ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಮತ್ತೆ ಗುಂಡಿನ ಚಕಮಕಿ ಆರಂಭವಾಗಿದ್ದು, ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಎರಡು ದಿನಗಳ ಹಿಂದೆ ಇದೇ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿತ್ತು. ಇದೀಗ ಪರಾರಿಯಾಗಿರುವ ಉಗ್ರ ಲತೀಫ್ ಭಟ್‌ನನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಈ ನಡುವೆ, ಕಾರ್ಯಾಚರಣೆಯ ವೇಳೆ ಹಿರಿಯ ಭದ್ರತಾ ಅಧಿಕಾರಿಗಳು ಉಗ್ರ ಲತೀಫ್‌ಗೆ ಶರಣಾಗುವಂತೆ ಹಾಗೂ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗತಿ ಪ್ರಕ್ರಿಯೆಗೆ ಮುಂದಾಗುವಂತೆ ಪದೇಪದೇ ಮನವಿ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕಂಡುಬಂದಿವೆ.

ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಉಮರ್ ನಿಸಾರ್ ದಾರ್ ಎಂಬ ಉಗ್ರನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಆದರೆ, ಲಾರು ಬೈಪಾಸ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಸುತ್ತುವರಿಕೆಯಿಂದ ಲತೀಫ್ ಭಟ್ ತಪ್ಪಿಸಿಕೊಂಡು ಪರಾರಿಯಾಗಿದ್ದ.

ಆತನ ಪತ್ತೆಗಾಗಿ ಪ್ರದೇಶದಾದ್ಯಂತ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಬುಧವಾರ ಮುಂಜಾನೆ ಶೋಧ ಕಾರ್ಯಾಚರಣೆ ವೇಳೆ ಉಗ್ರರೊಂದಿಗೆ ಮತ್ತೆ ಸಂಪರ್ಕ ಏರ್ಪಟ್ಟಿದ್ದು, ಗುಂಡಿನ ಚಕಮಕಿ ಆರಂಭವಾಗಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಲ್ಗಾಮ್‌ನಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ತಂಡ ಹಾಗೂ ಉಗ್ರರ ನಡುವೆ ಎನ್‌ಕೌಂಟರ್ ಆರಂಭವಾಗಿದೆ" ಎಂದು ಕಾಶ್ಮೀರ ವಲಯ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Kulgam, Jammu and Kashmir: A video shows senior security officials repeatedly appealing to terrorist Lateef to surrender and lay down his arms during the ongoing anti-terror operation

(Video Source: Indian Army) pic.twitter.com/AvFDiJMJ5b

— IANS (@ians_india) November 18, 2026

ಸೋಮವಾರದ ಬಳಿಕ ಗುಂಡಿನ ಚಕಮಕಿ ನಡೆದಿರಲಿಲ್ಲ. ಆದರೆ, ಲತೀಫ್ ಭಟ್‌ನನ್ನು ಪತ್ತೆಹಚ್ಚಿ ಹತ್ಯೆ ಮಾಡುವ ಉದ್ದೇಶದಿಂದ ಎನ್‌ಕೌಂಟರ್ ನಡೆದ ಸ್ಥಳದ ಸುತ್ತಮುತ್ತಲಿನ ವಿಶಾಲ ಪ್ರದೇಶದಲ್ಲಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದವು.

ಬುಧವಾರ ಮುಂಜಾನೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರೊಂದಿಗೆ ಭದ್ರತಾ ಪಡೆಗಳಿಗೆ ಸಂಪರ್ಕ ಏರ್ಪಟ್ಟಿದ್ದು, ಮತ್ತೆ ಗುಂಡಿನ ಚಕಮಕಿ ಆರಂಭವಾಗಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ದಾರ್ ಸುಮಾರು ಆರು ತಿಂಗಳ ಕಾಲ ಉಗ್ರ ಕಮಾಂಡರ್ ಲತೀಫ್ ಭಟ್‌ಗೆ ಆಶ್ರಯ ಮತ್ತು ಇತರ ಅಗತ್ಯ ನೆರವು ಒದಗಿಸಿದ್ದ ಎನ್ನಲಾಗಿದೆ. ಕಳೆದ ವಾರ ಬುಧವಾರ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ ನಡೆಸುವ ಮುನ್ನ ಇಬ್ಬರೂ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು.

ಹಿಂದೆ ರೊಟ್ಟಿ ತಯಾರಿಸುವ ಕೆಲಸ ಮಾಡುತ್ತಿದ್ದ ದಾರ್ ನಾಪತ್ತೆಯಾಗಿದ್ದಾನೆ ಎಂದು ಆತನ ಕುಟುಂಬದವರು ದೂರು ನೀಡಿದ್ದರು.

ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಸೇರಿದ್ದಾನೆ ಎನ್ನಲಾದ ಕೇವಲ ಒಂದು ವಾರದೊಳಗೆ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಆತ ಹತನಾಗಿದ್ದಾನೆ.