ಮುಂಬೈ (ಅ.29): ಸೋಶಿಯಲ್‌ ಮೀಡಿಯಾಗಳ ಹಾಟ್ ಫೇವರಿಟ್ ಹಾಗೂ ಬಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ಗೆಳೆಯ ಓರಿ (Orry) ತಮ್ಮ ವಿಭಿನ್ನ ಹ್ಯಾಲೋವೀನ್ ಲುಕ್ ಮೂಲಕ ಮತ್ತೊಮ್ಮೆ ಎಲ್ಲರ ಗಮನಸೆಳೆದಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಪ್ಯಾಪರಾಜಿಗಳ (Paparazzi) ಮುಂದೆ ಪ್ರತ್ಯಕ್ಷರಾದ ಓರಿ, 2018 ರ ಪ್ರಸಿದ್ಧ ಕಲ್ಟ್ ಹಾರರ್ ಸಿನಿಮಾ ಥುಂಬಾಡ್‌ ಚಿತ್ರದ ದುರಾಸೆಯ ಶಾಪಗ್ರಸ್ತ ದೇವತೆ ಹಸ್ತರ್‌ ರೂಪದಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಕ್ಷಣಕಾಲ ಅಚ್ಚರಿಗೆ ನೂಕಿದ್ದಾರೆ.

ಹ್ಯಾಲೋವೀನ್ ಅವತಾರದಲ್ಲಿ ಓರಿ, ದೇಹ ಪೂರ್ತಿ ಕೆಂಪು ಬಣ್ಣ ಬಳಿದುಕೊಂಡು, ತಲೆಯಲ್ಲಿ ಚಿನ್ನದ ಹೋಲಿಕೆಯ ಕಿರೀಟ, ಸಾಂಪ್ರದಾಯಿಕ ಕೆಂಪು-ಚಿನ್ನದ ಪಟ್ಟಿಯ ಶೈಲಿಯ ಡ್ರೆಸ್ ಹಾಗೂ ಸ್ಕರ್ಟ್ ಧರಿಸಿ ಹುಬ್ಬೇರಿಸಿದ್ದರು. ಹಸ್ತರ್‌ ದೇವತೆಯ ರಕ್ತಸಿಕ್ತ ಹಾಗೂ ಭಯಾನಕ ರೂಪವನ್ನು ಮರುಸೃಷ್ಟಿಸಿದ್ದ ಓರಿಯ ಈ ಹೈ-ಫ್ಯಾಷನ್ ಹಾಗೂ ಹಾರರ್ ಸಮ್ಮಿಲನದ ಅವತಾರವನ್ನು ಕಂಡು ಪ್ಯಾಪರಾಜಿಗಳು ಹಾಗೂ ಅಭಿಮಾನಿಗಳು ಅಚ್ಚರಿಪಟ್ಟಿದ್ದು, "ಓರಿ ಕಂಪ್ಲೀಟ್ ಆಗಿ ಧೂಳೆಬ್ಬಿಸಿದ್ದಾರೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಮಹಾಪೂರ ಹರಿಸುತ್ತಿದ್ದಾರೆ.

ಅಧಿಕೃತವಾಗಿ ಅನೌನ್ಸ್ ಆಗಿದೆ ಥುಂಬಾಡ್‌-2

ಓರಿ ಅವರ ಈ ಹಸ್ತರ್ ಅವತಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ, ಥುಂಬಾಡ್‌ ಸಿನಿಮಾದ ಅಭಿಮಾನಿಗಳಿಗೂ ಸಿಹಿ ಸುದ್ದಿ ಸಿಕ್ಕಿದೆ. ಇತ್ತೀಚೆಗಷ್ಟೇ ಮರು-ಬಿಡುಗಡೆಯಾಗಿ (Re-release) ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ನಿರ್ಮಿಸಿದ್ದ ಥುಂಬಾಡ್‌ ಸಿನಿಮಾದ ಎರಡನೇ ಭಾಗ ‘ಥುಂಬಾಡ್ 2’ (Tumbbad 2) ಅಧಿಕೃತವಾಗಿ ಶೂಟಿಂಗ್ ಹಂತಕ್ಕೆ ಕಾಲಿಟ್ಟಿದೆ. ಚಿತ್ರದ ನಾಯಕ ಹಾಗೂ ನಿರ್ಮಾಪಕ ಸೋಹಮ್ ಶಾ (Sohum Shah) ಅವರು Pralay Aayega ಎನ್ನುವ ಕಥಾ ಸಾಲಿನೊಂದಿಗೆ 'ಥುಂಬಾಡ್ 2' ಚಿತ್ರದ ಥಿಯೇಟರ್ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಈ ಬೃಹತ್ ಫ್ಯಾಂಟಸಿ ಹಾರರ್ ಚಿತ್ರವು 2027 ರ ಡಿಸೆಂಬರ್ 3 ರಂದು ಜಗತ್ತಿನಾದ್ಯಂತ ರಿಲೀಸ್‌ ಆಗಲಿದೆ.

ಆಲಿಯಾ ಭಟ್, ನವಾಜುದ್ದೀನ್ ಸಿದ್ದಿಕಿ ಮೆಗಾ ಎಂಟ್ರಿ!

'ಥುಂಬಾಡ್ 2' ಚಿತ್ರವು ಮೊದಲ ಭಾಗಕ್ಕಿಂತಲೂ ಭಾರಿ ದೊಡ್ಡ ಮಟ್ಟದಲ್ಲಿ ರೂಪುಗೊಳ್ಳುತ್ತಿದ್ದು, ಬಾಲಿವುಡ್‌ನ ಪ್ರಮುಖರು ಶಾಪಗ್ರಸ್ತ ಲೋಕಕ್ಕೆ ಪ್ರವೇಶಿಸಿದ್ದಾರೆ. ಪ್ರಮುಖ ಲೀಡ್ ಪಾತ್ರವೊಂದರಲ್ಲಿ ನಟಿ ಆಲಿಯಾ ಭಟ್ ನಟಿಸುವುದು ಖಚಿತವಾಗಿದೆ. ಬರೋಬ್ಬರಿ 5 ವರ್ಷಗಳ ಕಾಲ ಬರೆಯಲಾದ ಈ ಸೀಕ್ವೆಲ್‌ನ ಸ್ಕ್ರಿಪ್ಟ್ ಕೇಳಿ ಅಚ್ಚರಿಪಟ್ಟಿರುವ ಆಲಿಯಾ, ಕೇವಲ ಎರಡೇ ಭೇಟಿಯಲ್ಲಿ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಸೋಹಮ್ ಶಾ ತಿಳಿಸಿದ್ದಾರೆ.

ನವಾಜುದ್ದೀನ್ ಸಿದ್ದಿಕಿ ಈ ಚಿತ್ರದಲ್ಲಿ ಅತ್ಯಂತ ಸಂಕೀರ್ಣವಾದ ಪ್ರಮುಖ ಪಾತ್ರವೊಂದನ್ನು ಪೋಷಿಸುತ್ತಿದ್ದಾರೆ. ಈಗಾಗಲೇ ಸತಾರಾ ಹಾಗೂ ಮುಂಬೈನಲ್ಲಿ ನಡೆದಿರುವ ಮೊದಲ ಹಂತದ ಶೂಟಿಂಗ್‌ನಲ್ಲಿ ಅವರು ಭಾಗವಹಿಸಿ ತಮ್ಮ ದೃಶ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಭಾಗದಂತೆ ನಾಯಕ ನಟನಾಗಿ ಹಾಗೂ 'ಸೋಹಮ್ ಶಾ ಫಿಲ್ಮ್ಸ್' ಮತ್ತು 'ಪೆನ್ ಸ್ಟುಡಿಯೋಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾಗಿ ಸೀಕ್ವೆಲ್ ಅನ್ನು ಮುನ್ನಡೆಸುತ್ತಿದ್ದಾರೆ.

ನಿರ್ದೇಶಕರು ಮತ್ತು ಕಥೆಯ ರಹಸ್ಯ

2018 ರ ಮೂಲ 'ಥುಂಬಾಡ್' ಚಿತ್ರಕ್ಕೆ ಸಹ-ನಿರ್ದೇಶಕರಾಗಿ ಹಾಗೂ ಬರಹಗಾರರಾಗಿ ಕೆಲಸ ಮಾಡಿದ್ದ ಆದೇಶ್ ಪ್ರಸಾದ್ (Adesh Prasad) ಅವರು 'ಥುಂಬಾಡ್ 2' ಚಿತ್ರದ ಪೂರ್ಣಪ್ರಮಾಣದ ನಿರ್ದೇಶನದ ಚುಕ್ಕಾಣಿ ಹಿಡಿದಿದ್ದಾರೆ. ಮೂಲ ಚಿತ್ರದ ನಿರ್ದೇಶಕ ರಾಹಿ ಅನಿಲ್ ಬಾರ್ವೆ ಅವರು ಸದ್ಯ ಪ್ರತ್ಯೇಕ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿರುವ ಕಾರಣ ಈ ಯೋಜನೆಯಿಂದ ಹೊರಗುಳಿದಿದ್ದಾರೆ. ಚಿತ್ರದ ಕಥಾಹಂದರವನ್ನು ಅತ್ಯಂತ ರಹಸ್ಯವಾಗಿಡಲಾಗಿದ್ದರೂ, ಸೀಕ್ವೆಲ್‌ನಲ್ಲಿ ಹಸ್ತರ್‌ ದೇವತೆಯ ಕರಾಳ ಪುರಾಣದ ಆಳಕ್ಕೆ ಇಳಿಯಲಿದ್ದು, ಮಾನವನ ಅಪರಿಮಿತ ದುರಾಸೆಯ ವಿನಾಶಕಾರಿ ಚಕ್ರವನ್ನು ಮತ್ತಷ್ಟು ಭೀಕರವಾಗಿ ಹಾಗೂ ಬೃಹತ್ ಕ್ಯಾನ್ವಾಸ್‌ನಲ್ಲಿ ತೋರಿಸುವ ಸಾಧ್ಯತೆ ಇದೆ.

Orry just won Halloween by becoming everyone's favorite terrifying deity - Hastar! https://t.co/1J0wrB9Qsp

— Filmfare (@filmfare) October 29, 2026