ಲಿವರ್ ನಮ್ಮ ದೇಹದ ಪ್ರಮುಖ ಅಂಗ. ಫ್ಯಾಟಿ ಲಿವರ್ ಸೇರಿದಂತೆ ಲಿವರ್ ಸಮಸ್ಯೆಗಳಿಂದ ದೂರವಿದ್ದು, ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಆಹಾರ ಪದ್ಧತಿಯೂ ಮುಖ್ಯ. ಬೆಳ್ಳುಳ್ಳಿ, ಮೊಸರು ಸೇರಿದಂತೆ ಲಿವರ್ ಆರೋಗ್ಯಕ್ಕೆ ಸಹಾಯ ಮಾಡುವ 5 ಆಹಾರಗಳ ಬಗ್ಗೆ ತಿಳಿಯಿರಿ.

ಲಿವರ್ (ಯಕೃತ್ತು) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಸಾಮಾನ್ಯವಾಗುತ್ತಿದೆ. ಫ್ಯಾಟಿ ಲಿವರ್ ಸಮಸ್ಯೆಯನ್ನು ಗುಣಪಡಿಸಿಕೊಳ್ಳಲು ಹಲವರು ಔಷಧಿಗಳ ಮೊರೆ ಹೋಗುತ್ತಾರೆ. ಆದರೆ ವೈದ್ಯರು ತಿಳಿಸುವ ಪ್ರಕಾರ, ನಮ್ಮ ದೈನಂದಿನ ಆಹಾರದಲ್ಲಿ ಈ 5 ಪದಾರ್ಥಗಳನ್ನು ಸೇರಿಸಿಕೊಳ್ಳುವುದರಿಂದ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಹಾಗಾದರೆ ಆ 5 ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿಯೋಣ.

ಬೆಳ್ಳುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳು ಸಮೃದ್ಧವಾಗಿವೆ. ಇವು ಲಿವರ್‌ನ ಕಿಣ್ವಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತವೆ. ದೇಹದಲ್ಲಿರುವ ಹಾನಿಕಾರಕ ವಸ್ತುಗಳನ್ನು ಸಂಸ್ಕರಿಸಿ ಹೊರಹಾಕುವ ಲಿವರ್‌ನ ಕಾರ್ಯಕ್ಕೆ ಬೆಳ್ಳುಳ್ಳಿ ನೆರವಾಗಬಹುದು. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1-2 ಎಸಳು ಹಸಿ ಬೆಳ್ಳುಳ್ಳಿಯನ್ನು ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸುವುದು ಪ್ರಯೋಜನಕಾರಿ.

ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಪ್ರಮುಖ ಅಂಶವಿದೆ. ಇದು ಉರಿಯೂತ ನಿವಾರಕ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಲಿವರ್‌ನ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಮತ್ತು ಲಿವರ್ ಆರೋಗ್ಯವನ್ನು ಕಾಪಾಡಲು ಇದು ಸಹಾಯ ಮಾಡಬಹುದು.

ಮೊಸರು ಮತ್ತು ಮಜ್ಜಿಗೆ ಕೂಡ ಫ್ಯಾಟಿ ಲಿವರ್ ಸಮಸ್ಯೆಯಿರುವವರಿಗೆ ಪ್ರಯೋಜನಕಾರಿಯಾಗಬಹುದು. ಊಟದ ಜೊತೆಗೆ ಇವುಗಳನ್ನು ಸೇವಿಸಬಹುದು. ಆದರೆ ಮನೆಯಲ್ಲಿಯೇ ತಯಾರಿಸಿದ ತಾಜಾ ಮೊಸರಿಗೆ ಆದ್ಯತೆ ನೀಡುವುದು ಉತ್ತಮ.

ಪಾಲಕ್ ಸೊಪ್ಪು, ಎಲೆಕೋಸು, ಬ್ರೊಕೋಲಿ ಮತ್ತು ಹೂಕೋಸು ಸೇರಿದಂತೆ ಹಸಿರು ತರಕಾರಿಗಳಲ್ಲಿ ಕ್ಲೋರೊಫಿಲ್ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ದೇಹದ ಆರೋಗ್ಯವನ್ನು ಕಾಪಾಡಲು ಮತ್ತು ಲಿವರ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಇವುಗಳನ್ನು ಸಲಾಡ್, ಸೂಪ್ ಅಥವಾ ಹಬೆಯಲ್ಲಿ ಬೇಯಿಸಿ ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ.

ಫ್ಯಾಟಿ ಲಿವರ್ ಸಮಸ್ಯೆಯಿರುವವರಿಗೆ ಕಾಫಿ ಕೂಡ ಪ್ರಯೋಜನಕಾರಿಯಾಗಬಹುದು. ವಿಶೇಷವಾಗಿ ಸಕ್ಕರೆ ಸೇರಿಸದ ಬ್ಲ್ಯಾಕ್ ಕಾಫಿಯನ್ನು ಮಿತವಾಗಿ ಸೇವಿಸುವುದು ಲಿವರ್ ಆರೋಗ್ಯಕ್ಕೆ ಸಹಕಾರಿಯಾಗಬಹುದು.