅಭಿವೃದ್ಧಿ, ಜಾಹೀರಾತು ಚಿತ್ರಗಳು ಹಾಗೂ ‘ಗರುಡ ಏರೋಸ್ಪೇಸ್’ ಸೇರಿದಂತೆ ವಿವಿಧ ಬ್ರಾಂಡ್‌ಗಳ ಪ್ರಚಾರ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದೆ. ಈಗ ಧೋನಿ ಕೂಡ ಐಪಿಎಲ್‌ನಿಂದ ನಿವೃತ್ತರಾಗಿರುವುದರಿಂದ, ಪೂರ್ಣ ಪ್ರಮಾಣದಲ್ಲಿ ಸಿನಿಮಾ ನಿರ್ಮಾಣಕ್ಕೆ ಕಂಬ್ಯಾಕ್ ಮಾಡಿ ಹೊಸ ಚಿತ್ರಗಳನ್ನು ಘೋಷಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.