ನೆಮ್ಮದಿಯಿಂದ ನಿಧಾನವಾಗಿ ಊಟ ಮಾಡುವುದು ತುಂಬಾನೇ ಒಳ್ಳೆಯದಾಗಿದ್ದು, ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತವೆ. ಆದರೆ ಇಂದು ಅನೇಕರಿಗೆ ಮೊಬೈಲ್‌ (mobile) ಇಲ್ಲದೆ ಊಟವೇ ಸೇರೋದೇ ಇಲ್ಲ. ಬೇರೆ ಸಮಯ ಮಾತ್ರವಲ್ಲದೆ ಊಟ, ತಿಂಡಿ ಮಾಡುವಾಗಲೂ  ರೀಲ್ಸ್‌, ವಿಡಿಯೋಗಳನ್ನು ಸ್ಕ್ರಾಲ್‌ ಮಾಡುತ್ತಾ ಕುಳಿತುಬಿಡುತ್ತಾರೆ. ಇದರಿಂದ ಟೈಮ್‌ ಪಾಸ್‌ ಆಗ್ಬೋದು ಆದರೆ ಇದು ಆರೋಗ್ಯಕ್ಕೆ ಖಂಡುತವಾಗಿಯೂ ಒಳ್ಳೆಯದಲ್ಲ. ತೀರಾ ಸಾಮಾನ್ಯದಂತೆ ಕಾಣುವ ಈ ಅಭ್ಯಾಸ ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮಗಳನ್ನು ಬೀರುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ:

ಊಟ ಮಾಡುವಾಗ ಮೊಬೈಲ್ ಫೋನ್ ಬಳಸುವುದರಿಂದ ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಾವು ವಿಚಲಿತರಾದಾಗ, ಆಹಾರವನ್ನು ಸರಿಯಾಗಿ ಅಗಿಯುವುದಿಲ್ಲ, ಇದು ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಇದು ಗ್ಯಾಸ್, ಅಜೀರ್ಣ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಲ್ಲದೆ, ಗಮನ ಬೇರೆಡೆ ಸೆಳೆಯುವ ಚಟುವಟಿಕೆಗಳು ನಮ್ಮ ಊಟವನ್ನು ವೇಗವಾಗಿ ತಿಂದು ಮುಗಿಸುವಂತೆ ಮಾಡುತ್ತದೆ, ಇದು ಅತಿಯಾಗಿ ತಿನ್ನುವ ಮತ್ತು ತೂಕ ಹೆಚ್ಚಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮಾನಸಿಕ‌ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ:

ಊಟ ಮಾಡುವಾಗ ಮೊಬೈಲ್ ಫೋನ್ ಬಳಸುವುದರಿಂದ ನಮ್ಮ ಮಾನಸಿಕ ಆರೋಗ್ಯವೂ ಹಾಳಾಗುತ್ತದೆ. ಹೌದು ನಾವು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮ ಅಥವಾ ಫೋನ್ ಕರೆಗಳಲ್ಲಿ ಮುಳುಗಿಹೋಗುತ್ತೇವೆ, ಇದರಿಂದ ನಮ್ಮ ಆಹಾರವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಇದು ನಮ್ಮ ಮಾನಸಿಕ ತೃಪ್ತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ:

ಹೆಚ್ಚು ಹೊತ್ತು ಮೊಬೈಲ್ ಪರದೆಯನ್ನೇ ನೋಡುವುದರಿಂದ ನಮ್ಮ ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಊಟ ಮಾಡುವಾಗಲೂ ನಾವು ಮೊಬೈಲ್‌ ನೋಡ್ತಾ ಕುಳಿತರೆ, ಇದರಿಂದ ಕಣ್ಣಿಗೆ ವಿರಾಮ ಅನ್ನೋದೇ ಸಿಗೋದಿಲ್ಲ. ಇದು ಕಣ್ಣಿನ ಕಿರಿಕಿರಿ, ಆಯಾಸ ಮತ್ತು ದೃಷ್ಟಿ ಮಂದವಾಗುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ, ನಿರಂತರವಾಗಿ ಸ್ಕ್ರೀನ್‌ ನೋಡುವುದರಿಂದ ಕಣ್ಣುಗಳಲ್ಲಿ ಊತ ಉಂಟಾಗಬಹುದು, ಇದು ನಮ್ಮ ಕಣ್ಣುಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಸಾಮಾಜಿಕ ಸಂಪರ್ಕಗಳು ಕಡಿಮೆಯಾಗುತ್ತವೆ:

ಊಟ ಮಾಡುವಾಗ ಮೊಬೈಲ್ ಫೋನ್ ಬಳಸುವುದು ನಮ್ಮ ಸಾಮಾಜಿಕ ಸಂವಹನಗಳ ಮೇಲೂ ಪರಿಣಾಮ ಬೀರುತ್ತದೆ. ಫೋನ್‌ ನೋಡದೆ ಕುಟುಂಬ ಅಥವಾ ಸ್ನೇಹಿತರೊಂದಿಗೆ ಊಟದ ಸಮಯದಲ್ಲಿ ಮಾತನಾಡುವುದರಿಂದ ನಿಮ್ಮವರೊಂದಿಗಿನ ಸಂಬಂಧ ಇನ್ನಷ್ಟು ಗಾಢವಾಗುತ್ತದೆ. ಅದೇ ಮೊಬೈಲ್ ಫೋನ್‌ಗಳಲ್ಲಿ ಮುಳುಗಿದ್ದರೆ, ನಮ್ಮ ಸುತ್ತಮುತ್ತಲಿನವರೊಂದಿಗೆ ಸಂವಹನ ನಡೆಸುವ ಮತ್ತು ಸಂಪರ್ಕ ಸಾಧಿಸುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ. ಇದು ನಮ್ಮ ಸಂಬಂಧಗಳನ್ನು ದುರ್ಬಲಗೊಳಿಸಬಹುದು ಮತ್ತು ಒಂಟಿತನದ ಭಾವನೆಗಳನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್‌ ನೀರು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳು ಅಷ್ಟಿಷ್ಟಲ್ಲ

ತೃಪ್ತಿದಾಯವಾಗಿ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ:

ತಿನ್ನುವುದು ಎಂದರೆ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ರುಚಿಯನ್ನು ಸವಿಯುವುದು ಕೂಡ ಹೌದು. ಹಾಗಾಗಿ ನೆಮ್ಮದಿಯಿಂದ ಕುಳಿತು ಊಟ ಮಾಡಬೇಕು. ಅದೇ ಮೊಬೈಲ್ ಫೋನ್‌ ನೋಡ್ತಾ ಊಟ ಮಾಡುವುದರಿಂದ ಆಹಾರದ ರುಚಿ ಮತ್ತು ಸುವಾಸನೆ ಕಡೆಗೆ ಗಮನ ಹಸರಿಸಲು ಸಾಧ್ಯವಾಗುವುದಿಲ್ಲ, ಇದರಿಂದ ತೃಪ್ತಿದಾಯಕವಾಗಿ ಊಟ ಮಾಡಲು ಕೂಡ ಸಾಧ್ಯವಾಗುವುದಿಲ್ಲ.

ಊಟ ಮಾಡುವಾಗ ಈ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ:

  • ಊಟವನ್ನು ಏಕಾಗ್ರತೆಯಿಂದ ಸೇವಿಸಿ, ಗಮನ ಆಹಾರದ ಮೇಲಿರಲಿ.
  • ಆಹಾರವನ್ನು ಚೆನ್ನಾಗಿ ಜಗಿದು ತಿನ್ನಿರಿ.
  • ಊಟ ಮಾಡುವಾಗ, ಆಹಾರದ ಮೇಲೆ ಮಾತ್ರ ಗಮನಹರಿಸಿ, ಮೊಬೈಲ್ ಫೋನ್‌ನಿಂದ ದೂರವಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ